HUBLIರಾಜಕೀಯ

ಇಂಧನ ಬೆಲೆ ಏರಿಕೆ; ಕೇಂದ್ರ ಸರ್ಕಾರ ನಾಲಾಯಕ್ಕು- MLC ಜಕ್ಕಪ್ಪನವರ!

MLC Jakkappanavar slams Central govt on Fuel hike

ಹುಬ್ಬಳ್ಳಿ: ದೇಶದಲ್ಲಿ ಕೇವಲ ಹತ್ತು ದಿನಗಳ ಅವಧಿಯಲ್ಲಿ ಮೂರನೇ ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರದ ನಿರ್ಧಾರವನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಕೇಂದ್ರ ಬಿಜೆಪಿ ಸರ್ಕಾರವು ಬೆಲೆ ಏರಿಕೆ ನಿಯಂತ್ರಿಸುವಲ್ಲಿ ಸಂಪೂರ್ಣವಾಗಿ ವಿಫಲವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಎಫ್. ಹೆಚ್. ಜಕ್ಕಪ್ಪನವರ ಕಿಡಿಕಾರಿದ್ದಾರೆ. ಈ ಕುರಿತು ಹುಬ್ಬಳ್ಳಿಯಲ್ಲಿ ‘ಫ್ರೀಡಂ ಟಿವಿ’ಯೊಂದಿಗೆ ಪ್ರತ್ಯೇಕವಾಗಿ ಮಾತನಾಡಿದ ಅವರು, ಕೇಂದ್ರದ ಜನವಿರೋಧಿ ನೀತಿಗಳು ಹಾಗೂ ಮುಸ್ಲಿಂ ವಿರೋಧಿ ಧೋರಣೆಯೇ ಇಂದಿನ ಆರ್ಥಿಕ ಸಂಕಷ್ಟಕ್ಕೆ ನೇರ ಕಾರಣ ಎಂದು ಗಂಭೀರ ಆರೋಪ ಮಾಡಿದ್ದಾರೆ.

ಮುಸ್ಲಿಂ ವಿರೋಧಿ ಮೋದಿ ಸರ್ಕಾರ!


ಕೇಂದ್ರದ ಬಿಜೆಪಿ ಸರ್ಕಾರದ ಮುಸ್ಲಿಂ ವಿರೋಧಿ ನೀತಿ ಕೇವಲ ದೇಶದ ಒಳಗಷ್ಟೇ ಅಲ್ಲ,ಅಂತರರಾಷ್ಟ್ರೀಯ ಮಟ್ಟದಲ್ಲೂ ನಕಾರಾತ್ಮಕ ಪರಿಣಾಮ ಬೀರುತ್ತಿದೆ ಎಂದು ಜಕ್ಕಪ್ಪನವರ ಆತಂಕ ವ್ಯಕ್ತಪಡಿಸಿದರು.”ಇಸ್ರೇಲ್‌ನಿಂದ ನಮ್ಮ ದೇಶಕ್ಕೆ ದೊಡ್ಡ ಮಟ್ಟದ ಯಾವುದೇ ಸಹಾಯ ಸಿಗುತ್ತಿಲ್ಲ. ಆದರೆ ಇರಾನ್ ಸೇರಿದಂತೆ ಹಲವು ಮುಸ್ಲಿಂ ರಾಷ್ಟ್ರಗಳು ಸದಾ ಭಾರತದ ಪರವಾಗಿ ನಿಂತಿದ್ದವು ನಿಂತಿವೆ ಮುಂದೆಯೂ ನಿಲ್ಲುತ್ತವೆ. ಅಂದಿನಿಂದಲೂ ಇಂಧನ ಸೇರಿದಂತೆ ಪ್ರಮುಖ ಅಗತ್ಯತೆಗಳನ್ನು ಭಾರತಕ್ಕೆ ಪೂರೈಸುತ್ತಿರುವ ಮಿತ್ರ ದೇಶಗಳಾಗಿವೆ. ಇಂತಹ ಪರಿಸ್ಥಿತಿಯಲ್ಲಿ ಕೇಂದ್ರದ ಆಡಳಿತಗಾರರು ಮುಸ್ಲಿಂ ವಿರೋಧಿ ನೀತಿ ಅನುಸರಿಸುತ್ತಿರುವುದರಿಂದ ಅಂತರರಾಷ್ಟ್ರೀಯ ಮಟ್ಟದ ಸಂಬಂಧಗಳ ಮೇಲೆ ವಿಪರೀತ ಹೊಡೆತ ಬಿದ್ದು, ಇಂಧನ ದರ ಏರಿಕೆಯಾಗುತ್ತಿದೆ. ಆರ್‌ಎಸ್ಎಸ್ ನೇತೃತ್ವದ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದೇ ಈ ಎಲ್ಲಾ ಬೆಲೆ ಏರಿಕೆಗೆ ಮುಖ್ಯ ಕಾರಣ” ಎಂದು ಅವರು ನೇರವಾಗಿ ಚಾಟಿ ಬೀಸಿದರು.

