
ಸ್ಯಾಂಡಲ್ವುಡ್ನ ಜನಪ್ರಿಯ ನಟ ‘ಡಾಲಿ’ ಧನಂಜಯ್ ಹಾಗೂ ಧನ್ಯತಾ ದಂಪತಿ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಧನ್ಯತಾ ಅವರು ಇಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದು, ಧನಂಜಯ್ ಅವರ ಮನೆಯಲ್ಲಿ ಸಂಭ್ರಮದ ವಾತಾವರಣ ಮನೆಮಾಡಿದೆ. ಮೊದಲ ಬಾರಿಗೆ ತಂದೆಯಾದ ಸಂಭ್ರಮದಲ್ಲಿರುವ ಧನಂಜಯ್ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ಸಂತಸದ ವಿಚಾರವನ್ನು ಹಂಚಿಕೊಂಡಿದ್ದಾರೆ.

ನಟ ಧನಂಜಯ್ ಅವರು ತಮ್ಮ ಮಗುವಿನ ಪುಟ್ಟ ಕೈಯ ಫೋಟೋವನ್ನು ಶೇರ್ ಮಾಡುವ ಮೂಲಕ ಮಗುವಿನ ಆಗಮನವನ್ನು ಅಧಿಕೃತವಾಗಿ ಘೋಷಿಸಿದ್ದಾರೆ. ಈ ಫೋಟೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಈ ದಂಪತಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಡಾಲಿ ಮನೆಯಲ್ಲಿ ಹೊಸ ಅತಿಥಿಯ ಆಗಮನದಿಂದ ಹಬ್ಬದ ಕಳೆ ಬಂದಂತಾಗಿದ್ದು, ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.




