ಚಿಕ್ಕಬಳ್ಳಾಪುರದಲ್ಲಿ ಮೀನುಗಳ ಮಾರಣಹೋಮ, ವಿಷವಾಗ್ತಿದ್ಯಾ ಜಿಲ್ಲೆಯ ಜೀವಜಲ?

ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಜೀವಜಲವು ವಿಷವಾಗುತ್ತಿದೆಯೇ ಎಂಬ ಆತಂಕಕಾರಿ ಪ್ರಶ್ನೆ ಈಗ ಸಾರ್ವಜನಿಕರಲ್ಲಿ ಮೂಡಿದೆ. ಜಿಲ್ಲೆಯ ಪುರಾತನ ಕಲ್ಯಾಣಿಯೊಂದರಲ್ಲಿ ಸಾವಿರಾರು ಮೀನುಗಳು ದಿಢೀರನೇ ಸಾವನ್ನಪ್ಪಿದ್ದು, ಈ ಮೀನುಗಳ ಮಾರಣಹೋಮವು ಸ್ಥಳೀಯರಲ್ಲಿ ತೀವ್ರ ಭೀತಿಯನ್ನುಂಟುಮಾಡಿದೆ. ಇತ್ತೀಚೆಗಷ್ಟೇ ಕಂದಾವರ ಕೆರೆಯಲ್ಲಿ ಇಂತಹದ್ದೇ ಘಟನೆ ನಡೆದು ಮೀನುಗಳು ಮೃತಪಟ್ಟಿದ್ದವು. ಈಗ ನಗರದ ವಾರ್ಡ್ ಸಂಖ್ಯೆ 15ರ ಭಾರತಿ ನಗರದಲ್ಲಿರುವ ಪುರಾತನ ಕಲ್ಯಾಣಿಯಲ್ಲಿ ನೂರಾರು ಮೀನುಗಳು ತೇಲುತ್ತಿದ್ದು, ಅಕ್ಕಪಕ್ಕದ ನಿವಾಸಿಗಳು ದುರ್ನಾತ ಹಾಗೂ ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.

ಮೀನುಗಳ ಈ ಸಾಮೂಹಿಕ ಸಾವಿಗೆ ನೀರಿನಲ್ಲಿ ಉಂಟಾಗಿರುವ ಮಾಲಿನ್ಯವೇ ಪ್ರಮುಖ ಕಾರಣವಿರಬಹುದು ಎಂದು ಶಂಕಿಸಲಾಗಿದೆ. ಕಲ್ಯಾಣಿಯ ನೀರು ಸಂಪೂರ್ಣವಾಗಿ ಕಲುಷಿತಗೊಂಡಿದ್ದು, ಆಮ್ಲಜನಕದ ಕೊರತೆಯಿಂದ ಮೀನುಗಳು ಮೃತಪಟ್ಟಿವೆಯೇ ಅಥವಾ ಮೀನುಗಳನ್ನು ಹಿಡಿಯಲು ಯಾರಾದರೂ ಕಿರಾತಕರು ನೀರಿಗೆ ವಿಷ ಹಾಕಿದ್ದಾರೆಯೇ ಎಂಬ ಅನುಮಾನಗಳು ವ್ಯಕ್ತವಾಗಿವೆ. ಸತ್ತ ಮೀನುಗಳು ನೀರಿನ ಮೇಲೆ ತೇಲುತ್ತಿರುವುದರಿಂದ ಸುತ್ತಮುತ್ತಲಿನ ಪರಿಸರ ಹಾಳಾಗುತ್ತಿದ್ದು, ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ನೀರಿನ ಪರೀಕ್ಷೆ ನಡೆಸಬೇಕೆಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.
ಇನ್ನು ಇತಿಹಾಸ ಪ್ರಸಿದ್ಧವಾದ ಈ ಪುರಾತನ ಕಲ್ಯಾಣಿಯ ಅಸ್ತಿತ್ವಕ್ಕೆ ಧಕ್ಕೆಯಾಗುತ್ತಿದ್ದರೂ ಪುರಾತತ್ವ ಇಲಾಖೆಯ ಅಧಿಕಾರಿಗಳು ಮಾತ್ರ ಮೌನಕ್ಕೆ ಶರಣಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಐತಿಹಾಸಿಕ ಸ್ಮಾರಕಗಳ ರಕ್ಷಣೆ ಮಾಡಬೇಕಾದ ಇಲಾಖೆಗಳು ನಿರ್ಲಕ್ಷ್ಯ ವಹಿಸಿರುವುದರಿಂದ ಇಂತಹ ಜಲಮೂಲಗಳು ಪಾಳುಬೀಳುತ್ತಿವೆ. ಜಿಲ್ಲಾಡಳಿತ ಹಾಗೂ ನಗರಸಭೆಯು ಈ ಕೂಡಲೇ ಎಚ್ಚೆತ್ತುಕೊಂಡು ಕಲ್ಯಾಣಿಯನ್ನು ಸ್ವಚ್ಛಗೊಳಿಸಿ, ಮೀನುಗಳ ಸಾವಿನ ಅಸಲಿ ಕಾರಣವನ್ನು ಪತ್ತೆಹಚ್ಚಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.