ಅಂದು ಪೆಟ್ರೋಲ್ ರೂ.60 ಇಂದು ಸೆಂಚುರಿ!
ಯುಪಿಎ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಕೇವಲ 60 ರಿಂದ 70 ರೂಪಾಯಿ ಆಸುಪಾಸಿನಲ್ಲಿತ್ತು. ಆದರೆ ಬಿಜೆಪಿ ಅಧಿಕಾರಕ್ಕೆ ವಕ್ಕರಿಸಿದ ನಂತರ ನಿರಂತರವಾಗಿ ಬೆಲೆ ಏರಿಕೆ ಮಾಡುತ್ತಾ ಬಂದ ಪರಿಣಾಮ, ಇಂದು ಪೆಟ್ರೋಲ್ ದರ 100 ರೂಪಾಯಿ ಗಡಿ ದಾಟಿದೆ.ಇಂಧನ ದರ ಏರಿಕೆಯು ಕೇವಲ ಸಾರಿಗೆಗೆ ಸೀಮಿತವಾಗಿಲ್ಲ; ಇದು ನೇರವಾಗಿ ಉತ್ಪಾದನಾ ಕ್ಷೇತ್ರ ಹಾಗೂ ದಿನಬಳಕೆಯ ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಇದರಿಂದಾಗಿ ದೇಶದ ಕೋಟ್ಯಂತರ ಮಧ್ಯಮ ವರ್ಗದ ಹಾಗೂ ಬಡ ಕುಟುಂಬಗಳು ತೀವ್ರ ಸಂಕಷ್ಟಕ್ಕೆ ಸಿಲುಕಿ ಬೀದಿಗೆ ಬೀಳುತ್ತಿವೆ. ಬೆಲೆ ಏರಿಕೆಯ ಚಾಟಿ ಏಟಿನಿಂದ ಮಧ್ಯಮ ವರ್ಗದ ಜನ ತತ್ತರಿಸಿದ್ದು ಮೋದಿ ಸರ್ಕಾರಕ್ಕೆ ಹಿಡಿಶಾಪ ಹಾಕುತ್ತಿದ್ದಾರೆ.

ಹಿಂದೆ ಬೆಲೆ ಏರಿಕೆಯಾದಾಗ No WAR- ಜಕ್ಕಪ್ಪನವರ!
ಸದ್ಯದ ಇಂಧನ ದರ ಏರಿಕೆಗೆ ಜಾಗತಿಕ ಯುದ್ಧದ ವಾತಾವರಣವನ್ನು ನೆಪವಾಗಿ ಬಳಸಿಕೊಳ್ಳುತ್ತಿರುವ ಕೇಂದ್ರದ ನಡೆಯನ್ನು ಜಕ್ಕಪ್ಪನವರ ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. “ಈಗ ಯುದ್ಧದ ನೆಪ ಹೇಳಿ ಬೆಲೆ ಏರಿಕೆ ಸಮರ್ಥಿಸಿಕೊಳ್ಳಲಾಗುತ್ತಿದೆ. ಆದರೆ ಈ ಹಿಂದೆ ದೇಶದಲ್ಲಿ ಸರಣಿ ಬೆಲೆ ಏರಿಕೆಯಾದಾಗ ಯಾವ ಯುದ್ಧ ಇತ್ತು?” ಎಂದು ಅವರು ಪ್ರಶ್ನಿಸಿದರು.

ಅಂಬಾನಿ-ಅದಾನಿ ಪ್ರಗತಿಗೆ ಮೋದಿ ಜಪ!
ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸ ಹಾಗೂ ದೇಶದ ಆರ್ಥಿಕ ನೀತಿಗಳ ವಿರುದ್ಧ ಹರಿಹಾಯ್ದ ಜಕ್ಕಪ್ಪನವರ, ಪ್ರಧಾನಿಗಳಿಗೆ ದೇಶದ ಜನಸಾಮಾನ್ಯರ ಹಿತಕ್ಕಿಂತ ಕಾರ್ಪೊರೇಟ್ ಮಿತ್ರರಾದ ಅಂಬಾನಿ ಮತ್ತು ಅದಾನಿ ಅವರ ಅಭಿವೃದ್ಧಿಯೇ ಮುಖ್ಯವಾಗಿದೆ ಎಂದು ಆರೋಪಿಸಿದರು.

“ಪ್ರಧಾನಿಯವರು ವಿದೇಶದಲ್ಲಿ ಮಜಾ ಮಾಡಿಕೊಂಡು ದೇಶದ ಜನತೆಗೆ ಇಂಧನವನ್ನು ‘ಮಿತವಾಗಿ ಬಳಸಿ’ ಎಂದು ಉಪದೇಶ ಮಾಡುವುದು ಎಷ್ಟು ಸರಿ? ಪ್ರಧಾನಿಗಳ ಇಂತಹ ಜನವಿರೋಧಿ ನೀತಿಗಳಿಂದಾಗಿ ದೇಶದ ಜನ ದಿನನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ದೇಶದ ಜನತೆ ಎಲ್ಲವನ್ನೂ ಗಮನಿಸುತ್ತಿದ್ದು, ಮುಂಬರುವ ದಿನಗಳಲ್ಲಿ ಈ ಸರ್ಕಾರಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ” ಎಂದು ಎಫ್. ಹೆಚ್. ಜಕ್ಕಪ್ಪನವರ ಎಚ್ಚರಿಸಿದ್ದಾರೆ.

#FreedomTV #Hubballi #MLCFHJakappanavar #FuelPriceHike #PetrolDieselPrice #CentralGovernment #BJP #CongressVSCentral #MiddleClassCrisis #Inflation #AdaniAmbani #KarnatakaNews #HubliNews

Comments (0)

Your email address will not be published. Required fields are marked *

Back to top button