bengaluruರಾಜಕೀಯ

ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ -ಭಿನ್ನಮತ ಸ್ಫೋಟ!

BJP presidentship change issue scrutiniy by High command

ಬೆಂಗಳೂರು: ರಾಜ್ಯ ಬಿಜೆಪಿಯಲ್ಲಿ ಮತ್ತೊಮ್ಮೆ ನಾಯಕತ್ವ ಬದಲಾವಣೆಯ ಬಿರುಗಾಳಿ ಎದ್ದಿದೆ. ಬಿ.ವೈ. ವಿಜಯೇಂದ್ರ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಾಯಿಸಬೇಕೋ ಬೇಡವೋ ಎಂಬ ಯಕ್ಷಪ್ರಶ್ನೆಗೆ ಉತ್ತರ ಹುಡುಕಲು ಹೈಕಮಾಂಡ್ ಮುಂದಾಗಿದೆ. ಬೆಂಗಳೂರಿಗೆ ಬಂದಿಳಿದಿರುವ ಕೇಂದ್ರ ವೀಕ್ಷಕರ ತಂಡದ ಮುಂದೆ ರಾಜ್ಯ ನಾಯಕರ ಭಿನ್ನಮತ ಹಾಗೂ ಆಂತರಿಕ ಅಸಮಾಧಾನ ಬಹಿರಂಗವಾಗಿರುವುದು ಮೂಲಗಳಿಂದ ತಿಳಿದು ಬಂದಿದೆ. 30 ಪ್ರಮುಖ ಆಯ್ದ ನಾಯಕರು ಕೇಂದ್ರ ವೀಕ್ಷಕರ ಮುಂದೆ ಹಾಜರಾಗಿ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹಂಚಿಕೊಂಡಿದ್ದಾರೆ. ಈ ವೇಳೆ ಸಭೆಯಲ್ಲಿ ಮೂರು ಭಿನ್ನಮತಗಳು ಸ್ಫೋಟವಾಗಿದೆ.

“ವಿಜಯೇಂದ್ರ ಹಟಾವೋ,ಬಡೋಂಕೊ ಬಚಾವೋ”


ವಿಜಯೇಂದ್ರ ನಾಯಕತ್ವವನ್ನು ಸದಾ ವಿರೋಧಿಸುತ್ತಿರುವ ಹಿರಿಯ ನಾಯಕರ ಗುಂಪು ವೀಕ್ಷಕರ ಮುಂದೆ ಕಠಿಣ ನಿಲುವು ತಳೆದಿದೆ. ಪಾರ್ಟಿಯಲ್ಲಿ ಮೊದಲು ಬಿ.ಎಸ್. ಯಡಿಯೂರಪ್ಪ ಅವರದ್ದೇ ಪೀಠವಿತ್ತು, ಈಗ ಅವರ ಮಗ ಮುಂದುವರೆಸ್ತಿದ್ದಾನೆ. ಬಿಎಸ್‌ವೈ ಏನ್ ಮಾಡಿದ್ರೋ, ಅದನ್ನೇ ವಿಜಯೇಂದ್ರ ಮಾಡ್ತಿದ್ದಾನೆ ಎಂದು ಹಿರಿಯರೊಬ್ಬರು ಗುಡುಗಿದರು. ವಿಜಯೇಂದ್ರ ಪಕ್ಷದಲ್ಲಿ ಪ್ರತ್ಯೇಕ ‘ಪವರ್ ಸೆಂಟರ್’ ಸೃಷ್ಟಿಸಿದ್ದು ಬೇರೆ ಯಾರನ್ನೂ ಬೆಳೆಯಲು ಬಿಡುತ್ತಿಲ್ಲ ಎಂದು ದೂರಿದರು.
ಸಿಎಂ ಪಟ್ಟಕ್ಕೆ ವಿಜಯೇಂದ್ರ ಹಂಬಲ- ವಿಜಯೇಂದ್ರ ತಾವೇ ಮುಂದಿನ ಸಿಎಂ ಎಂಬಂತೆ ಓಡಾಡುತ್ತಿದ್ದಾರೆ.ಇದರಿಂದ ಹಿರಿಯ ನಾಯಕರು ತೀವ್ರ ಅಸಮಾಧಾನವಾಗಿದೆ.ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು ಎಂದರೆ ತಕ್ಷಣವೇ ವಿಜಯೇಂದ್ರರನ್ನು ಬದಲಾಯಿಸಿ, ಹಿರಿಯ ನಾಯಕರಿಗೆ ಜವಾಬ್ದಾರಿ ನೀಡಬೇಕು ಎಂದು ಹೇಳಿದರು.

