BELAGAVIbengaluruಕ್ರೈಂ ಸ್ಟೋರಿ

4,500 ಕೋಟಿ ಹಗರಣ – ಸ್ಯಾಂಡಲ್ ವುಡ್ ನಂಟು!

kannada cine actors link in Shivam associates scam

ಬೆಳಗಾವಿ/ಬೆಂಗಳೂರು: ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿರುವ ಬೆಳಗಾವಿಯ ‘ಶಿವಂ ಅಸೋಸಿಯೇಟ್ಸ್’ ಸಂಸ್ಥೆಯ 4,500 ಕೋಟಿ ರೂಪಾಯಿ ಹಗರಣದ ತನಿಖೆಯನ್ನು ಅಪರಾಧ ತನಿಖಾ ಇಲಾಖೆ ತೀವ್ರಗೊಳಿಸಿದೆ. ಮುಖ್ಯ ಆರೋಪಿ ಶಿವಾನಂದ ನೀಲಣ್ಣವರ್‌ನನ್ನು ಕಠಿಣ ವಿಚಾರಣೆಗೆ ಒಳಪಡಿಸಿದ ಬೆನ್ನಲ್ಲೇ, ಸ್ಯಾಂಡಲ್‌ವುಡ್‌ನ ಪ್ರಮುಖ ತಾರೆಯರು ಕೋಟ್ಯಂತರ ರೂಪಾಯಿ ಕಪ್ಪುಹಣದ ಹೂಡಿಕೆ ಮಾಡಿರುವ ರಹಸ್ಯ ಮಾಹಿತಿ ಲಭಿಸಿದೆ.ಈ ಹಗರಣದಲ್ಲಿ ಭಾಗಿಯಾಗಿರುವ ಅಕ್ರಮಕ್ಕೆ ಸಹಕಾರ ನೀಡಿದ ಬ್ಯಾಂಕ್ ಮ್ಯಾನೇಜರ್ ಗಳಿಗೆ ಶಿಕ್ಷೆ ಖಾಯಂ ಆಗುವ ಸಾಧ್ಯತೆಯಿದೆ.

ಸ್ಯಾಂಡಲ್‌ವುಡ್ ತಾರೆಯರು ಯಾರು?


ಮೂಲತಃ ಐಸ್‌ಕ್ರೀಮ್ ಮಾರುತ್ತಿದ್ದ ಶಿವಾನಂದ ನೀಲಣ್ಣವರ್, ಸಾರ್ವಜನಿಕರಿಂದ ಸಾವಿರಾರು ಕೋಟಿ ಲೂಟಿ ಹೊಡೆದ ಬಳಿಕ ಸಿನಿಮಾ ರಂಗದಲ್ಲೂ ಹಣ ಹೂಡಿಕೆ ಮಾಡಿದ್ದ ಎನ್ನಲಾಗಿದೆ. ಅಲ್ಲದೆ ತಾನು ಆಯೋಜಿಸುತ್ತಿದ್ದ ಭವ್ಯ ಕಾರ್ಯಕ್ರಮಗಳಿಗೆ ಸ್ಯಾಂಡಲ್‌ವುಡ್ ತಾರೆಯರನ್ನು ಕರೆಸಿ ಶ್ರೀಮಂತಿಕೆಯ ವೈಭವ ಪ್ರದರ್ಶಿಸುತ್ತಿದ್ದ ಎನ್ನಲಾಗಿದೆ. ಬೆಳಗಾವಿ ಉತ್ಸವ ಹಾಗೂ ಕಡೂರಿನಲ್ಲಿ ನೀಲಣ್ಣವರ್ ಆಯೋಜಿಸಿದ್ದ ಅದ್ದೂರಿ ಕಾರ್ಯಕ್ರಮಗಳಲ್ಲಿ ಖ್ಯಾತ ನಟ-ನಟಿಯರು ಭಾಗವಹಿಸಿದ್ದರು.ಈ ಕಾರ್ಯಕ್ರಮಗಳಿಗೆ ಹಾಜರಾಗಲು ಹಾಗೂ ಪ್ರಚಾರ ನೀಡುವುದಕ್ಕಾಗಿ ಸಿನಿತಾರೆಯರಿಗೆ ಶಿವಾನಂದ ನೀಲಣ್ಣವರ್ ಈ ಹಗರಣದ ಹಣದಿಂದಲೇ ಭಾರಿ ಮೊತ್ತದ ಸಂಭಾವನೆ ನೀಡಿದ್ದ ಎನ್ನಲಾಗಿದೆ. ಸದ್ಯ ಸಿಐಡಿ ತನಿಖಾ ವ್ಯಾಪ್ತಿಯಲ್ಲಿ ಸ್ಯಾಂಡಲ್‌ವುಡ್‌ನ ಸ್ಟಾರ್ ನಟರಾದ ಡಾಲಿ ಧನಂಜಯ, ವಸಿಷ್ಠ ಸಿಂಹ, ಸತೀಶ್ ನಿನಾಸಂ ಹಾಗೂ ನಟಿಯರಾದ ರಾಗಿಣಿ ದ್ವಿವೇದಿ ಮತ್ತು ಸಪ್ತಮಿ ಗೌಡ ಇದ್ದಾರೆ ಎನ್ನಲಾಗಿದ್ದು, ಇವರಿಗೆ ಶೀಘ್ರದಲ್ಲೇ ವಿಚಾರಣೆಗೆ ಹಾಜರಾಗುವಂತೆ ಸಿಐಡಿ ನೋಟಿಸ್ ನೀಡಲಿದೆ.

