ದೇಶ/ವಿದೇಶರಾಜಕೀಯ

ಸಚಿವ ಸಂಪುಟದ ಕಾವು ದೆಹಲಿಗೆ ಶಿಫ್ಟ್ – ಶಾಸಕರಿಂದ ರೆಡಿ ಸ್ಟೆಡಿ ಗೋ!

MLAs rush to delhi for the minister posts in karnataka

ಬೆಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸಂಪುಟ ಪುನರ್ರಚನೆ ಕದನ ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿದೆ. ಸಚಿವ ಸ್ಥಾನಕ್ಕಾಗಿ ಶಾಸಕರ ಬಿಪಿ ಏರುತ್ತಿದ್ದು ಹೈಕಮಾಂಡ್ ಮೇಲೆ ಒತ್ತಡ ಹೇರಲು ಶಾಸಕರು ತಂಡೋಪತಂಡವಾಗಿ ದೆಹಲಿ ವಿಮಾನ ಏರಲು ಸಜ್ಜಾಗುತ್ತಿದ್ದಾರೆ. ಕೈ ಪಾಳಯದಲ್ಲಿ ಈಗ ಭಿನ್ನಮತ ಮತ್ತು ಲಾಬಿ ರಾಜಕೀಯದ ಮೇಲಾಟ ಬಹಳ ಜೋರಾಗಿದೆ. “ಈಗ ಸುಮ್ಮನಿದ್ದರೆ ಮತ್ತೆಂದೂ ಸಚಿವ ಸ್ಥಾನ ಸಿಕ್ಕೋದಿಲ್ಲ “ ಎಂಬ ಆತಂಕಕ್ಕೆ ಬಿದ್ದಿರುವ ಶಾಸಕರು, ಮುಂದಿನ ತಿಂಗಳೇ ಸಂಪುಟ ಪುನಾರಚನೆ ಮಾಡಬೇಕು ಎಂದು ಪಟ್ಟು ಹಿಡಿಯಲು ನಿರ್ಧರಿಸಿದ್ದು ದೆಹಲಿಯ ಹೈಕಮಾಂಡ್ ಕದ ತಟ್ಟಲು ಗ್ಯಾಂಗ್ ಗಳಲ್ಲಿ ಹೊರಟಿದ್ದಾರೆ.

ಲಾಬಿಯ ಹಿಂದೆ ಕೃಷ್ಣಬೈರೇಗೌಡ!


ನಿನ್ನೆ ತಡರಾತ್ರಿ ಸಚಿವ ಕೃಷ್ಣಬೈರೇಗೌಡರ ನೇತೃತ್ವದಲ್ಲಿ ನಾಲ್ಕೈದು ಶಾಸಕರ ತಂಡವೊಂದು ಕಾಂಗ್ರೆಸ್ ವರಿಷ್ಠರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಈ ನಿಯೋಗದಲ್ಲಿ ಶಾಸಕರಾದ ರಿಜ್ವಾನ್ ಅರ್ಷದ್, ಯಾಸಿರ್ ಖಾನ್ ಪಠಾಣ್, ಶ್ರೀನಿವಾಸ್ ಮಾನೆ ಹಾಗೂ ಖನಿಜಾ ಫಾತಿಮಾ ಇದ್ದರು ಎನ್ನಲಾಗಿದೆ.ವಿಶೇಷವೆಂದರೆ, ಈ ಭೇಟಿಯ ವೇಳೆ ಶಾಸಕರಾದ ಶ್ರೀನಿವಾಸ್ ಮಾನೆ ಹಾಗೂ ರಿಜ್ವಾನ್ ಅರ್ಷದ್ ಅವರಿಗೆ ಸಚಿವ ಸ್ಥಾನ ನೀಡುವಂತೆ ನಿಯೋಗದಲ್ಲಿದ್ದ ಉಳಿದ ಮೂವರು ಶಾಸಕರು ವರಿಷ್ಠರ ಮುಂದೆ ಪ್ರಬಲ ಬ್ಯಾಟಿಂಗ್ ನಡೆಸಿದ್ದಾರೆ. ಅರ್ಹ ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ಕಲ್ಪಿಸಬೇಕು ಎಂದು ವರಿಷ್ಠರ ಮೇಲೆ ತೀವ್ರ ಬೇಡಿಕೆ ಇಡಲಾಗಿದೆ.

