ಮೇಕೆದಾಟು ಯೋಜನೆ DPR ತಿರಸ್ಕರಿಸಲು ಪ್ರಧಾನಿಗೆ ಪತ್ರ ಬರೆದ ವಿಜಯ್!
CM vijay writes a letter to PM to hold Mekedatu project

ಚೆನ್ನೈ/ಬೆಂಗಳೂರು: ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಜಲಾಶಯ ಯೋಜನೆಯ ಗುದ್ದಲಿ ಪೂಜೆ ನಾನು ಪ್ರಚಾರಕ್ಕಾಗಿ ಅಥವಾ ರಾಜಕೀಯ ಗಿಮಿಕ್‌ಗಾಗಿ ಮಾಡುವುದಿಲ್ಲ. ಅಗತ್ಯವಿರುವ ಎಲ್ಲಾ ಕ್ಲಿಯರೆನ್ಸ್ ಸಿಕ್ಕ ತಕ್ಷಣ ಕಾಮಗಾರಿ ಆರಂಭಿಸುತ್ತೇವೆ” ಎಂಬ ಡಿ.ಕೆ. ಶಿವಕುಮಾರ್ ಹೇಳಿಕೆಗೆ ತಮಿಳುನಾಡು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಈ ಯೋಜನೆಗೆ ಯಾವುದೇ ಕಾರಣಕ್ಕೂ ಅನುಮತಿ ನೀಡಬಾರದು ಎಂದು ಒತ್ತಾಯಿಸಿ ತಮಿಳುನಾಡಿನ ಮುಖ್ಯಮಂತ್ರಿ ಜೋಸೆಫ್ ವಿಜಯ್ ಪ್ರಧಾನಿ ನರೇಂದ್ರ ಮೋದಿಗೆ ಸುದೀರ್ಘ ಪತ್ರ ಬರೆದು ಒತ್ತಡ ಹೇರಿದ್ದಾರೆ.

ರೈತರ ಜೀವನೋಪಾಯಕ್ಕೆ ಅಪಾಯ!
ಡಿ.ಕೆ. ಶಿವಕುಮಾರ್ ಅವರ ಸಾರ್ವಜನಿಕ ಹೇಳಿಕೆಗಳು ಹಾಗೂ ಭೂಮಿ ಪೂಜೆ ಘೋಷಣೆಯು, ಕಾವೇರಿ ನದಿಯನ್ನೇ ನಂಬಿಕೊಂಡಿರುವ ತಮಿಳುನಾಡಿನ ಲಕ್ಷಾಂತರ ರೈತರಲ್ಲಿ ತೀವ್ರ ಆತಂಕ ಮೂಡಿಸಿದೆ. ತಮಿಳುನಾಡಿನ ಒಪ್ಪಿಗೆ ಪಡೆಯದೆ ಯಾವುದೇ ಹೊಸ ಯೋಜನೆಯನ್ನು ಕೈಗೆತ್ತಿಕೊಳ್ಳದಂತೆ ಕರ್ನಾಟಕಕ್ಕೆ ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಸಲಹೆ ನೀಡಬೇಕು. ಕರ್ನಾಟಕ ಸಿದ್ಧಪಡಿಸಿರುವ ಮೇಕೆದಾಟು ಯೋಜನೆಯ ವಿಸ್ತೃತ ಯೋಜನಾ ವರದಿಯನ್ನು (DPR) ತಕ್ಷಣವೇ ತಿರಸ್ಕರಿಸುವಂತೆ ಕೇಂದ್ರ ಜಲಶಕ್ತಿ ಸಚಿವಾಲಯ ಮತ್ತು ಕೇಂದ್ರ ಜಲ ಆಯೋಗದ (CWC) ಅಧಿಕಾರಿಗಳಿಗೆ ಪ್ರಧಾನಿಗಳು ಸೂಚನೆ ನೀಡಬೇಕು ಎಂದು ಪತ್ರದಲ್ಲಿ ಒತ್ತಾಯಿಸಲಾಗಿದೆ.
ತಮಿಳುನಾಡು CM ವಿಜಯ್ ವಾದ!
