ಬಿತ್ತನೆ ಬೀಜ ರೈತರ ಕಿತ್ತಾಟ-ಸರ್ಕಾರದ ವಿರುದ್ಧ ಭುಗಿಲೆದ್ದ ಆಕ್ರೋಶ!
Farmers protest in Haveri for Sowing seed

ಹಾವೇರಿ: ಜಿಲ್ಲೆಯಾದ್ಯಂತ ಮುಂಗಾರು ಮಳೆ ಭರ್ಜರಿಯಾಗಿ ಸುರಿಯುತ್ತಿದ್ದಂತೆ ಕೃಷಿ ಚಟುವಟಿಕೆಗಳು ಗರಿಗೆದರಿವೆ. ಆದರೆ, ಬಿತ್ತನೆ ಕಾರ್ಯಕ್ಕೆ ಸಜ್ಜಾಗುತ್ತಿರುವ ಅನ್ನದಾತನಿಗೆ ಈಗ ಬೀಜದ ತತ್ವಾರ ಶುರುವಾಗಿದೆ. ಬಿತ್ತನೆ ಬೀಜಕ್ಕಾಗಿ ರೈತರು ಹಗಲು-ರಾತ್ರಿ ಎನ್ನದೆ ರೈತ ಸಂಪರ್ಕ ಕೇಂದ್ರಗಳ ಮುಂದೆ ಹಾಸಿಗೆ-ದಿಂಬು ಸಮೇತ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.ಜಿಲ್ಲೆಯಾದ್ಯಂತ ಕೃಷಿ ಕೇಂದ್ರಗಳ ಮುಂದೆ ನೂಕುನುಗ್ಗಲು,ತಳ್ಳಾಟ-ನೂಕಾಟಗಳು ಸಂಭವಿಸುತ್ತಿದ್ದು, ಪರಿಸ್ಥಿತಿ ನಿಯಂತ್ರಿಸಲು ಪೊಲೀಸರ ಸರ್ಪಗಾವಲು ಹಾಕಿರುವುದು ರೈತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

24X7 ಸರತಿ ಸಾಲು – ಕೃಷಿ ಕೇಂದ್ರಗಳಲ್ಲಿ ನೂಕುನುಗ್ಗಲು!
ಜಿಲ್ಲೆಯ ಹಾವೇರಿ, ಕರಜಗಿ, ಬಂಕಾಪುರ, ಹಾಗೂ ರಟ್ಟೀಹಳ್ಳಿ ರೈತ ಸಂಪರ್ಕ ಕೇಂದ್ರಗಳ ಮುಂದೆ ನೂರಾರು ರೈತರು ರಾತ್ರಿಯಿಂದಲೇ ಜಮಾವಣೆಯಾಗಿದ್ದು ಬೀಜಕ್ಕಾಗಿ ಸಾಲುಗಟ್ಟಿ ನಿಲ್ಲುತ್ತಿದ್ದಾರೆ. ವಿಶೇಷವಾಗಿ ಮೆಕ್ಕೆಜೋಳ ಮತ್ತು ಸೋಯಾಬೀನ್ ಬೀಜ ಖರೀದಿಗೆ ರೈತರು ಮುಗಿಬಿದ್ದಿದ್ದಾರೆ. ಬೀಜದ ಅಭಾವ ಸೃಷ್ಟಿಯಾಗಬಹುದು ಎಂಬ ಆತಂಕದಲ್ಲಿ ನೂರಾರು ರೈತರು ಒಂದೇ ಬಾರಿಗೆ ಜಮಾಯಿಸಿದ್ದರಿಂದ ಕೃಷಿ ಕೇಂದ್ರಗಳ ಬಳಿ ಗದ್ದಲದ ವಾತಾವರಣ ನಿರ್ಮಾಣವಾಗಿದೆ. ಹಾವೇರಿ ಮತ್ತು ಕರಜಗಿ ಗ್ರಾಮದ ರೈತ ಸಂಪರ್ಕ ಕಚೇರಿ ಮುಂದೆ ಪರಿಸ್ಥಿತಿ ಕೈಮೀರಿ ಹೊಡೆದಅಟ ನೂಕು ನುಗ್ಗಲಾದ ಹಿನ್ನೆಲೆಯಲ್ಲಿ,ಅಧಿಕಾರಿಗಳು ರೈತರ ನಿಯಂತ್ರಣಕ್ಕೆ ಪೊಲೀಸರನ್ನು ನಿಯೋಜಿಸಿದ್ದಾರೆ. ಸದ್ಯ ಪೊಲೀಸರ ಬಿಗಿ ಭದ್ರತೆಯಲ್ಲೇ ಆಧಾರ್ ಕಾರ್ಡ್ ಹಾಗೂ ಟೋಕನ್/ಕೂಪನ್ ಪರಿಶೀಲಿಸಿ ಬೀಜ ವಿತರಣೆ ಮಾಡಲಾಗುತ್ತಿದೆ.
