ಜಿಲ್ಲೆಸುದ್ದಿ

ಪ್ರಶ್ನಿಸಿದಕ್ಕೆ ಪ್ರಾಧ್ಯಾಪಕನ ಮೇಲೆ ವಿದ್ಯಾರ್ಥಿ ಹಲ್ಲೆ..!

ಕಲಬುರಗಿ: ಹೋಮಿಯೋಪಥಿ ಕಾಲೇಜೊಂದರಲ್ಲಿ ಪರೀಕ್ಷಾ ಅಕ್ರಮವನ್ನು ತಡೆದ ಸಹಾಯಕ ಪ್ರಾಧ್ಯಾಪಕರ ಮೇಲೆ ವಿದ್ಯಾರ್ಥಿಯೊಬ್ಬ ಹಲ್ಲೆ ನಡೆಸಿದ್ದಾನೆ. ಕಾಲೇಜಿನಲ್ಲಿ ‘ಹೋಮಿಯೋಪಥಿಕ್ ಮಟೇರಿಯಾ ಮೆಡಿಕಾ’ ವಿಷಯದ ಆಂತರಿಕ ಪರೀಕ್ಷೆ ನಡೆಯುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಶಹಬಾಜ್ ಎಂಬ ವಿದ್ಯಾರ್ಥಿ ಪರೀಕ್ಷಾ ಕೊಠಡಿಯಲ್ಲಿ ಮೊಬೈಲ್ ಬಳಸಿ ನಕಲು ಮಾಡಲು ಪ್ರಯತ್ನಿಸುತ್ತಿದ್ದಾಗ, ಆ ಬ್ಲಾಕ್‌ನ ಮೇಲ್ವಿಚಾರಕರಾಗಿದ್ದ ಸಹಾಯಕ ಪ್ರಾಧ್ಯಾಪಕ ಶಿವರಾಜಕುಮಾರ್ ಅವರು ಅದನ್ನು ಪ್ರಶ್ನಿಸಿದ್ದಾರೆ.

ಪ್ರಾಧ್ಯಾಪಕರು ವಿದ್ಯಾರ್ಥಿಯ ಉತ್ತರ ಪತ್ರಿಕೆಯನ್ನು ಕಿತ್ತುಕೊಂಡು, ಆತನನ್ನು ಪರೀಕ್ಷಾ ಕೊಠಡಿಯಿಂದ ಹೊರಗೆ ಹೋಗುವಂತೆ ಸೂಚಿಸಿದ್ದಾರೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿ ಶಹಬಾಜ್, ಪ್ರಾಧ್ಯಾಪಕರ ಮೇಲೆಯೇ ದೈಹಿಕ ಹಲ್ಲೆ ನಡೆಸಿದ್ದಾನೆ. ವಿದ್ಯಾರ್ಥಿಯ ಈ ಅಶಿಸ್ತಿನ ವರ್ತನೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಲೇಜು ಆಡಳಿತ ಮಂಡಳಿ, ಆತನ ಪೋಷಕರಿಗೆ ವಿಷಯ ಮುಟ್ಟಿಸಿದೆ. ಅಲ್ಲದೆ, ಮುಂದಿನ ಯಾವುದೇ ಪರೀಕ್ಷೆಗಳಿಗೆ ಆತನಿಗೆ ಅವಕಾಶ ನೀಡದಿರಲು ಕಠಿಣ ನಿರ್ಧಾರ ಕೈಗೊಂಡಿದೆ.

ಪ್ರಸ್ತುತ ಈ ಘಟನೆಗೆ ಸಂಬಂಧಿಸಿದಂತೆ ಹಲ್ಲೆಗೊಳಗಾದ ಪ್ರಾಧ್ಯಾಪಕರಾಗಲಿ ಅಥವಾ ಕಾಲೇಜು ಮಂಡಳಿಯಾಗಲಿ ಪೊಲೀಸರಿಗೆ ಅಧಿಕೃತವಾಗಿ ದೂರು ನೀಡಿಲ್ಲ ಎಂದು ತಿಳಿದುಬಂದಿದೆ. ಆದರೂ, ಶೈಕ್ಷಣಿಕ ವಲಯದಲ್ಲಿ ಈ ಘಟನೆ ತೀವ್ರ ಚರ್ಚೆಗೆ ಕಾರಣವಾಗಿದೆ.

Comments (0)

Your email address will not be published. Required fields are marked *

Back to top button