ಅಶೋಕ್ ಪಟ್ಟಣ್, ಗೋಪಾಲಕೃಷ್ಣ ಬೇಳೂರು ಫ್ಲೈಟ್ ಫಿಕ್ಸ್!
ಒಂದು ಕಡೆ ನಿನ್ನೆ ಕೃಷ್ಣಬೈರೇಗೌಡರ ಟೀಂ ಭೇಟಿ ಬೆನ್ನಲ್ಲೇ, ಮುಂದಿನ ವಾರ ಮತ್ತಷ್ಟು ಶಾಸಕರ ಗುಂಪು ದೆಹಲಿ ದಂಡಯಾತ್ರೆಗೆ ಸಿದ್ಧತೆ ಮಾಡಿಕೊಂಡಿದೆ. ಮೇ 26 ರಂದು ಶಾಸಕ ಅಶೋಕ್ ಪಟ್ಟಣ್ ನೇತೃತ್ವದ ಶಾಸಕರ ದಂಡು ದೆಹಲಿಗೆ ಪ್ರಯಾಣ ಬೆಳೆಸಲಿದೆ. ಈ ನಿಯೋಗವು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಸಂಘಟನಾ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರಲು ತುದಿಗಾಲಲ್ಲಿ ನಿಂತಿದೆ. ಅಶೋಕ್ ಪಟ್ಟಣ್ ಅವರ ಜೊತೆಯಲ್ಲೇ ಶಾಸಕ ಬೇಳೂರು ಗೋಪಾಲಕೃಷ್ಣ ನೇತೃತ್ವದಲ್ಲೂ ಮತ್ತೊಂದು ಶಾಸಕರ ತಂಡ ದೆಹಲಿಗೆ ಹಾರಲು ವಿಮಾನವನ್ನು ಬುಕ್ ಮಾಡಿವೆ.

ಹಿರಿಯರ ಮಾಸ್ಟರ್ ಪ್ಲಾನ್- ಬಂಗಾರಪೇಟೆ ನಾರಾಯಣಸ್ವಾಮಿ, ಷಡಕ್ಷರಿ, ಪುಟ್ಟರಂಗಶೆಟ್ಟಿ ಹಾಗೂ ಚಳ್ಳಕೆರೆ ರಘುಮೂರ್ತಿ ಅವರನ್ನೊಳಗೊಂಡ ಹಿರಿಯ ಶಾಸಕರ ತಂಡವೂ ಕೂಡ ನಾವು ಯಾರ್ಗೂ ಕಮ್ಮೀ ಇಲ್ಲ ನಮ್ಮ ತಾಕತ್ ಅಂದ್ರೆ ಸುಮ್ನೇ ಅಲ್ಲ ಎನ್ನುತ್ತಾ ಪ್ರತ್ಯೇಕವಾಗಿ ದೆಹಲಿಗೆ ತೆರಳಿ ಹೈಕಮಾಂಡ್ ಮೇಲೆ ಸಚಿವ ಸ್ಥಾನಗಳಿಗಾಗಿ ಒತ್ತಡ ತರಲು ತೀರ್ಮಾನಿಸಿದೆ.

ಈಗಿಲ್ಲದಿದ್ದರೆ ಇನ್ಯಾವಾಗ- ಶಾಸಕರಲ್ಲಿ ಆತಂಕ!
ಲೋಕಸಭೆ ಚುನಾವಣೆ ಪ್ರಕ್ರಿಯೆ ಮುಗಿಯುತ್ತಿದ್ದಂತೆ ಸಚಿವ ಸ್ಥಾನಕ್ಕಾಗಿ ಕಾಯುತ್ತಿದ್ದ ಶಾಸಕರಲ್ಲಿ ಈಗ ಚಡಪಡಿಕೆ ಹೆಚ್ಚಾಗಿದೆ. ಒಂದು ವೇಳೆ ಈಗಲೇ ವರಿಷ್ಠರ ಮುಂದೆ ಬೇಡಿಕೆ ಇಡದಿದ್ದರೆ ಅವಕಾಶ ಕೈತಪ್ಪಿ ಹೋಗುತ್ತದೆ ಎಂಬ ಭೀತಿ ಶಾಸಕರನ್ನು ಕಾಡುತ್ತಿದೆ. ಹಾಗಾಗಿ, ಬರುವ ಜೂನ್ ತಿಂಗಳಲ್ಲೇ ಯಾವುದೇ ಪರಿಸ್ಥಿತಿಯಲ್ಲೂ ಸಚಿವ ಸಂಪುಟ ಪುನರ್ರಚನೆ ಮಾಡಲೇಬೇಕು ಎಂದು ಶಾಸಕರು ಪಟ್ಟು ಹಿಡಿದಿದ್ದಾರೆ. ಮುಂಬರುವ ದಿನಗಳಲ್ಲಿ ಈ ದೆಹಲಿ ರಣತಂತ್ರ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದುನೋಡಬೇಕಿದೆ.

#FreedomTV #KarnatakaPolitics #CongressCabinetReshuffle #DelhiLobby #KrishnaByreGowda #AshokPattan #MallikarjunKharge #KCVenugopal #KarnatakaCongress #SiddaramaiahGovt #Siddaramaiah #DKShivakumar

Comments (0)

Your email address will not be published. Required fields are marked *

Back to top button