Chikkaballapura

ಗಬ್ಬೆದ್ದು ನಾರುತ್ತಿರುವ ತಾಲ್ಲೂಕು ಕಚೇರಿ- ಸಾಂಕ್ರಾಮಿಕ ರೋಗದ ಭೀತಿ!

Worst Toilet facilities in Shidlaghatta Taluk office

ಚಿಕ್ಕಬಳ್ಳಾಪುರ: ಶಿಡ್ಲಘಟ್ಟ ತಾಲ್ಲೂಕಿನ ತಾಲ್ಲೂಕು ಕಚೇರಿ ಗಬ್ಬೆದ್ದು ನಾರುತ್ತಿದೆ. ಸಾರ್ವಜನಿಕರಿಗೆ ಮಾದರಿಯಾಗಬೇಕಾದ ಸರ್ಕಾರಿ ಕಚೇರಿಗಳು ಇಂದು ಅನೈರ್ಮಲ್ಯದ ಕೇಂದ್ರಗಳಾಗಿ ಮಾರ್ಪಡುತ್ತಿವೆ.ಇಲ್ಲಿನ ಶೌಚಾಲಯಗಳ ದುಸ್ಥಿತಿ ನೋಡಿದರೆ ಸಾರ್ವಜನಿಕರು ವಾಂತಿ ಮಾಡಿಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.ಕೆಲಸ ಕಾರ್ಯಗಳಿಗೆ ಬರುವ ಜನತೆ ಮೂಗುಮುಚ್ಚಿಕೊಂಡು ಓಡಾಡುತ್ತಿದ್ದು, ಕಚೇರಿ ರೋಗದ ಕೊಂಪೆಯಾಗುವ ದಿನಗಳು ಬಹಳ ದೂರವಿಲ್ಲ.

ಸುಸಜ್ಜಿತ ಕಟ್ಟಡವಿದ್ದರೂ ನೀರಿಲ್ಲ, ಸ್ವಚ್ಛತೆಯೂ ಇಲ್ಲ!


ತಾಲ್ಲೂಕು ಕಚೇರಿಯ ಸಿಬ್ಬಂದಿ ಹಾಗೂ ಸಾರ್ವಜನಿಕರು ಶೌಚಾಲಯಕ್ಕಾಗಿ ಹೊರಗಡೆ ಅಲೆಯುವುದನ್ನು ತಪ್ಪಿಸಲು ಕಳೆದ ಎರಡು ವರ್ಷಗಳ ಹಿಂದೆಯಷ್ಟೇ ಇಲ್ಲಿ ಸುಸಜ್ಜಿತ ಶೌಚಾಲಯವನ್ನು ನಿರ್ಮಾಣ ಮಾಡಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆ ಇಲ್ಲದ ಕಾರಣ ಇಡೀ ಶೌಚಾಲಯದ ಆವರಣ ಕಸದ ತೊಟ್ಟಿಯಂತಾಗಿದೆ.ಶೌಚಾಲಯದ ಕೊಠಡಿಗಳಲ್ಲಿ ಅಳವಡಿಸಿರುವ ಕೈ ತೊಳೆಯುವ ಸಿಂಕುಗಳಿಗೆ ನೀರೇ ಬರುತ್ತಿಲ್ಲ. ನೀರಿಲ್ಲದ ಕಾರಣ ಇಡೀ ಶೌಚಾಲಯ ದುರ್ವಾಸನೆ ಬೀರುತ್ತಿದ್ದು ಸೊಳ್ಳೆ ಹುಳಹುಪ್ಪಟೆಗಳಿಂದ ಶೌಚಾಲಯ ತುಂಬಿ ಹೋಗಿದೆ.

ಕಚೇರಿಯ ಒಳಗಷ್ಟೇ ಅಲ್ಲ, ಶೌಚಾಲಯದ ಗಬ್ಬು ವಾಸನೆ ಪಕ್ಕದ ಮುಖ್ಯ ರಸ್ತೆಯವರೆಗೂ ಹಬ್ಬುತ್ತಿದ್ದು,ರಸ್ತೆಯಲ್ಲಿ ಹಾದುಹೋಗುವ ನಾಗರಿಕರು ಮೂಗು ಮುಚ್ಚಿಕೊಂಡು ಓಡಾಡುವಂತಾಗಿದೆ.ನೀರು ಸರಬರಾಜಾಗದ ಸಿಂಕುಗಳು ಹಾಗೂ ಶೌಚಾಲಯದ ಮೂಲೆ ಮೂಲೆಗಳಲ್ಲಿ ಕಸ ತುಂಬಿ ತುಳುಕುತ್ತಿದೆ.2026 ಈ ಡಿಜಿಟಲ್ ಯುಗದಲ್ಲಿ ತಹಶೀಲ್ದಾರರ ಕಚೇರಿಯಲ್ಲಿಯೇ ಇಂತಹ ಸ್ಥಿತಿ ಎಂದರೆ, ಇನ್ನು ತಾಲ್ಲೂಕಿನ ಉಳಿದ ಹಳ್ಳಿಗಳ ಸರ್ಕಾರಿ ಕಚೇರಿಗಳ ಪರಿಸ್ಥಿತಿ ಏನು ಎಂಬುದನ್ನು ಜನರು ಊಹಿಸಿಕೊಳ್ಳಬಹುದು.

