20 ವರ್ಷಗಳ ನಂತರ ‘SIR’- ರಾಜಕೀಯ ಪಕ್ಷಗಳು ಸಹಕರಿಸಬೇಕು- ಜಿಲ್ಲಾಧಿಕಾರಿ!
SIR process in Dharwad DC says all political parties must cooperate

ಧಾರವಾಡ: ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (Special Intensive Revision -2026) ಕಾರ್ಯ ಕೈಗೊಳ್ಳಲಾಗುತ್ತಿದ್ದು, ಇದು ದಕ್ಷ ಚುನಾವಣೆಗೆ ಅತ್ಯಂತ ಮಹತ್ವದ ಪ್ರಕ್ರಿಯೆಯಾಗಿದೆ. ಈ ಕಾರ್ಯವನ್ನು ವ್ಯವಸ್ಥಿತವಾಗಿ ಮತ್ತು ಯಶಸ್ವಿಯಾಗಿ ಪೂರ್ಣಗೊಳಿಸಲು ಜಿಲ್ಲೆಯ ಎಲ್ಲಾ ರಾಜಕೀಯ ಪಕ್ಷಗಳು ಜಿಲ್ಲಾಡಳಿತದೊಂದಿಗೆ ಕೈಜೋಡಿಸಬೇಕು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾ ಅಧಿಕಾರಿ ಸ್ನೇಹಲ್ ಆರ್. ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳ ಮಹತ್ವದ ಸಭೆಯಯಲ್ಲಿ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿಗಳು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
2 ದಶಕಗಳ ನಂತರ ಬೃಹತ್ ಕಾರ್ಯಾಚರಣೆ!
2002-04ನೇ ಸಾಲಿನಲ್ಲಿ ಇಂತಹ ಸಮಗ್ರ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ನಡೆದಿತ್ತು. ಇದೀಗ ಬರೋಬ್ಬರಿ 20 ವರ್ಷಗಳ ನಂತರ ದೇಶಾದ್ಯಂತ ಹಾಗೂ ರಾಜ್ಯದಲ್ಲಿ ಈ SIR ಪ್ರಕ್ರಿಯೆ ಜರುಗುತ್ತಿದೆ ಎಂದು ಡಿಸಿ ವಿವರಿಸಿದರು. ಚುನಾವಣೆಗಳ ಪಾರದರ್ಶಕತೆಗಾಗಿ ಮತದಾರರ ಪಟ್ಟಿಯ ನಿಖರತೆಯನ್ನು ಕಾಯ್ದುಕೊಳ್ಳುವುದು ಅನಿವಾರ್ಯವಾಗಿದೆ ಎಂದು ಅವರು ತಿಳಿಸಿದರು.
‘SIR’ ಪ್ರಕ್ರಿಯೆಯ ಪ್ರಮುಖ ಉದ್ದೇಶಗಳು
ಈ ಪ್ರಕ್ರಿಯೆಯಿಂ ಮತದಾರರ ಪಟ್ಟಿಯಲ್ಲಿ ಹಲವು ಪ್ರಮುಖ ಬದಲಾವಣೆಗಳಾಗುತ್ತವೆ. ಈ ಹಿನ್ನೆಲೆಯಲ್ಲಿ ಕೆಳಗಿನ ಅಂಶಗಳನ್ನು ಸರಿಪಡಿಸಲು ‘SIR’ ಸಹಕಾರಿಯಾಗಲಿದೆ
| ಕ್ರ.ಸಂ. | ಪ್ರಕ್ರಿಯೆಯ ವಿವರ | ಪ್ರಮುಖ ಕಾರ್ಯ ಹಾಗೂ ಉದ್ದೇಶಗಳು |
| 01 | ನಕಲಿ ಮತದಾರರಿಗೆ ತಡೆ | ಮತದಾರರ ಪಟ್ಟಿಯಲ್ಲಿ ಒಂದಕ್ಕಿಂತ ಹೆಚ್ಚು ಕಡೆ ದಾಖಲಾಗಿರುವ ಪುನರಾವರ್ತಿತ ಮತ್ತು ನಕಲಿ ಹೆಸರುಗಳನ್ನು ಪತ್ತೆ ಹಚ್ಚಿ ಪಟ್ಟಿಯಿಂದ ವಜಾಗೊಳಿಸುವುದು. |
| 02 | ವಲಸೆ ಮತದಾರರ ಗುರುತಿಸುವಿಕೆ | ತ್ವರಿತ ನಗರೀಕರಣ, ಶಿಕ್ಷಣ ಮತ್ತು ಉದ್ಯೋಗದ ನಿಮಿತ್ತ ಬೇರೆ ಊರು ಅಥವಾ ನಗರಗಳಿಗೆ ವಲಸೆ ಹೋದವರ ವಿವರಗಳನ್ನು ಪರಿಶೀಲಿಸಿ ನವೀಕರಿಸುವುದು. |
| 03 | ಅನರ್ಹರ ಹೆಸರುಗಳ ವಜಾ | ಮರಣ ಹೊಂದಿದ ಮತದಾರರ ಹಾಗೂ ವಿದೇಶಿ ಪೌರತ್ವ ಹೊಂದಿದ (ಅನಿವಾಸಿ/ವಿದೇಶಿ) ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಸಂಪೂರ್ಣವಾಗಿ ಮುಕ್ತಗೊಳಿಸುವುದು. |
ಬಿಎಲ್ಓಗಳಿಗೆ ಬಿಎಲ್ಎಗಳ ನೆರವು ಅತ್ಯಗತ್ಯ!
