MYSORE

HDK ಸದ್ದಡಗಿಸಲು ಕಾಂಗ್ರೆಸ್ SIT ಬಾಣ-ಸಾರಾ ಮಹೇಶ್ ಸಿಟ್ಟು!

State govt targets HDK through SIT- slams Sara Mahesh

ಮೈಸೂರು: ರಾಜ್ಯ ರಾಜಕಾರಣದಲ್ಲಿ ಎಸ್‌ಐಟಿ ತನಿಖೆ ಅಬ್ಬರ ಜೋರಾಗಿದೆ. ಜೆಡಿಎಸ್ ಪ್ರಭಾವಿ ನಾಯಕ ಹಾಗೂ ಮಾಜಿ ಸಚಿವ ಸಾ.ರಾ.ಮಹೇಶ್ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರನ್ನು ಗುರಿಯಾಗಿಸಿಕೊಂಡು ದ್ವೇಷದ ರಾಜಕಾರಣ ಮಾಡಲಾಗುತ್ತಿದೆ” ಎಂದು ಆರೋಪಿಸಿದ್ದು, ಕಾಂಗ್ರೆಸ್ ನಾಯಕರ ಭ್ರಷ್ಟಾಚಾರ ಮಿತಿಮೀರಿದೆ ಎಂದು ಹರಿಹಾಯ್ದಿದ್ದಾರೆ.

ಏಕವಚನ ಬೇಡ- ಯಾರೂ ಇಲ್ಲಿ ಸತ್ಯ ಹರಿಶ್ಚಂದ್ರರಲ್ಲ!


ಮಾಧ್ಯಮಗಳೊಂದಿಗೆ ಮಾತನಾಡಿದ ಸಾ.ರಾ.ಮಹೇಶ್, ಕಾಂಗ್ರೆಸ್ ನಾಯಕರು ಹೆಚ್‌ಡಿಕೆ ವಿರುದ್ಧ ಬಳಸುತ್ತಿರುವ ಭಾಷೆಯ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. “ರಾಜಕಾರಣದಲ್ಲಿ ಯಾರ ಬಗ್ಗೆಯಾಗಲಿ ಮಾತನಾಡುವಾಗ ಏಕ ವಚನದಲ್ಲಿ ಮಾತನಾಡಬಾರದು. ಇಲ್ಲಿ ಯಾರೂ ಕೂಡ ನೂರಕ್ಕೆ ನೂರು ಪ್ರಾಮಾಣಿಕರಲ್ಲ‌. ನಾವೆಲ್ಲರೂ ಗಾಜಿನ ಮನೆಯಲ್ಲಿ ಇದ್ದೇವೆ ಎಂಬ ಸತ್ಯವನ್ನು ಮೊದಲು ಒಪ್ಪಿಕೊಳ್ಳಬೇಕು” ಎಂದು ಟಾಂಗ್ ನೀಡಿದರು.”ಇಡೀ ರಾಜ್ಯದ ಇತಿಹಾಸದಲ್ಲಿ ಬಹಳಷ್ಟು ರಾಜಕಾರಣಿಗಳು ಜಮೀನು ಒತ್ತುವರಿ ಮಾಡಿರುವ ಪ್ರಕರಣಗಳು ಆಗಾಗ್ಗೆ ಬೆಳಕಿಗೆ ಬರುತ್ತಲೇ ಇವೆ. ಆದರೆ ಇತಿಹಾಸದಲ್ಲೇ ಇಂತಹ ಯಾವುದೇ ಪ್ರಕರಣವನ್ನು ಸರ್ಕಾರ ಎಸ್‌ಐಟಿಗೆ (SIT) ಕೊಟ್ಟಿರಲಿಲ್ಲ. ಈಗ ಕೇವಲ ಎಚ್.ಡಿ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದಂತೆ ಮಾತ್ರ ಎಸ್‌ಐಟಿಗೆ ವಹಿಸಿರುವುದು ಇದು ಸ್ಪಷ್ಟವಾಗಿ ದ್ವೇಷದ ರಾಜಕಾರಣ ಎಂಬುದನ್ನು ತೋರಿಸುತ್ತದೆ” ಎಂದು ಆಕ್ರೋಶ ಹೊರಹಾಕಿದರು.