2018ರ ಸುಪ್ರೀಂ ಕೋರ್ಟ್‌ನ ಅಂತಿಮ ತೀರ್ಪಿನ ಪ್ರಕಾರ, ಮೇಕೆದಾಟು ಯೋಜನೆಯು ಕಾವೇರಿ ಜಲ ವಿವಾದ ನ್ಯಾಯಮಂಡಳಿ ಅನುಮತಿಸಿದ ಪಟ್ಟಿಯಲ್ಲಿಲ್ಲ. ಹೀಗಿದ್ದೂ ಕರ್ನಾಟಕ ಭೂಮಿ ಪೂಜೆ ಘೋಷಿಸಿರುವುದು ಕೋರ್ಟ್ ನಿಂದನೆಯಾಗಿದೆ. ಗಡಿಯ ಮೇಲ್ಭಾಗದಲ್ಲಿ 67.16 ಟಿಎಂಸಿ ಸಂಗ್ರಹಣಾ ಸಾಮರ್ಥ್ಯದ ಜಲಾಶಯ ನಿರ್ಮಿಸುವ ಮೂಲಕ ತಮಿಳುನಾಡಿಗೆ ಹರಿಯಬೇಕಾದ ಅನಿಯಂತ್ರಿತ ಜಲಾನಯನ ಪ್ರದೇಶದ ನೀರನ್ನು ತಡೆಯಲು ಕರ್ನಾಟಕ ಪ್ರಯತ್ನಿಸುತ್ತಿದೆ. ಕೆಳಭಾಗದ ರಾಜ್ಯದ ಹಕ್ಕನ್ನು ಕಸಿಯಲು ಕಾನೂನಿನಲ್ಲಿ ಅವಕಾಶವಿಲ್ಲ. ಈ ಯೋಜನೆಗೆ ಸಂಬಂಧಿಸಿದಂತೆ ಪರಿಸರ ಪರಿಣಾಮದ ಮೌಲ್ಯಮಾಪನ (EIA) ಅಧ್ಯಯನ ನಡೆಸಲು ಕೇಂದ್ರ ಪರಿಸರ ಇಲಾಖೆಯು ಅನುಮತಿ ನೀಡಿಲ್ಲ. ಅಂತರ-ರಾಜ್ಯ ಸಮಸ್ಯೆಗಳಿರುವುದರಿಂದ ಈ ಪ್ರಸ್ತಾವನೆಯನ್ನು ತಜ್ಞರ ಸಮಿತಿಯು ಈ ಹಿಂದೆಯೇ ವಾಪಸ್ ಕಳುಹಿಸಿತ್ತು. ತಮಿಳುನಾಡು ಸರ್ಕಾರದ ತೀವ್ರ ವಿರೋಧದ ನಡುವೆಯೂ ಕೇಂದ್ರ ಜಲ ಆಯೋಗ (CWC) ಕರ್ನಾಟಕದ ಪ್ರಸ್ತಾವನೆಯನ್ನು ಪರಿಗಣಿಸುತ್ತಿರುವುದು ಆಶ್ಚರ್ಯ ತಂದಿದೆ ಎಂದು ವಿಜಯ್ ಅಸಮಾಧಾನ ಹೊರಹಾಕಿದ್ದಾರೆ.
ನಂದು ಗಿಮಿಕ್ ರಾಜಕೀಯವಲ್ಲ- ಯೋಜನೆ ಮಾಡೋದು ಗ್ಯಾರಂಟಿ!
ಇತ್ತ ಡಿ.ಕೆ. ಶಿವಕುಮಾರ್ ತಮಿಳುನಾಡಿನ ವಿರೋಧಕ್ಕೆ ತಲೆಕೆಡಿಸಿಕೊಂಡಂತೆ ಕಾಣುತ್ತಿಲ್ಲ. “ನಾವು ಕೇವಲ ಪ್ರಚಾರಕ್ಕಾಗಿ ಮೇಕೆದಾಟು ಯೋಜನೆಗೆ ಮುಂದಾಗಿಲ್ಲ. ಯೋಜನೆಯನ್ನು ಮರುಪರಿಶೀಲಿಸಿ ಹೊಸ ಸಮಗ್ರ ಯೋಜನಾ ವರದಿಯನ್ನು (DPR) ಸಿದ್ಧಪಡಿಸಿ ಕೇಂದ್ರಕ್ಕೆ ಕಳುಹಿಸಿಕೊಡಲಿದ್ದೇವೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ಮತ್ತು ಕೇಂದ್ರ ಪರಿಸರ ಇಲಾಖೆಯಿಂದ ಅಂತಿಮ ಕ್ಲಿಯರೆನ್ಸ್ ಸಿಕ್ಕ ತಕ್ಷಣ, ಯಾವುದೇ ವಿಳಂಬವಿಲ್ಲದೆ ಅಧಿಕೃತವಾಗಿ ಕಾಮಗಾರಿಯನ್ನು ಆರಂಭಿಸುತ್ತೇವೆ” ಎಂದು ಹೇಳುವ ಮೂಲಕ ತಮ್ಮ ಪಟ್ಟನ್ನು ಮುಂದುವರಿಸಿದ್ದಾರೆ.
ತಮಿಳುನಾಡಿನಲ್ಲಿ ನಟ ವಿಜಯ್ ಮುಖ್ಯಮಂತ್ರಿಯಾಗದ ಮೇಲೆ ಎದುರಾಗಿರುವ ಮೊದಲ ಅತಿ ದೊಡ್ಡ ಅಂತರರಾಜ್ಯ ಜಲವಿವಾದ ಇದಾಗಿದೆ. ರೈತರ ಹಿತರಕ್ಷಣೆಗಾಗಿ ವಿಜಯ್ ಅವರು ನೇರವಾಗಿ ಪ್ರಧಾನಿ ಮೋದಿಯವರ ಮೊರೆ ಹೋಗಿರುವುದರಿಂದ, ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ನೀಡುತ್ತದೆಯೇ ಅಥವಾ ತಮಿಳುನಾಡಿನ ಒತ್ತಡಕ್ಕೆ ಮಣಿಯುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.
#FreedomTV #MekedatuProject #CauveryWaterDispute #JosephVijay #DKShivakumar #NarendraModi #KarnatakaGovernment #TamilNaduGovernment #MekedatuDPR #CauveryRiver #BreakingNews #KarnatakaVsTamilNadu #PoliticalWar