ಕಾಣದಂತಿದ್ದ 15 ಬ್ಯಾಂಕ್ ಖಾತೆಗಳು ಪತ್ತೆ-ಭಾರಿ ಮೊತ್ತ!
ಹಣ ವರ್ಗಾವಣೆಯ ಜಾಡು ಹಿಡಿದು ಹೊರಟಿರುವ ಸಿಐಡಿ ಅಧಿಕಾರಿಗಳಿಗೆ ಶಿವಾನಂದ ನೀಲಣ್ಣವರ್‌ಗೆ ಸೇರಿದ 15 ರಹಸ್ಯ ಬ್ಯಾಂಕ್ ಖಾತೆಗಳು ಪತ್ತೆಯಾಗಿವೆ. ಒಂದೊಂದು ಖಾತೆಯನ್ನು ಪರಿಶೀಲಿಸಿದಾಗ ಅಧಿಕಾರಿಗಳೇ ದಂಗಾಗಿದ್ದಾರೆ. ಒಂದೊಂದು ಖಾತೆಯಲ್ಲಿ ತಲಾ 100 ಕೋಟಿ, 50 ಕೋಟಿ, 80 ಕೋಟಿ, 20 ಕೋಟಿ ಹಾಗೂ 8 ಕೋಟಿ ರೂಪಾಯಿಗಳವರೆಗೂ ಭಾರಿ ಮೊತ್ತದ ಹಣ ಪತ್ತೆಯಾಗಿದೆ.ಸದ್ಯ ಸಿಐಡಿ ಈ ಎಲ್ಲಾ 15 ಬ್ಯಾಂಕ್ ಖಾತೆಗಳನ್ನು ತಕ್ಷಣದಿಂದ ಜಾರಿಗೆ ಬರುವಂತೆ ಫ್ರೀಜ್ ಮಾಡಿಸಿದೆ. ಅತ್ಯಂತ ರೋಚಕ ವಿಷಯವೆಂದರೆ, ತನಿಖೆ ವೇಳೆ ಈ 15 ಬ್ಯಾಂಕ್ ಖಾತೆಗಳು ಸಿಸ್ಟಮ್‌ನಲ್ಲಿ ಬೇರೆ ಯಾರಿಗೂ ಕಾಣದ ಹಾಗೆ ಚಾಣಾಕ್ಷತನದಿಂದ ಬಚ್ಚಿಡಲಾಗಿತ್ತು ಎನ್ನಲಾಗಿದೆ.

ಐಟಿ,ಇಡಿಗೆ ಮಾಹಿತಿಯಿಲ್ಲ- 5 ಮ್ಯಾನೇಜರ್‌ಗಳಿಗೆ ನೋಟಿಸ್!
ನಿಯಮಗಳ ಪ್ರಕಾರ ಯಾವುದೇ ಬ್ಯಾಂಕ್ ಖಾತೆಯಲ್ಲಿ ಕೋಟ್ಯಂತರ ರೂಪಾಯಿ ಸಂಶಯಾಸ್ಪದ ವಹಿವಾಟು ನಡೆದರೆ ಅದನ್ನು ಆದಾಯ ತೆರಿಗೆ ಇಲಾಖೆ (IT) ಮತ್ತು ಜಾರಿ ನಿರ್ದೇಶನಾಲಯದ (ED) ಗಮನಕ್ಕೆ ತರಬೇಕು. ಆದರೆ ಈ ಪ್ರಕರಣದಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಅಕ್ರಮ ವರ್ಗಾವಣೆ ರಾಜಾರೋಷವಾಗಿ ನಡೆದಿದ್ದರೂ ಬ್ಯಾಂಕ್ ಅಧಿಕಾರಿಗಳು ಮಾತ್ರ ತೆಪ್ಪಗೆ ಕಣ್ಣು ಮುಚ್ಚಿ ಕುಳಿತಿದ್ದರು.ಬ್ಯಾಂಕ್ ಅಧಿಕಾರಿಗಳು ಶಾಮೀಲು ಇಲ್ಲದೆ ಇಷ್ಟೊಂದು ದೊಡ್ಡ ಮಟ್ಟದ ಖಾತೆಗಳನ್ನು ಹೈಡ್ ಮಾಡಲು ಮತ್ತು ಹಣ ವರ್ಗಾಯಿಸಲು ಸಾಧ್ಯವೇ ಇಲ್ಲ.ಈ ಹಿನ್ನೆಲೆಯಲ್ಲಿ ಅಕ್ರಮಕ್ಕೆ ಸಾಥ್ ನೀಡಿದ ಆರೋಪದಡಿ ಐದು ಪ್ರಮುಖ ಬ್ಯಾಂಕ್‌ಗಳ ಮ್ಯಾನೇಜರ್‌ಗಳಿಗೆ ಕಠಿಣ ನೋಟಿಸ್ ಜಾರಿ ಮಾಡಲು ಸಿಐಡಿ ಮುಂದಾಗಿದೆ.
ಒಟ್ಟಾರೆ, ಬಡವರು, ರೈತರು ಹಾಗೂ ನಿವೃತ್ತ ಯೋಧರ ಸುಮಾರು 4,500 ಕೋಟಿ ರೂಪಾಯಿ ಹಣವನ್ನು ನುಂಗಿ ನೀರು ಕುಡಿದಿರುವ ಶಿವಂ ಅಸೋಸಿಯೇಟ್ಸ್ ಹಗರಣದ ತನಿಖೆ ಮುಂದುವರೆದಿದ್ದು ಯಾರ ಯಾರ ತಲೆದಂಡವಾಗಲಿದೆ ಕಾದುನೋಡಬೇಕಿದೆ.

#BelagaviScam #ShivanandNeelannavar #ShivamAssociates #CIDInvestigation #SandalwoodActors #Dhananjay #RaginiDwivedi #VasishtaSimha #BankScam #KarnatakaNews #FreedomTV

Comments (0)

Your email address will not be published. Required fields are marked *

Back to top button