ಜಮೀನು ಕಂಡೋರ ಪಾಲು- ಎಸಿ ಮುಂದೆ ರೈತನ ಗೋಳು!
Farmer cries at AC office dharwad for his land illegal transfer to other persons

ಧಾರವಾಡ: ಭ್ರಷ್ಟ ಅಧಿಕಾರಿಗಳ ಲಂಚದ ಆಸೆಗೆ ಬಡ ರೈತನೊಬ್ಬಮೋಸ ಹೋಗಿದ್ದಾನೆ. ತನ್ನ ಬದುಕಿಗೆ ಏಕೈಕ ಆಧಾರವಾಗಿದ್ದ ಜಮೀನನ್ನು ಕಳೆದುಕೊಂಡು ಕಚೇರಿಯಿಂದ ಕಚೇರಿಗೆ ಅಲೆಯುತ್ತಿರುವ ಅತ್ಯಂತ ಮನಮಿಡಿಯುವ ಘಟನೆ ಧಾರವಾಡದಲ್ಲಿ ಬೆಳಕಿಗೆ ಬಂದಿದೆ. ನ್ಯಾಯ ಸಿಗದೇ ಹತಾಶನಾದ ವೃದ್ಧ ರೈತರೊಬ್ಬರು ಅಸಿಸ್ಟೆಂಟ್ ಕಮಿಷನರ್ ಕಚೇರಿ ಮುಂಭಾಗದಲ್ಲೇ ಕುಳಿತು ಕಣ್ಣೀರು ಸುರಿಸಿದ ದೃಶ್ಯ ಪ್ರತಿಯೊಬ್ಬರ ಕಣ್ಣಲ್ಲಿ ನೀರು ತರಿಸಿದೆ.

ಲಂಚಾವತಾರಕ್ಕೆ ಬಲಿಪಶುವಾದ ಅನ್ನದಾತ
ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಹುಲಕೊಪ್ಪ ಗ್ರಾಮದ ವೃದ್ಧ ರೈತ ಸೋಮಪ್ಪ ಗೋದಿ ಕಾಯಕವೇ ಕೈಲಾಸವೆಂಬಂತೆ ಕೃಷಿ ಮಾಡಿಕೊಂಡಿದ್ದ. ಆತನ 1 ಎಕರೆ 39 ಗುಂಟೆ ಜಮೀನು. ಹುಲಕೊಪ್ಪ ಗ್ರಾಮದ ಸರ್ವೇ ನಂಬರ್ 19/3 ರಲ್ಲಿ ಬರುತ್ತದೆ.ನಂತರ ಬೆಳವಣಿಯಲ್ಲಿ ಜಮೀನು ತಕರಾರಿಗೆ ಬಿದ್ದು ಕೇಸಾಗಿತ್ತು. ಈ ಜಮೀನಿನ ವ್ಯಾಜ್ಯವು ಈಗಾಗಲೇ ನ್ಯಾಯಾಲಯದಲ್ಲಿದ್ದು, ವಿಚಾರಣೆ ಹಂತದಲ್ಲಿದೆ. ನಿಯಮಗಳ ಪ್ರಕಾರ ಕೋರ್ಟ್‌ನಲ್ಲಿರುವ ಆಸ್ತಿಯನ್ನು ವರ್ಗಾವಣೆ ಮಾಡುವಂತಿಲ್ಲ. ಆದರೆ, ಎಸಿ ಕಚೇರಿಯ ಅಧಿಕಾರಿಗಳು ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದೆ, ಹಣದ ಆಮಿಷಕ್ಕೆ ಒಳಗಾಗಿ ದ್ಯಾಮವ್ವ ತೇಗೂರ್ ಎಂಬುವರಿಗೆ ಜಮೀನನ್ನು ಬೇರೆಯವರಿಗೆ ಖಾತೆ ಬದಲಾಯಿಸಿ ಕೊಟ್ಟಿದ್ದಾರೆ ಎಂದು ರೈತ ಆರೋಪಿಸಿದ್ದಾರೆ.
