Top Newsವೈರಲ್ ನ್ಯೂಸ್ಸುದ್ದಿ

ಕ್ಯಾಬ್‌ನಲ್ಲಿ ಮಗುವನ್ನು ಮರೆತು ಹೋದ ಪೋಷಕರು; ಪೊಲೀಸರ ಮಿಂಚಿನ ಕಾರ್ಯಾಚರಣೆ

ಬೆಂಗಳೂರು: ಹೆನ್ನೂರು ವ್ಯಾಪ್ತಿಯಲ್ಲಿ ಪೋಷಕರ ನಿರ್ಲಕ್ಷ್ಯದಿಂದ ನಡೆದಿದ್ದ ದೊಡ್ಡ ಅನಾಹುತವೊಂದು ಪೊಲೀಸರ ಚಾಣಾಕ್ಷತನದಿಂದ ತಪ್ಪಿದೆ. ಇಸ್ಕಾನ್ ದೇವಸ್ಥಾನಕ್ಕೆ ಕುಟುಂಬದವರೊಂದಿಗೆ ತೆರಳಿದ್ದ 4 ವರ್ಷದ ಬಾಲಕ ಜಿಯಾನ್ ಚುಂಗಿ, ಮರಳಿ ಬರುವಾಗ ಕ್ಯಾಬ್‌ನ ಹಿಂಬದಿ ಸೀಟಿನಲ್ಲಿ ಗಾಢ ನಿದ್ರೆಗೆ ಜಾರಿದ್ದ. ಅಪಾರ್ಟ್‌ಮೆಂಟ್‌ ತಲುಪಿದ ಗಡಿಬಿಡಿಯಲ್ಲಿ ಪೋಷಕರು ಮಗುವನ್ನು ಗಮನಿಸದೆ ಇಳಿದು ಮನೆಗೆ ಹೋಗಿದ್ದಾರೆ. ಇತ್ತ ಚಾಲಕನೂ ಮಗು ಇರುವುದನ್ನು ಗಮನಿಸದೆ ಮುಂದಿನ ಸವಾರಿಗಳಿಗೆ ತೆರಳಿದ್ದಾನೆ.

ಮನೆ ತಲುಪಿದ ನಂತರ ಮಗು ನಾಪತ್ತೆಯಾಗಿರುವ ಸತ್ಯ ತಿಳಿದು ಪೋಷಕರು ಆತಂಕಗೊಂಡಿದ್ದಾರೆ. ಕೂಡಲೇ ‘ನಮ್ಮ 112’ ಸಹಾಯವಾಣಿಗೆ ಕರೆ ಮಾಡಿದ್ದು, ಕೇವಲ ಎರಡೇ ನಿಮಿಷಗಳಲ್ಲಿ ಹೊಯ್ಸಳ ಸಿಬ್ಬಂದಿಯಾದ ಎಎಸ್‌ಐ ಮಂಜಪ್ಪ ಕೊಪ್ಪಳ ಮತ್ತು ಸತೀಶ್ ಕುಮಾರ್ ಸ್ಥಳಕ್ಕೆ ಧಾವಿಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿ, ತಾಂತ್ರಿಕ ನೆರವಿನೊಂದಿಗೆ ಕ್ಯಾಬ್ ಚಾಲಕನನ್ನು ಪತ್ತೆಹಚ್ಚಿದ ಪೊಲೀಸರು ಆತನಿಗೆ ಕರೆ ಮಾಡಿ ವಾಹನ ತಪಾಸಣೆ ಮಾಡುವಂತೆ ಸೂಚಿಸಿದ್ದಾರೆ.

ವಿಪರ್ಯಾಸವೆಂದರೆ, ಪೊಲೀಸರು ಕರೆ ಮಾಡುವ ಹೊತ್ತಿಗೆ ಆ ಕ್ಯಾಬ್ ಅದಾಗಲೇ ಎರಡು ಟ್ರಿಪ್‌ಗಳನ್ನು ಪೂರೈಸಿತ್ತು! ಆದರೂ ಚಾಲಕನಿಗಾಗಲಿ ಅಥವಾ ಅದರಲ್ಲಿ ಪ್ರಯಾಣಿಸಿದ ಇತರರಿಗಾಗಲಿ ನಿದ್ರಿಸುತ್ತಿದ್ದ ಮಗು ಗಮನಕ್ಕೆ ಬಂದಿರಲಿಲ್ಲ. ಪೊಲೀಸರ ಸೂಚನೆಯಂತೆ ಚಾಲಕ ಹಿಂಬದಿ ಸೀಟು ಪರೀಕ್ಷಿಸಿದಾಗ ಜಿಯಾನ್ ನಿದ್ರಿಸುತ್ತಿರುವುದು ಪತ್ತೆಯಾಗಿದೆ. ಮಗುವನ್ನು ಎಚ್ಚರಿಸದೆಯೇ ತಕ್ಷಣ ಅಪಾರ್ಟ್‌ಮೆಂಟ್‌ಗೆ ಮರಳುವಂತೆ ಚಾಲಕನಿಗೆ ನಿರ್ದೇಶನ ನೀಡಲಾಯಿತು.

ಕಣ್ಮರೆಯಾದ ಕೇವಲ ಒಂದು ಗಂಟೆಯೊಳಗೆ ಬಾಲಕ ಸುರಕ್ಷಿತವಾಗಿ ಪೋಷಕರ ಮಡಿಲು ಸೇರಿದ್ದಾನೆ. ವಿಶೇಷವೆಂದರೆ ಮಗು ಮನೆಗೆ ತಲುಪುವವರೆಗೂ ನಿದ್ರೆಯಲ್ಲೇ ಇತ್ತು. ಮಗುವನ್ನು ಪೋಷಕರಿಗೆ ಹಸ್ತಾಂತರಿಸಿದ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಘಟನೆಯು ಪಾರ್ಕಿಂಗ್ ಅಥವಾ ಕ್ಯಾಬ್‌ಗಳಿಂದ ಇಳಿಯುವಾಗ ಮಕ್ಕಳ ಬಗ್ಗೆ ಹೆಚ್ಚಿನ ಗಮನ ಹರಿಸಬೇಕೆಂಬ ಎಚ್ಚರಿಕೆಯನ್ನು ನೀಡಿದೆ.

Comments (0)

Your email address will not be published. Required fields are marked *

Back to top button