ಜಿಲ್ಲೆಸುದ್ದಿ

ಸಾಲಗಾರರಿಂದ ತಪ್ಪಿಸಿಕೊಳ್ಳಲು ಮುಖಕ್ಕೆ ಆ್ಯಸಿಡ್ ಹಾಕಿಕೊಂಡು ಹೈ ಡ್ರಾಮಾ

ಮಂಡ್ಯ: ಜಿಲ್ಲೆಯ ಪಾಂಡವಪುರ ತಾಲೂಕಿನ ಕ್ಯಾತನಹಳ್ಳಿಯಲ್ಲಿ ಸಿನಿಮೀಯ ಶೈಲಿಯ ದರೋಡೆ ಪ್ರಕರಣವೊಂದು ಭೇದಿಸಲಾಗಿದ್ದು, ಸತ್ಯ ತಿಳಿಯುತ್ತಿದ್ದಂತೆ ಸ್ವತಃ ಪೊಲೀಸರೇ ದಂಗಾಗಿದ್ದಾರೆ. ಸಾಲಗಾರರು ಹಾಗೂ ಚಿನ್ನ ಅಡವಿಟ್ಟವರಿಂದ ತಪ್ಪಿಸಿಕೊಳ್ಳಲು ಮಹಾಲಕ್ಷ್ಮೀ ಜ್ಯುವೆಲರಿ ಶಾಪ್ ಮಾಲೀಕ ಜಿತೇಂದ್ರ ಸಿಂಗ್ ತನ್ನ ಮೇಲೆ ತಾನೇ ಆ್ಯಸಿಡ್ ದಾಳಿ ಮಾಡಿಕೊಂಡು, ಅಂಗಡಿ ದರೋಡೆಯಾಗಿದೆ ಎಂದು ನಾಟಕವಾಡಿದ್ದ. ಆದರೆ ಪೊಲೀಸರ ಚಾಣಾಕ್ಷ ತನಿಖೆಯಿಂದ ಈತನ ಕೃತ್ಯ ಬಯಲಾಗಿದ್ದು, ಸದ್ಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

ಮೂಲತಃ ರಾಜಸ್ಥಾನದವನಾದ ಜಿತೇಂದ್ರ ಸಿಂಗ್ ಕಳೆದ ಹಲವು ವರ್ಷಗಳಿಂದ ಇಲ್ಲಿ ಅಂಗಡಿ ನಡೆಸುತ್ತಿದ್ದ. ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಏರಿಕೆಯಾಗಿರುವ ಕಾರಣ, ಅಡವಿಟ್ಟವರಿಗೆ ಚಿನ್ನ ನೀಡಲಾಗದೆ ಮತ್ತು ಸಾಲಗಾರರ ಕಾಟ ತಾಳಲಾರದೆ ಈತ ಸುಳ್ಳು ಕತೆ ಹೆಣೆದಿದ್ದ. 170 ಗ್ರಾಂ ಚಿನ್ನ ಹಾಗೂ 8 ಕೆಜಿ ಬೆಳ್ಳಿ ದರೋಡೆಯಾಗಿದೆ ಮತ್ತು ದುಷ್ಕರ್ಮಿಗಳು ಸಿಸಿಟಿವಿ ಡಿವಿಆರ್ ಸಮೇತ ಪರಾರಿಯಾಗಿದ್ದಾರೆ ಎಂದು ಆತ ದೂರು ನೀಡಿದ್ದ. ಆಸ್ಪತ್ರೆಗೆ ದಾಖಲಾಗಿದ್ದ ಜಿತೇಂದ್ರನನ್ನು ಪೊಲೀಸರು ವಿಚಾರಣೆ ನಡೆಸಿದಾಗ ಅನುಮಾನ ಮೂಡಲು ಶುರುವಾಯಿತು.

ಪೊಲೀಸರ ತನಿಖೆಯಲ್ಲಿ ಒಂದು ಪ್ರಮುಖ ಸಂಗತಿ ಬಯಲಾಯಿತು; ಆ್ಯಸಿಡ್ ದಾಳಿಯಾಗಿದ್ದರೆ ಕಣ್ಣಿಗೆ ಹಾನಿಯಾಗಬೇಕಿತ್ತು, ಆದರೆ ಜಿತೇಂದ್ರನ ಮುಖಕ್ಕೆ ಮಾತ್ರ ಗಾಯಗಳಾಗಿದ್ದವು. ಅಲ್ಲದೆ, ಬಂಗಾರಕ್ಕೆ ಬಳಸುವ ರಾಸಾಯನಿಕವನ್ನೇ ಈತ ಬಳಸಿಕೊಂಡಿದ್ದ ಎಂಬುದು ದೃಢಪಟ್ಟಿತು. ಹೆಚ್ಚಿನ ವಿಚಾರಣೆ ನಡೆಸಿದಾಗ, ಎಲ್ಲರನ್ನು ನಂಬಿಸಿ ಅಂಗಡಿ ಮುಚ್ಚಿ ತನ್ನ ತವರು ರಾಜ್ಯ ರಾಜಸ್ಥಾನಕ್ಕೆ ಪರಾರಿಯಾಗಲು ಈ ಪ್ಲ್ಯಾನ್ ಮಾಡಿದ್ದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.

ತಮ್ಮದೇ ದಾಟಿಯಲ್ಲಿ ವಿಚಾರಣೆ ನಡೆಸಿ ದರೋಡೆ ನಾಟಕ ಬಯಲಿಗೆಳೆದ ಕ್ಯಾತನಹಳ್ಳಿ ಪೊಲೀಸರು, ಈಗ ಜಿತೇಂದ್ರ ಸಿಂಗ್ ವಿರುದ್ಧವೇ ಪ್ರಕರಣ ದಾಖಲಿಸಿ ಆತನನ್ನು ಕಂಬಿ ಎಣಿಸುವಂತೆ ಮಾಡಿದ್ದಾರೆ. ಸಾಲದಿಂದ ಮುಕ್ತಿ ಪಡೆಯಲು ಹೋಗಿ ಈಗ ಜೈಲು ಪಾಲಾಗಿರುವ ಈತನ ಕೃತ್ಯ ಜಿಲ್ಲೆಯಾದ್ಯಂತ ಭಾರಿ ಚರ್ಚೆಗೆ ಕಾರಣವಾಗಿದೆ.

Comments (0)

Your email address will not be published. Required fields are marked *

Back to top button