ಏರುತ್ತಿದೆ ಬಿಸಿಲ ಧಗೆ.. ಮಣ್ಣಿನ ಮಡಿಕೆಗಳಿಗೆ ಫುಲ್ ಡಿಮ್ಯಾಂಡ್!

ಬೇಸಿಗೆಯ ಬಿಸಿಲ ಧಗೆ ದಿನದಿಂದ ದಿನಕ್ಕೆ ಏರುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ತಂಪು ಪಾನೀಯ ಹಾಗೂ ಶೈತ್ಯೀಕರಿಸಿದ ಪದಾರ್ಥಗಳತ್ತ ಮುಖ ಮಾಡುತ್ತಿದ್ದಾರೆ. ವಿಶೇಷವಾಗಿ, ಆರೋಗ್ಯದ ದೃಷ್ಟಿಯಿಂದ ಫ್ರಿಜ್ ನೀರಿಗಿಂತ ಮಣ್ಣಿನ ಮಡಕೆಯ ನೀರು ಉತ್ತಮ ಎಂಬ ಕಾರಣಕ್ಕೆ ಈಗ ಮಾರುಕಟ್ಟೆಯಲ್ಲಿ ಮಣ್ಣಿನ ಮಡಿಕೆಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗಿದೆ. ಎಲ್ಲೆಡೆ ಜನಸಾಮಾನ್ಯರು ತಂಪು ನೀರಿಗಾಗಿ ಮಣ್ಣಿನ ಮಡಿಕೆಗಳನ್ನೇ ಮೊದಲ ಆದ್ಯತೆಯನ್ನಾಗಿ ಆಯ್ಕೆ ಮಾಡಿಕೊಳ್ಳುತ್ತಿರುವುದು ಕಂಡುಬರುತ್ತಿದೆ.

ನಗರದ ಮಾರುಕಟ್ಟೆಗಳು ಹಾಗೂ ರಸ್ತೆಬದಿಯ ಅಂಗಡಿಗಳಲ್ಲಿ ಮಣ್ಣಿನ ಮಡಿಕೆಗಳ ಮಾರಾಟ ಜೋರಾಗಿ ನಡೆಯುತ್ತಿದ್ದು, ವ್ಯಾಪಾರಿಗಳು ವಿವಿಧ ವಿನ್ಯಾಸದ ಮಡಿಕೆಗಳನ್ನು ಪ್ರದರ್ಶನಕ್ಕಿಟ್ಟಿದ್ದಾರೆ. ಮಡಿಕೆಗಳ ವಿನ್ಯಾಸ ಮತ್ತು ಗಾತ್ರಕ್ಕೆ ಅನುಗುಣವಾಗಿ ಬೆಲೆಯಲ್ಲಿಯೂ ಏರಿಕೆಯಾಗಿದ್ದು, ಪ್ರಸ್ತುತ ಒಂದು ಮಡಿಕೆಯು 300 ರೂಪಾಯಿಯಿಂದ 400 ರೂಪಾಯಿವರೆಗೆ ಮಾರಾಟವಾಗುತ್ತಿದೆ. ಬಿಸಿಲಿನ ಬೇಗೆಯಿಂದ ತಪ್ಪಿಸಿಕೊಳ್ಳಲು ಫ್ರಿಜ್ ಬಳಸುತ್ತಿದ್ದವರು ಕೂಡ ಈಗ ಪ್ರಕೃತಿ ಸ್ನೇಹಿಯಾದ ಮಡಿಕೆಗಳ ಮೊರೆ ಹೋಗುತ್ತಿರುವುದರಿಂದ ಕುಂಬಾರರ ಮುಖದಲ್ಲಿ ಮಂದಹಾಸ ಮೂಡಿದೆ.