ಎಚ್‌ಡಿಕೆ ಆಲೂಗೆಡ್ಡೆ VS ಕೆ.ರಾಜು ಭತ್ತ!
ಎಚ್.ಡಿ.ಕುಮಾರಸ್ವಾಮಿ ಅವರ ಆದಾಯದ ಕುರಿತು ಕಾಂಗ್ರೆಸ್ ನಾಯಕರು ಹಗುರವಾಗಿ ಮಾತನಾಡಿರುವುದಕ್ಕೆ ಸಾ.ರಾ.ಮಹೇಶ್ ತಿರುಗೇಟು ನೀಡಿದ್ದಾರೆ. “ಕುಮಾರಸ್ವಾಮಿ ಅವರು ರಾಜಕೀಯಕ್ಕೆ ಬರುವ ಮುನ್ನವೇ ಯಶಸ್ವಿ ಸಿನಿಮಾಗಳ ನಿರ್ಮಾಣ ವಿತರಕರಾಗಿದ್ದರು. ಇವರೇನು ಆಲೂಗೆಡ್ಡೆ ಬೆಳೆದು ಸಂಪಾದಿಸಿದ್ದಾರಾ ಎಂದು ವ್ಯಂಗ್ಯವಾಡುವ ಕೆ. ರಾಜು ಸೇರಿ ಕಾಂಗ್ರೆಸ್ ನಾಯಕರುಗಳೇನು ಕೇವಲ ಭತ್ತ ಬೆಳೆದು ಇಷ್ಟೊಂದು ಆಸ್ತಿ ಮಾಡಿದ್ದಾರಾ? ಕಾಂಗ್ರೆಸ್ ನವರು ಮೊದಲು ಜನರನ್ನು ತಪ್ಪು ದಾರಿಗೆ ಎಳೆಯುವ ಕೆಲಸವನ್ನು ಬಿಡಬೇಕು. ಜೆಡಿಎಸ್ ಗಿಂತ ಅತಿ ಹೆಚ್ಚು ಭ್ರಷ್ಟರು ಕಾಂಗ್ರೆಸ್‌ನಲ್ಲಿ ತುಂಬಿಕೊಂಡಿದ್ದಾರೆ.” ಎಂದು ಕಿಡಿಕಾರಿದರು.

ಮತದಾರರ ಪಟ್ಟಿ ಪರಿಷ್ಕರಣೆ (SIR) ಗೆ ಕಾಂಗ್ರೆಸ್ ನಡುಕ!
“ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸುತ್ತಿರುವುದು ಇಡೀ ರಾಜ್ಯದಲ್ಲಿ ದೊಡ್ಡ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಹಾಗಾದರೆ ಕಾಂಗ್ರೆಸ್ ನವರು 2023 ರ ವಿಧಾನಸಭಾ ಚುನಾವಣೆಯಲ್ಲಿ ಅನೈತಿಕ ಮಾರ್ಗದಲ್ಲಿ ಜಯಗಳಿಸಿದ್ದರೇ ಎಂಬ ಅನುಮಾನ ಮೂಡುತ್ತಿದೆ. ಮತದಾರರ ಪಟ್ಟಿ ಪರಿಷ್ಕರಣೆ ಎಂದ ತಕ್ಷಣ ಕಾಂಗ್ರೆಸ್ಸಿಗರಿಗೆ ಭಯವೇಕೆ. ಎಂದರು.
ನಿಖಿಲ್ ಸೋಲಿನ ಚರ್ಚೆ- “ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರ ಸೋಲಿನ ಬಗ್ಗೆ ಕಾಂಗ್ರೆಸ್ ಲೇವಡಿ ಮಾಡುತ್ತಿದೆ. ಆದರೆ ನಿಖಿಲ್ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಬರೋಬ್ಬರಿ ಐದುವರೆ ಲಕ್ಷ ಮತಗಳನ್ನು ಪಡೆದಿದ್ದಾರೆ. ಅಷ್ಟೊಂದು ಬೃಹತ್ ಪ್ರಮಾಣದ ಮತಗಳನ್ನು ಮಂಡ್ಯದಲ್ಲಿ ಕಾಂಗ್ರೆಸ್‌ನ ಯಾವುದೇ ನಾಯಕನೂ ಪಡೆದಿಲ್ಲ” ಎಂದು ನಿಖಿಲ್ ಪರ ಬ್ಯಾಟ್ ಬೀಸಿದರು.

ರಾಜ್ಯದ ಜನರಿಗೆ ಎಲ್ಲವೂ ಗೊತ್ತಿದೆ. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರ ಮತ್ತು ದ್ವೇಷದ ರಾಜಕಾರಣಕ್ಕೆ ಮುಂದಿನ ಚುನಾವಣೆಯಲ್ಲಿ ರಾಜ್ಯದ ಮತದಾರರೇ ಸೂಕ್ತ ನಿರ್ಧಾರ ಕೈಗೊಂಡು ತಕ್ಕ ಪಾಠ ಕಲಿಸಲಿದ್ದಾರೆ ಎಂದು ಸಾ.ರಾ.ಮಹೇಶ್ ಭವಿಷ್ಯ ನುಡಿದರು.

#FreedomTV #SaRaMahesh #HDKumaraswamy #Mysuru #JDS #CongressVsJDS #NikhilKumaraswamy #KarnatakaPolitics #SITInvestigation #PoliticalWar

Comments (0)

Your email address will not be published. Required fields are marked *

Back to top button