
ನವದೆಹಲಿ: ರಾಜ್ಯ ಕಾಂಗ್ರೆಸ್ ರಾಜಕಾರಣದ ಮಹತ್ವದ ಬೆಳವಣಿಗೆಯಾಗುತ್ತಿದ್ದು,, ಕರ್ನಾಟಕದ ಇಡೀ ರಾಜಕೀಯ ಸಂಪೂರ್ಣವಾಗಿ ದೇಶದ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿವೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಹಿರಿಯ ಸಚಿವರು ಈಗಾಗಲೇ ದೆಹಲಿಯಲ್ಲಿ ಬೀಡು ಬಿಟ್ಟಿದ್ದು, ಇಂದು ಬೆಳಗ್ಗೆ 11 ಗಂಟೆಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಭೆ ಆರಂಭವಾಗಿದೆ.ಕಾಂಗ್ರೆಸ್ ಸರ್ಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ನಾಯಕತ್ವ ಬದಲಾವಣೆ, ಸಂಪುಟ ಪುನಾರಚನೆ ಹಲವು ಗೊಂದಲಗಳ ಕಗ್ಗಂಟು ಈಗ ಹೈಕಮಾಂಡ್ ಅಂಗಳಕ್ಕೆ ತಲುಪಿದ್ದು, ಇಂದಿನ ಸಭೆಯ ಮೇಲೆ ಇಡೀ ರಾಜ್ಯದ ಕಣ್ಣು ನೆಟ್ಟಿದೆ.

ಸಿಎಂ ಸ್ಥಾನಕ್ಕೆ ಸಿಗಲಿದೆ ಫಲಿತಾಂಶ!
ಸಿಎಂ ಹಾಗೂ ಡಿಸಿಎಂ ನಡುವಿನ ಅಧಿಕಾರ ಹಂಚಿಕೆಯ ಗೊಂದಲಕ್ಕೆ ಶಾಶ್ವತ ತೆರೆ ಎಳೆಯುವುದು ಹೈಕಮಾಂಡ್‌ನ ಮೊದಲ ಆದ್ಯತೆಯಾಗಿದೆ.ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಮತ್ತು ಕೆ.ಸಿ. ವೇಣುಗೋಪಾಲ್ ಅವರನ್ನೊಳಗೊಂಡ ವರಿಷ್ಠರ ತಂಡ ಈಗಾಗಲೇ ಒಂದು ಸೂತ್ರವನ್ನು ಸಿದ್ಧಪಡಿಸಿದ್ದು, ಅದನ್ನು ಇಂದಿನ ಸಭೆಯಲ್ಲಿ ಉಭಯ ನಾಯಕರ ಮುಂದೆ ಮಂಡಿಸಲಿದ್ದಾರೆ. ಮುಂದಿನ ದಿನಗಳಲ್ಲಿ ಯಾರೂ ಕೂಡ ಬಹಿರಂಗವಾಗಿ ನಾಯಕತ್ವದ ಬಗ್ಗೆ ಮಾತನಾಡಬಾರದು ಎಂಬ ಕಡಕ್ ಸಂದೇಶ ರವಾನೆಯಾಗುವ ಸಾಧ್ಯತೆ ಇದೆ.
ಸಚಿವ ಸ್ಥಾನ- ಸೀನಿಯರ್ಸ್ Vs ಜೂನಿಯರ್ಸ್!
ಮೂರು ವರ್ಷಗಳ ಅವಧಿ ಮುಗಿದಿರುವ ಹಿನ್ನೆಲೆಯಲ್ಲಿ ಹೊಸ ಮುಖಗಳಿಗೆ ಅವಕಾಶ ನೀಡುವ ಬಗ್ಗೆ ಗಂಭೀರ ಚರ್ಚೆ ನಡೆಯಲಿದೆ.ಅಸಮರ್ಥ ಹಾಗೂ ವಿವಾದದ ಸುಳಿಯಲ್ಲಿರುವ ಸಚಿವರಿಗೆ ಗೇಟ್ ಪಾಸ್ ನೀಡಿ, 2028ರ ಮುಂದಿನ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಹೊಸ ತಂತ್ರಗಾರಿಕೆಯೊಂದಿಗೆ ಸಂಪುಟ ಪುನರ್ರಚಿಸಲು ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ.
ರಾಜ್ಯಸಭೆ ಹಾಗೂ MLC ಅಭ್ಯರ್ಥಿಗಳ ಆಯ್ಕೆ
ಜೂನ್ ತಿಂಗಳಲ್ಲಿ ನಡೆಯಲಿರುವ ರಾಜ್ಯಸಭಾ ಚುನಾವಣೆಯ 4 ಸ್ಥಾನಗಳ ಪೈಕಿ ಕಾಂಗ್ರೆಸ್ ಪಾಲಿನ 3 ಸ್ಥಾನಗಳಿಗೆ (ಖರ್ಗೆಯವರ ಮರುನಾಮನಿರ್ದೇಶನ ಸೇರಿದಂತೆ) ಅಭ್ಯರ್ಥಿಗಳ ಆಯ್ಕೆ ಅಂತಿಮಗೊಳ್ಳಲಿದೆ. ವಿಧಾನಪರಿಷತ್‌ನ ನಾಮನಿರ್ದೇಶನ ಹಾಗೂ ವಿಧಾನಸಭೆಯಿಂದ ನಡೆಯುವ ಚುನಾವಣೆಯ ಅಭ್ಯರ್ಥಿಗಳ ಪಟ್ಟಿಯ ಕುರಿತು ಹಿರಿಯ ನಾಯಕರೊಂದಿಗೆ ಚರ್ಚೆ ನಡೆಯಲಿದೆ.
ರಾಜ್ಯದಲ್ಲಿ ಮತದಾರರ ಪಟ್ಟಿಗಳ ಪರಿಷ್ಕರಣೆ (SIR) ಮತ್ತು ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಸಿದ್ಧತೆಯ ಬಗ್ಗೆಯೂ ಹೈಕಮಾಂಡ್ ಸಿಎಂ-ಡಿಸಿಎಂಗೆ ಸ್ಪಷ್ಟ ನಿರ್ದೇಶನ ನೀಡಲಿದೆ. ಕಳೆದ ಎರಡು ದಿನಗಳ ಹಿಂದೆಯೇ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆ ಅವರು ಕೈಗೊಂಡಿರುವ ರಹಸ್ಯ ನಿರ್ಧಾರವನ್ನು ಇಂದು ಸಿದ್ದರಾಮಯ್ಯ ಅವರ ಮುಂದೆ ಮಂಡಿಸಲಾಗುವುದು. ಹೈಕಮಾಂಡ್ ತಗೆದುಕೊಳ್ಳುವ ಅಂತಿಮ ನಿರ್ಧಾರದ ಮೇಲೆಯೇ ರಾಜ್ಯ ಸರ್ಕಾರದ ಮುಂದಿನ ಹಾದಿ ನಿರ್ಧಾರವಾಗಲಿದೆ. ಹೀಗಾಗಿ ಕರ್ನಾಟಕದ ರಾಜಕೀಯ ವಲಯದ ನೋಟ ಸದ್ಯ ಮಲ್ಲಿಕಾರ್ಜುನ ಖರ್ಗೆ ನಿವಾಸದತ್ತ ನೆಟ್ಟಿದೆ.
#FreedomTV #KarnatakaPolitics #CongressHighCommand #Siddaramaiah #DKShivakumar #MallikarjunKharge #DelhiMeeting #CabinetReshuffle #KarnatakaCongress #BreakingNews #PoliticalUpdates #RajyaSabhaElections




