ಮನೆಯಲ್ಲಿ ಸಂಗ್ರಹಿಸಿದ್ದ ಪೆಟ್ರೋಲ್ ಸ್ಫೋಟಗೊಂಡು ಮಹಿಳೆ ಸ್ಥಿತಿ ಚಿಂತಾಜನಕ!

ಧಾರವಾಡ: ತಡಕೋಡ ಗ್ರಾಮದ ಹರಿಜನಕೇರಿ ಓಣಿಯಲ್ಲಿ ಸಂಭವಿಸಿದ ಪೆಟ್ರೋಲ್ ಸ್ಫೋಟದ ಘಟನೆಯು ಇಡೀ ಗ್ರಾಮವನ್ನೇ ಬೆಚ್ಚಿಬೀಳಿಸಿದೆ. ಪೆಟ್ರೋಲ್ ಅಭಾವ ಉಂಟಾಗಲಿದೆ ಎಂಬ ವದಂತಿಯನ್ನು ನಂಬಿ ಮನೆಯಲ್ಲಿ ಸಂಗ್ರಹಿಸಿಟ್ಟಿದ್ದ ಪೆಟ್ರೋಲ್ ಕ್ಯಾನ್ಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ, 32 ವರ್ಷದ ಗೃಹಿಣಿ ಪೂರ್ಣಿಮಾ ಕಲ್ಲಪ್ಪ ಹಾದಿಮನಿ ಅವರು ಶೇ.80 ರಷ್ಟು ಸುಟ್ಟುಹೋಗಿದ್ದು, ಸಾವು-ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ.
ಕುಟುಂಬಸ್ಥರು ಮದುವೆ ಸಮಾರಂಭಗಳ ರಥ ಓಡಿಸಲು ಮುನ್ನೆಚ್ಚರಿಕೆಯಾಗಿ ಪೆಟ್ರೋಲ್ ಸಂಗ್ರಹಿಸಿ ಫ್ರಿಡ್ಜ್ ಪಕ್ಕದಲ್ಲಿ ಇರಿಸಿದ್ದರು ಎನ್ನಲಾಗಿದೆ. ಪೂರ್ಣಿಮಾ ಅವರು ಅಡುಗೆ ಮನೆಯಲ್ಲಿದ್ದ ಸಂದರ್ಭದಲ್ಲಿ ಏಕಾಏಕಿ ಪೆಟ್ರೋಲ್ ಕ್ಯಾನ್ ಸ್ಫೋಟಗೊಂಡಿದ್ದು, ಕ್ಷಣಾರ್ಧದಲ್ಲಿ ಬೆಂಕಿ ಇಡೀ ಮನೆಗೆ ಆವರಿಸಿದೆ. ಈ ವೇಳೆ ಅಡುಗೆ ಮನೆಯಲ್ಲಿ ಸಿಲುಕಿದ್ದ ಅತ್ತಿಗೆಯನ್ನು ಕಾಪಾಡಲು ಹೋದ ಮೈದುನ ಯಲ್ಲಪ್ಪ ಅವರಿಗೂ ಸುಟ್ಟ ಗಾಯಗಳಾಗಿವೆ. ಅದೃಷ್ಟವಶಾತ್ ಕುಟುಂಬದ ಇತರ ಸದಸ್ಯರು ಹೊರಗಡೆ ಕುಳಿತಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ತೀವ್ರವಾಗಿ ಗಾಯಗೊಂಡ ಪೂರ್ಣಿಮಾ ಅವರಿಗೆ ಜಿಲ್ಲಾಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ಗೆ ದಾಖಲಿಸಲಾಗಿದೆ. ಸದ್ಯ ಅವರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ವೈದ್ಯರು ಚಿಕಿತ್ಸೆ ಮುಂದುವರಿಸಿದ್ದಾರೆ. ಈ ಕುರಿತು ಗರಗ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.