ಬಿತ್ತನೆ ಬೀಜಕ್ಕಾಗಿ ಪೊಲೀಸರು- ರೈತರ ಪ್ರತಿಭಟನೆ
“ದೇಶಕ್ಕೆ ಅನ್ನ ಕೊಡುವ ರೈತ ತನಗೆ ಬೇಕಾದ ಬಿತ್ತನೆ ಬೀಜ ಪಡೆಯಲು ಪೊಲೀಸರ ಕಾವಲಿನಲ್ಲಿ ನಿಲ್ಲಬೇಕಾದ ದುಸ್ಥಿತಿ ಬಂದಿದೆ” ಎಂದು ರೈತ ಸಮುದಾಯ ತೀವ್ರ ಅಸಮಾಧಾನ ಹೊರಹಾಕಿದೆ. ಸಮರ್ಪಕವಾಗಿ ಬೀಜ ವಿತರಣೆ ಮಾಡುತ್ತಿಲ್ಲ ಎಂದು ಆರೋಪಿಸಿ ಬಂಕಾಪುರದಲ್ಲಿ ರೈತರು ದಿಢೀರ್ ಪ್ರತಿಭಟನೆ ನಡೆಸಿದರು. ಅಲ್ಲದೆ ಕರ್ಜಗಿ ಮತ್ತು ಹಾವೇರಿ ಕೇಂದ್ರಗಳಲ್ಲೂ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತರ ಅಳಲು: “ಸರಿಯಾದ ಸಮಯಕ್ಕೆ ಬೀಜ ಸಿಗದಿದ್ದರೆ ಬಿತ್ತನೆ ವಿಳಂಬವಾಗುತ್ತದೆ. ಮುಂಗಾರು ಮಳೆಯ ತೇವಾಂಶ ಇರುವಾಗಲೇ ಬಿತ್ತನೆ ಮಾಡಬೇಕು. ಕೃಷಿ ಇಲಾಖೆ ಮುನ್ಸೂಚನೆ ಇದ್ದರೂ ಹೆಚ್ಚಿನ ಕೌಂಟರ್ಗಳನ್ನು ತೆರೆದಿಲ್ಲ. ಕೇವಲ ಒಂದೇ ಕೌಂಟರ್ ಇಟ್ಟಿರುವುದರಿಂದ ದಿನವಿಡೀ ಕಾಯುವಂತಾಗಿದೆ” ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ವಿಳಂಬಕ್ಕೆ ಇಲಾಖೆಯ ಸೋಗಲಾಡಿ ಸಬೂಬು!
ಜಿಲ್ಲೆಯಲ್ಲಿ ಈ ಬಾರಿ ಒಟ್ಟು 3.14 ಲಕ್ಷ ಹೆಕ್ಟೇರ್ ಬಿತ್ತನೆ ಪ್ರದೇಶವಿದೆ. ಇದರಲ್ಲಿ ಮಳೆಯಾಶ್ರಿತ ಪ್ರದೇಶ 2.50 ಲಕ್ಷ ಹೆಕ್ಟೇರ್ ಇದ್ದರೆ,ನೀರಾವರಿ ಪ್ರದೇಶ 63,769 ಹೆಕ್ಟೇರ್ ಇದೆ.ಬಹುತೇಕ ರೈತರು ಮೆಕ್ಕೆಜೋಳ, ಶೇಂಗಾ ಮತ್ತು ಸೋಯಾಬೀನ್ ಬಿತ್ತನೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ.ಬೀಜ ವಿತರಣೆ ವಿಳಂಬಕ್ಕೆ “ಆನ್ಲೈನ್ ಪ್ರಕ್ರಿಯೆ ಹಾಗೂ ತಾಂತ್ರಿಕ ಕಾರಣಗಳ ಎಂದು ಹೇಳಿ ತಪ್ಪಿಸಿಕೊಂಡಿದ್ದಾರೆ. ಪ್ರತಿಯೊಬ್ಬ ರೈತರ ಜಮೀನಿನ ಆರ್ಟಿಸಿ (RTC) ಪರಿಶೀಲಿಸಿ, ಆನ್ಲೈನ್ ಮೂಲಕ ರಶೀದಿ ನೀಡಿ ಬೀಜ ವಿತರಿಸಬೇಕಿದೆ. ಈ ಪ್ರಕ್ರಿಯೆಗೆ ಕನಿಷ್ಠ 5 ನಿಮಿಷ ಬೇಕಾಗುವುದರಿಂದ ದಟ್ಟಣೆ ಹೆಚ್ಚಾಗಿದೆ” ಎಂದು ತಿಳಿಸಿದ್ದಾರೆ.
ಆದರೆ, ಕೃಷಿ ಇಲಾಖೆ ತಕ್ಷಣವೇ ಎಚ್ಚೆತ್ತುಕೊಂಡು ಹೆಚ್ಚುವರಿ ಕೌಂಟರ್ಗಳನ್ನು ತೆರೆದು, ತಾಂತ್ರಿಕ ಲೋಪಗಳನ್ನು ಸರಿಪಡಿಸಿ ರೈತರಿಗೆ ಸರಾಗವಾಗಿ ಬೀಜ ಪೂರೈಕೆ ಮಾಡಬೇಕು ಎಂಬುದು ಸಾರ್ವಜನಿಕರ ಹಾಗೂ ರೈತರ ಪ್ರಮುಖ ಆಗ್ರಹವಾಗಿದೆ.
#FreedomTV #Haveri #Monsoon2026 #FarmersIssue #AgricultureDepartment #KarnatakaFarmers #SowingSeeds #RainUpdates #HaveriNews #KarnatakaPolitics #Annadatha