“ಎಸಿ ಕಚೇರಿಯಲ್ಲಿ ಕಾಸು ಎಸೆದರೆ ಸಾಕು ಹೆಣವೂ ಬಾಯಿ ಬಿಡುತ್ತೆ. ಎಂತಹ ದಾಖಲೆಗಳನ್ನಾದರೂ ಅದಲು ಬದಲು ಮಾಡುವ ಭ್ರಷ್ಟ ಮಾಂತ್ರಿಕರು ಇಲ್ಲಿದ್ದಾರೆ ಎಂದು ದೂರಿದ್ದಾರೆ. ಕೋರ್ಟ್‌ನಲ್ಲಿ ಕೇಸ್ ನಡೀತಿದ್ರೂ ನಮ್ಮ ಜಮೀನನ್ನ ಬೇರೆಯವರ ಹೆಸರಿಗೆ ಬರೆದುಕೊಟ್ಟಿದ್ದಾರೆ” ಎಂದು ವೃದ್ಧ ರೈತ ಸೋಮಪ್ಪ ಗೋದಿ ಕಣ್ಣೀರು ಹಾಕುತ್ತಾ ತಮ್ಮ ಆಳಲನ್ನು ತೋಡಿಕೊಂಡಿದ್ದಾರೆ.
ಎಡಿಸಿ ಆದೇಶಕ್ಕೂ ಮುಲಾಜು ನೋಡದ ಎಸಿ ಶಾಲಮ್!
ಈ ಹಗರಣದ ಹಿಂದೆ ಹಿರಿಯ ಅಧಿಕಾರಿಗಳ ಶ್ರೀರಕ್ಷೆ ಇರುವುದು ಸ್ಪಷ್ಟವಾಗಿ ಎದ್ದು ಕಾಣುತ್ತಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅಪರ ಜಿಲ್ಲಾಧಿಕಾರಿ ಗೀತಾ ಅವರು ಕಳೆದ ಜೂನ್‌ನಲ್ಲೇ ಎಸಿ ಶಾಲಮ್ ಅವರಿಗೆ ಸ್ಪಷ್ಟ ನಿರ್ದೇಶನ ನೀಡಿದ್ದರು. ಖುದ್ದು ಜಿಲ್ಲೆಯ ಹಿರಿಯ ಅಧಿಕಾರಿಯೇ ಲಿಖಿತ ಸೂಚನೆ ನೀಡಿದ್ದರೂ, ಎಸಿ ಶಾಲಮ್ ಮಾತ್ರ ಯಾವುದೇ ಕ್ರಮ ಕೈಗೊಳ್ಳದೆ ಮೌನಕ್ಕೆ ಶರಣಾಗಿದ್ದಾರೆ. ವರ್ಷ ಕಳೆದರೂ ಫೈಲ್ ಮೂವ್ ಆಗದಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ತಮ್ಮ ಜಮೀನು ತಮಗೆ ಮರಳಿ ಸಿಗಬೇಕು ಮತ್ತು ಕರ್ತವ್ಯ ಲೋಪ ಎಸಗಿರುವ ಎಸಿ ಶಾಲಮ್ ಹಾಗೂ ಇತರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ತಕ್ಷಣವೇ ಶಿಸ್ತುಕ್ರಮ ಜರುಗಿಸಬೇಕು ಎಂದು ವೃದ್ಧ ರೈತ ಸೋಮಪ್ಪ ಪಟ್ಟು ಹಿಡಿದಿದ್ದಾರೆ.
ಕೋರ್ಟ್ ಕಲಾಪದಲ್ಲೂ ಇರುವ ಭೂಮಿಯನ್ನು ಪರಭಾರೆ ಮಾಡುವ ಧೈರ್ಯ ಈ ಅಧಿಕಾರಿಗಳಿಗೆ ಎಲ್ಲಿಂದ ಬಂತು? ಜಿಲ್ಲಾಧಿಕಾರಿಗಳ ಕಚೇರಿಯ ಆದೇಶವನ್ನೇ ಕಸದ ಬುಟ್ಟಿಗೆ ಎಸೆಯುವ ಎಸಿ ಶಾಲಮ್ ಅವರ ಬೆನ್ನಿಗೆ ನಿಂತಿರುವ ಕಾಣದ ಕೈಗಳು ಯಾವುವು? ಅನ್ನದಾತನ ಕಣ್ಣೀರಿಗೆ ಸರ್ಕಾರ ಉತ್ತರಿಸುವುದೇ? ಕಾದು ನೋಡಬೇಕಿದೆ.
#FreedomTV #Dharwad #FarmerIssue #CorruptOfficials #SomappaGodi #Kallaghatagi #Hulakoppa #ACOfficeCorrupton #JusticeForFarmers #KarnatakaNews #BreakingNews #DharwadDistrictCollector