
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಮಲೆ ಮಹದೇಶ್ವರ ಬೆಟ್ಟದಲ್ಲಿ KSRTC ಬಸ್ ಪಲ್ಟಿಯಾಗಿದ್ದು, ಭೀಕರ ಅಪಘಾತ ಸಂಭವಿಸಿದೆ. ಬೆಟ್ಟದಿಂದ ಮೈಸೂರಿಗೆ ವಾಪಸ್ ಬರುತ್ತಿದ್ದ ಮೈಸೂರು ಡಿಪೋಗೆ ಸೇರಿದ ಕೆಎಸ್ಆರ್ಟಿಸಿ ಬಸ್, ತಾಳುಬೆಟ್ಟದ ಸಮೀಪದ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿದೆ. ಈ ಅಪಘಾತದ ಭೀಕರತೆಗೆ ಬಸ್ಸಿನಲ್ಲಿದ್ದ 30ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡಿದ್ದು, ಸ್ಥಳದಲ್ಲಿ ಗಾಯಾಳುಗಳ ನರಳಾಟ ಮುಗಿಲು ಮುಟ್ಟುವಂತಿತ್ತು. ಅದೃಷ್ಟವಶಾತ್ ದೊಡ್ಡ ಮಟ್ಟದ ಪ್ರಾಣಾಪಾಯ ಸಂಭವಿಸದಿದ್ದರೂ, ಗಾಯಾಳುಗಳನ್ನು ತಕ್ಷಣವೇ ಹನೂರು ಭಾಗದ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಕೇವಲ ಒಂದು ವಾರದಲ್ಲಿ ಮಲೆ ಮಹದೇಶ್ವರ ಬೆಟ್ಟದ ರಸ್ತೆಯಲ್ಲಿ ಸಂಭವಿಸಿದ ನಾಲ್ಕನೇ ಅಪಘಾತ ಇದಾಗಿದ್ದು, ಭಕ್ತರು ಹಾಗೂ ಪ್ರಯಾಣಿಕರಲ್ಲಿ ತೀವ್ರ ಆತಂಕ ಮೂಡಿಸಿದೆ. ಹನೂರು ತಾಲೂಕಿನ ವ್ಯಾಪ್ತಿಯಲ್ಲಿ ಪದೇ ಪದೇ ಅಪಘಾತಗಳು ಸಂಭವಿಸುತ್ತಿರುವುದು ರಸ್ತೆ ಸುರಕ್ಷತೆಯ ಬಗ್ಗೆ ದೊಡ್ಡ ಪ್ರಶ್ನೆಯನ್ನು ಎತ್ತಿದೆ. ಸರಣಿ ಅಪಘಾತಗಳ ಹಿನ್ನೆಲೆಯಲ್ಲಿ ಗಾಯಾಳುಗಳ ಸಂಬಂಧಿಕರು ಹಾಗೂ ಸಾರ್ವಜನಿಕರು ಆಸ್ಪತ್ರೆಗಳ ಮುಂದೆ ಪರದಾಡುತ್ತಿದ್ದು, ಸಾರಿಗೆ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಮಲೆ ಮಹದೇಶ್ವರ ಬೆಟ್ಟದ ಈ ರಸ್ತೆ ಈಗ ಅಪಾಯದ ಹಾದಿಯಾಗಿ ಮಾರ್ಪಡುತ್ತಿದೆಯೇ ಎಂಬ ಅನುಮಾನ ಮೂಡುತ್ತಿದೆ.

ಈ ಸರಣಿ ಅಪಘಾತಗಳಿಗೆ ಕೆಎಸ್ಆರ್ಟಿಸಿ ಬಸ್ಗಳ ಫಿಟ್ನೆಸ್ ಕೊರತೆ ಕಾರಣವೋ ಅಥವಾ ಘಾಟಿಯ ತಿರುವುಗಳಲ್ಲಿ ಚಾಲಕರ ನಿರ್ಲಕ್ಷ್ಯ ಕಾರಣವೋ ಎಂಬ ಬಗ್ಗೆ ಸಾರಿಗೆ ಇಲಾಖೆ ಉತ್ತರ ನೀಡಬೇಕಿದೆ. ಬೆಟ್ಟದಂತಹ ಕಠಿಣ ರಸ್ತೆಗಳಲ್ಲಿ ಸಂಚರಿಸುವ ಬಸ್ಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಈಗ ಸಂಶಯ ವ್ಯಕ್ತಪಡಿಸುತ್ತಿದ್ದಾರೆ. ಪ್ರಯಾಣಿಕರ ಪ್ರಾಣದ ಜೊತೆ ಚೆಲ್ಲಾಟವಾಡುತ್ತಿರುವ ಇಂತಹ ಘಟನೆಗಳು ಮರುಕಳಿಸದಂತೆ ತಡೆಯಲು ಸರ್ಕಾರ ಮತ್ತು ಸಾರಿಗೆ ಇಲಾಖೆ ಕೂಡಲೇ ಎಚ್ಚೆತ್ತುಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ.




