
ಧಾರವಾಡ/ಬೆಂಗಳೂರು: ರಾಜ್ಯದಲ್ಲಿ ಸಿಎಂ ಬದಲಾವಣೆಯ ಆಗಿಯೇ ಹೋಯ್ತು. ಇತ್ತ ಬೆಂಗಳೂರು ಮತ್ತು ದೆಹಲಿಯಲ್ಲಿ ರಾಜಕೀಯ ದಾಳಗಳು ಉರುಳುತ್ತಿದ್ದರೆ, ಅತ್ತ ಉತ್ತರ ಕರ್ನಾಟಕದ ಪುಟ್ಟ ಗ್ರಾಮವೊಂದರಲ್ಲಿ ಯುಗಾದಿಯಂದು ನುಡಿದಿದ್ದ ಭವಿಷ್ಯ ಈಗ ಅಕ್ಷರಶಃ ನಿಜವಾಗಿದೆ! ಹೌದು, ಧಾರವಾಡ ಜಿಲ್ಲೆಯ ಉಪ್ಪಿನ ಬೆಟಗೇರಿ ಬಳಿಯ ಹನುಮನಕೊಪ್ಪ ಗ್ರಾಮದ ಮಣ್ಣಿನ ಬೊಂಬೆಗಳ ಭವಿಷ್ಯ ಈಗ ರಾಜ್ಯಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದೆ.

ಬೊಂಬೆ ನುಡಿದಿದ್ದ ಭವಿಷ್ಯ!
ಹನುಮನಕೊಪ್ಪ ಗ್ರಾಮದಲ್ಲಿ ಪ್ರತಿ ವರ್ಷ ಯುಗಾದಿ ಅಮಾವಾಸ್ಯೆಯ ದಿನದಂದು ಹಳ್ಳದ ದಂಡೆಯ ಮೇಲೆ ನಾಲ್ಕು ದಿಕ್ಕುಗಳನ್ನು ಸೂಚಿಸುವ ನಾಲ್ಕು ಮಣ್ಣಿನ ಬೊಂಬೆಗಳನ್ನು ಕೂರಿಸಿ, ವಿಶೇಷ ಫಲ ಹಾಕುವ ವಿಶಿಷ್ಟ ಪದ್ಧತಿ ನಡೆದುಕೊಂಡು ಬಂದಿದೆ. ರಾತ್ರಿ ಇಡೀ ಬಿಟ್ಟ ಈ ಬೊಂಬೆಗಳನ್ನು ಮರುದಿನ ಮುಂಜಾನೆ ಗ್ರಾಮಸ್ಥರು ಬಂದು ವೀಕ್ಷಿಸುತ್ತಾರೆ. ಈ ವೇಳೆ ಯಾವ ದಿಕ್ಕಿನ ಬೊಂಬೆಯ ಆಕೃತಿಗೆ ಪೆಟ್ಟಾಗಿರುತ್ತದೆಯೋ, ಆ ದಿಕ್ಕಿನ ದೇಶದ ಅಥವಾ ರಾಜ್ಯದ ನಾಯಕರಿಗೆ ಮರಣ ಅಥವಾ ದೊಡ್ಡ ಸಂಕಷ್ಟ ಎದುರಾಗುತ್ತದೆ ಎನ್ನುವುದು ಇಲ್ಲಿನ ಜನರ ಅಖಂಡ ನಂಬಿಕೆ.
ಈ ಬಾರಿ ಯುಗಾದಿಯಂದು ಕರ್ನಾಟಕ ದಿಕ್ಕಿನ ಬೊಂಬೆಗೆ ಪೆಟ್ಟಾಗಿತ್ತು! ಅಂದರೆ, ರಾಜ್ಯದ ಸರ್ವೋಚ್ಚ ನಾಯಕನ ಕುರ್ಚಿಗೆ ಕುತ್ತು ಬರಲಿದೆ, ದೊಡ್ಡ ಬದಲಾವಣೆ ಗಾಳಿ ಬೀಸಲಿದೆ ಎಂಬ ಮುನ್ಸೂಚನೆಯನ್ನು ಆ ಮಣ್ಣಿನ ಬೊಂಬೆ ಅಂದೇ ನೀಡಿತ್ತು. ಅದರಂತೆ ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ, ಡಿ.ಕೆ. ಶಿವಕುಮಾರ್ ಹೊಸ ಸಾರಥ್ಯ ವಹಿಸಿಕೊಳ್ಳುತ್ತಿರುವುದು ಬೊಂಬೆ ನುಡಿದ ಭವಿಷ್ಯಕ್ಕೆ ಸಾಕ್ಷಿಯಂತಿದೆ. ಇದರೊಂದಿಗೆ ನಾಯಕರ ನಡುವಿನ ಕುರ್ಚಿ ಕಾದಾಟಕ್ಕೂ ಬ್ರೇಕ್ ಬಿದ್ದಿದೆ.
ಈ ಗ್ರಾಮದ ಬೊಂಬೆ ಭವಿಷ್ಯ ಸುಳ್ಳಾದ ಉದಾಹರಣೆಗಳೇ ಇಲ್ಲ ಎನ್ನುತ್ತಾರೆ ಸ್ಥಳೀಯರು. ಈ ಹಿಂದೆ ಉತ್ತರ ದಿಕ್ಕಿನ ಬೊಂಬೆಗೆ ಪೆಟ್ಟಾದಾಗ ಅದೇ ವರ್ಷ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಹತ್ಯೆಯಾಗಿತ್ತು. ಇಷ್ಟೇ ಅಲ್ಲದೆ, ರಾಜ್ಯದಲ್ಲಿ ಬಿ.ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಯುವ ಮುನ್ನವೂ ಇದೇ ಹನುಮನಕೊಪ್ಪದ ಬೊಂಬೆಗೆ ಪೆಟ್ಟಾಗಿತ್ತು! ಈಗ ಸಿದ್ದರಾಮಯ್ಯ ಅವರ ಬದಲಾವಣೆಯೂ ತದ್ರೂಪಾಗಿ ನಿಜವಾಗುವ ಮೂಲಕ ಹನುಮನಕೊಪ್ಪದ ಈ ಅಪರೂಪದ ಪದ್ಧತಿ ಮತ್ತು ನಂಬಿಕೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ.
#FreedomTV #BombeBhavishya #Hanumanakoppa #Dharwad #KarnatakaPolitics #CMChange #Siddaramaiah #DKShivakumar #UgadiBhavishya #AstrologyPolitics #UppinaBetageri #KarnatakaNews #TrendingKannada #PoliticalProphecy