ಮತದಾರರ ಪಟ್ಟಿಯ ಮ್ಯಾಪಿಂಗ್ ಕಾರ್ಯ ಜಿಲ್ಲೆಯಲ್ಲಿ ಅತ್ಯಂತ ವೇಗವಾಗಿ ನಡೆಯುತ್ತಿದೆ. “ಪ್ರತಿ ಮತಗಟ್ಟೆ ಮಟ್ಟದಲ್ಲಿ ರಾಜಕೀಯ ಪಕ್ಷಗಳಿಂದ ನೇಮಕವಾಗಿರುವ ಬಿಎಲ್ಎ (Booth Level Agents) ಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಅವರು ಮನೆ-ಮನೆಗೆ ಭೇಟಿ ನೀಡುವ ಬಿಎಲ್ಓ (Booth Level Officers) ಗಳೊಂದಿಗೆ ಪರಸ್ಪರ ಸಮನ್ವಯತೆಯನ್ನು ಕಾಪಾಡಿಕೊಂಡು ಪೂರ್ಣಪ್ರಮಾಣದಲ್ಲಿ SIR ಪ್ರಕ್ರಿಯೆ ನಡೆಯುವಂತೆ ಸಹಕರಿಸಬೇಕು.” ಎಂದು ಜಿಲ್ಲಾಧಿಕಾರಿಗಳು ಸೂಚನೆ ನೀಡಿದರು.
ಇದೇ ವೇಳೆ ಜಿಲ್ಲಾಧಿಕಾರಿಗಳು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ವಿಶೇಷ ಸಮಗ್ರ ಪರಿಷ್ಕರಣೆಯ ಅಧಿಕೃತ ವೇಳಾಪಟ್ಟಿಯನ್ನು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಕುಲಂಕುಶವಾಗಿ ವಿವರಿಸಿ, ನಂತ ಅವರ ಅಭಿಪ್ರಾಯಗಳನ್ನು ಪಡೆಯಲು ಮುಂದಾದರು.
ಈ ‘SIR’ ಪ್ರಕ್ರಿಯೆ ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ (ADC) ಗೀತಾ ಸಿ.ಡಿ, ಜಿಲ್ಲೆಯ ಎಲ್ಲಾ ತಾಲೂಕುಗಳ ತಹಶೀಲ್ದಾರರು, ರಾಜಕೀಯ ಪಕ್ಷಗಳ ಪರವಾಗಿ ಪ್ರಕಾಶ್ ಹಳಿಯಾಳ (ಕಾಂಗ್ರೆಸ್) ಸಿದ್ದು ಕಲ್ಯಾಣಶೆಟ್ಟಿ,ಶಂಕರ ಮುಗದ (ಬಿಜೆಪಿ),ದೇವರಾಜ ಕಂಬಳಿ,ಮಂಜುನಾಥ ಎಲ್.ಹಗೇದಾರ (ಜೆಡಿಎಸ್), ಶ್ರೀಶೈಲಗೌಡ ಕಮತರ (ಜೆಡಿಯು),ನಿಂಗಪ್ಪ ರು.ಕುಡುವಕ್ಕಲಿಗರ (ಬಿಎಸ್ಪಿ) ಹಾಗೂ ಆಮ್ ಆದ್ಮಿ ಪಕ್ಷದ (AAP) ಪ್ರತಿನಿಧಿಗಳು ಸೇರಿದಂತೆ ಹಲವು ಗಣ್ಯರು ಭಾಗವಹಿಸಿ ಸಲಹೆಗಳನ್ನು ನೀಡಿದರು.
#FreedomTV #DharwadNews #SpecialIntensiveRevision #SIR2026 #ElectoralRollRevision #VoterListUpdate #DCSnehalR #ElectionCommissionOf India #BLOandBLA #TransparentElection #KarnatakaPolitics #KannadaNews #DharwadUpdatesNationalPolitics