ಸಾಂಕ್ರಾಮಿಕ ರೋಗಗಳ ಭೀತಿಯಲ್ಲಿ ಸಾರ್ವಜನಿಕರು
ಪ್ರತಿನಿತ್ಯ ನೂರಾರು ಜನ ಸಾರ್ವಜನಿಕರು ತಮ್ಮ ವಿವಿಧ ಕೆಲಸ ಕಾರ್ಯಗಳಿಗಾಗಿ, ಪ್ರಮಾಣ ಪತ್ರಗಳಿಗಾಗಿ ತಾಲ್ಲೂಕು ಕಚೇರಿಗೆ ಆಗಮಿಸುತ್ತಾರೆ. ದಿನವಿಡೀ ಕಚೇರಿಯಲ್ಲಿಯೇ ಇರುವ ನೂರಾರು ಸಿಬ್ಬಂದಿಗಳೂ ಇದ್ದಾರೆ. ಆದರೆ, ಕಚೇರಿಯ ಶೌಚಾಲಯಗಳು ಗಬ್ಬೆದ್ದು ನಾರುತ್ತಿರುವುದರಿಂದ ಇಲ್ಲಿನ ಸಿಬ್ಬಂದಿ ಹಾಗೂ ಸಾರ್ವಜನಿಕರಿಗೆ ಸಾಂಕ್ರಾಮಿಕ ರೋಗಗಳು ಹರಡುವ ಭೀತಿ ಎದುರಾಗಿದೆ.ಇಷ್ಟೆಲ್ಲಾ ಅಧ್ವಾನಗಳು ಕಣ್ಣಮುಂದೇ ಕಾಣುತ್ತಿದ್ದರೂ, ಅದನ್ನು ಸ್ವಚ್ಛ ಪಡಿಸುವ ಇರಾದೆಗೂ ತಾಲ್ಲೂಕು ಆಡಳಿತ ಹಾಗೂ ಕಚೇರಿ ಸಿಬ್ಬಂದಿ ಮುಂದಾಗದೇ ಇರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.


:ಅಧಿಕಾರಿಗಳೇ ಕಚೇರಿಯ ಕೆಲಸದಲ್ಲಷ್ಟೇ ತಲ್ಲೀನರಾಗದೆ ಶೌಚಾಲಯಕ್ಕೂ ಭೇಟಿ ನೀಡಿ. ಆಡಳಿತ ಹಿರಿಯ ಅಧಿಕಾರಿಗಳು ಕೇವಲ ತಮ್ಮ ಹವಾನಿಯಂತ್ರಿತ ಕೊಠಡಿಗಳಲ್ಲಿ ಕೂರದೆ, ಒಮ್ಮೆಯಾದರೂ ಕಚೇರಿಯ ಶೌಚಾಲಯಗಳ ಕಡೆಗೆ ಮುಖ ಮಾಡಬೇಕಿದೆ. ಕಚೇರಿಗೆ ಬರುವ ಬಡ ಜನರಿಗೆ ಕನಿಷ್ಠ ಮೂಲಭೂತ ಸೌಲಭ್ಯ ಕಲ್ಪಿಸದಿರುವುದು ನಾಚಿಕೆಗೇಡಿನ ಸಂಗತಿ. ಶಿಡ್ಲಘಟ್ಟ ತಹಶೀಲ್ದಾರರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಎಚ್ಚೆತ್ತುಕೊಂಡು ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಕಲ್ಪಿಸಿ, ದಿನನಿತ್ಯ ಸ್ವಚ್ಛಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸುತ್ತಿದ್ದಾರೆ.

#ChikkaballapurNews #Shidlaghatta #TalukOfficeNegligence #SanitationIssue #DirtyToilets #PublicHealthScandal #TehsildarOffice #KarnatakaGovernment #FreedomTVGroundReport #PublicOutrage

Comments (0)

Your email address will not be published. Required fields are marked *

Back to top button