ಕಾಂಗ್ರೆಸ್ ಸೋಲಿಸಲು ಒಗ್ಗಟ್ಟು ಅತ್ಯಗತ್ಯ!
ಮತ್ತೊಂದು ತಟಸ್ಥ ಬಣ ಪ್ರಸ್ತುತ ರಾಜ್ಯ ಸರ್ಕಾರದ ರಾಜಕೀಯ ಪರಿಸ್ಥಿತಿಯನ್ನು ವೀಕ್ಷಕರ ಮುಂದೆ ವಿವರಿಸುತ್ತಾ, ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದು ಅತ್ಯಗತ್ಯ. ಇದರ ಬಗ್ಗೆ ಕೂಡಲೆ ಹೈಕಮಾಂಡ್ ನಿರ್ಧರಿಸಬೇಕು ಎಂದರು. “ರಾಜ್ಯದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಬಂದು ಈಗಾಗಲೇ ಮೂರು ವರ್ಷಗಳು ಕಳೆದಿವೆ. ಗ್ಯಾರಂಟಿಗಳನ್ನು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸಗಳು ನಡೆಯುತ್ತಿಲ್ಲ. ಸಿಎಂ-ಡಿಸಿಎಂ ನಡುವಿನ ಆಂತರಿಕ ಕಾಳಗದಿಂದ ಜನರು ಬೇಸತ್ತಿದ್ದು,ಸರ್ಕಾರದ ವಿರುದ್ಧ ತೀವ್ರ ವಿರೋಧಿ ಅಲೆ ಇದೆ.” ಎಂದು ಮನವರಿಕೆ ಮಾಡಿದರು. ಮುಂದಿನ ಎರಡು ವರ್ಷ ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕೆಲಸ ಮಾಡಿದರೆ ಮಾತ್ರ ಮತ್ತೆ ಅಧಿಕಾರಕ್ಕೆ ಬರಲು ಸಾಧ್ಯ. ಈ ನಿರ್ಣಾಯಕ ಹಂತದಲ್ಲಿ ಹೈಕಮಾಂಡ್ ಕೈಗೊಳ್ಳುವ ಯಾವುದೇ ಅಂತಿಮ ತೀರ್ಮಾನಕ್ಕೂ ನಾವು ಬದ್ಧರಾಗಿರುತ್ತೇವೆ.

ಬದಲಾಯಿಸಿದ್ರೋ ನೀವು ಕೆಟ್ರಿ- ವಿಜಯೇಂದ್ರ ಬೆಂಬಲಿಗರ ವಾದ!
ವಿಜಯೇಂದ್ರ ಬೆಂಬಲಕ್ಕೆ ನಿಂತಿರುವ ಶಾಸಕರು ಹಾಗೂ ಮುಖಂಡರ ಪಡೆ, ಅಧ್ಯಕ್ಷರ ಬದಲಾವಣೆಯ ನಿರ್ಧಾರ ಪಕ್ಷಕ್ಕೆ ಭಾರಿ ನಷ್ಟ ಉಂಟು ಮಾಡಲಿದೆ ಎಂದು ಎಚ್ಚರಿಸಿದರು. “ವಿಜಯೇಂದ್ರ ರಾಜ್ಯಾಧ್ಯಕ್ಷರಾದ ಬಳಿಕ ಪಕ್ಷದಲ್ಲಿ ಸಂಘಟನಾ ಚಟುವಟಿಕೆಗಳು ಚುರುಕಾಗಿವೆ. ಎಲ್ಲ ಸಮುದಾಯಗಳನ್ನು ಗುರುತಿಸಿ,ಹೊಸ ನಾಯಕರನ್ನು ಬೆಳೆಸುವ ಕೆಲಸ ಮಾಡುತ್ತಿದ್ದಾರೆ.ಅವರನ್ನು ಮುಂದಿನ ವಿಧಾನಸಭಾ ಚುನಾವಣೆವರೆಗೂ ಮುಂದುವರಿಸಬೇಕು.ಈಗ ಬದಲಾಯಿಸಿದರೆ ಪಕ್ಷಕ್ಕೆ ಭಾರಿ ಹಾನಿ ಆಗಲಿದೆ.” ಎಂದರು.

ಕಾಂಗ್ರೆಸ್ ಹೊಂದಾಣಿಕೆ ನಮ್ಮಲ್ಲೂ ಬೇಕು
“ಹಿಂದೆ ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಹಾಗೂ ಡಿಕೆಶಿ ನಡುವೆ ಹೊಂದಾಣಿಕೆ ಕೊರತೆ ಇದ್ದರೂ, ಚುನಾವಣಾ ಸಮಯದಲ್ಲಿ ಎಲ್ಲವನ್ನೂ ಮರೆತು ಒಟ್ಟಾಗಿ ಹೋರಾಡಿದ್ದಕ್ಕೆ ಅವರು ಅಧಿಕಾರಕ್ಕೆ ಬಂದರು. ನಮ್ಮಲ್ಲೂ ಈಗ ಅಂತಹದೇ ಒಗ್ಗಟ್ಟಿನ ಅವಶ್ಯಕತೆ ಇದೆ. ವೈಯಕ್ತಿಕ ವಿರೋಧ ಬಿಟ್ಟು ಎಲ್ಲರೂ ವಿಜಯೇಂದ್ರ ಜೊತೆ ಕೆಲಸ ಮಾಡುವಂತೆ ಹೈಕಮಾಂಡ್ ಸೂಚಿಸಬೇಕು.” ರಾಜ್ಯ ನಾಯಕರ ಈ ‘ತ್ರಿಕೋನ’ ವಾದ ಆಲಿಸಿರುವ ಕೇಂದ್ರ ವೀಕ್ಷಕರ ತಂಡ, ಪೂರ್ಣ ವರದಿಯನ್ನು ದೆಹಲಿಯಲ್ಲಿರುವ ಹೈಕಮಾಂಡ್ ನಾಯಕರಿಗೆ ಸಲ್ಲಿಸಲಿದ್ದು, ಪ್ರಸ್ತುತ ರಾಜಕೀಯದ ಈ ಜಿದ್ದಾಜಿದ್ದಿನಲ್ಲಿ ವಿಜಯೇಂದ್ರ ಕುರ್ಚಿ ಉಳಿಸಿಕೊಳ್ಳುತ್ತಾರಾ ಅಥವಾ ಹೈಕಮಾಂಡ್ ಹೊಸ ಮುಖಕ್ಕೆ ಮಣೆ ಹಾಕುತ್ತಾ ಕಾದುನೋಡಬೇಕಿದೆ.

#BYVijayendra #BJPStatePresident #KarnatakaBJP #BJPHighCommand #BSYediyurappa #KarnatakaPolitics #CongressVsBJP #Siddaramaiah #DKShivakumar #FreedomTV

Comments (0)

Your email address will not be published. Required fields are marked *

Back to top button