HUBLIರಾಜಕೀಯ

ಸಚಿವನಾಗಿ ಕೆಲಸ ಮಾಡಲು ನಾನು ರೆಡಿ – ಎಫ್.ಹೆಚ್. ಜಕ್ಕಪ್ಪನವರ್!

MLC jakkappanavar wish to become minister

ಹುಬ್ಬಳ್ಳಿ: ರಾಜ್ಯ ರಾಜಕಾರಣದಲ್ಲಿ ಹೊಸ ಸಿಎಂ ಬಂದ ಮೇಲೆ ಸಚಿವ ಸಂಪುಟ ಸೇರಲು ಕಾಂಗ್ರೆಸ್ ನಾಯಕರಲ್ಲಿ ತೀವ್ರ ಪೈಪೋಟಿ ಶುರುವಾಗಿದೆ. ಕೆಪಿಸಿಸಿ ಎಸ್ಸಿ (SC) ಘಟಕದ ಮಾಜಿ ರಾಜ್ಯಾಧ್ಯಕ್ಷ ಹಾಗೂ ಪ್ರಸ್ತುತ ಪರಿಷತ್ ಸದಸ್ಯರಾಗಿರುವ ಎಫ್.ಹೆಚ್. ಜಕ್ಕಪ್ಪನವರ್ ಅವರು ತಮಗೂ ಸಚಿವನಾಗಿ ಇಲಾಖೆಯ ಮೂಲಕ ಜನಸೇವೆ ಮಾಡುವ ಆಸೆಯಿದೆ ಎಂದು ಬಹಿರಂಗವಾಗಿ ತಮ್ಮ ಇಂಗಿತ ವ್ಯಕ್ತಪಡಿಸಿದ್ದಾರೆ.

ಹೈಕಮಾಂಡ್ ಜವಾಬ್ದಾರಿ ನೀಡಿದ್ರೆ ನಿಭಾಯಿಸುವೆ!


ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಎಫ್.ಹೆಚ್. ಜಕ್ಕಪ್ಪನವರ್, “ಧಾರವಾಡ ಜಿಲ್ಲೆಯಲ್ಲಿ ನಾನು ಕಾಂಗ್ರೆಸ್‌ನ ಹಿರಿಯ ಕಾರ್ಯಕರ್ತನಾಗಿ ದಶಕಗಳಿಂದ ಸೇವೆ ಸಲ್ಲಿಸಿದ್ದೇನೆ. ನನಗೆ ನಾಯಕ ಅನಿಸಿಕೊಳ್ಳುವ ಆಸೆಯಿಲ್ಲ, ಪಕ್ಷದ ಶಿಸ್ತಿನ ಸಿಪಾಯಿಯಾಗಿ ಕೆಲಸ ಮಾಡುತ್ತಿದ್ದೇನೆ. ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಜೀ ಹಾಗೂ ರಾಜ್ಯ ನಾಯಕರು ಒಂದು ವೇಳೆ ಸಚಿವ ಸ್ಥಾನ ನೀಡಿದ್ದಲ್ಲಿ ಅದನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸಲು ನಾನು ಸಿದ್ಧನಿದ್ದೇನೆ” ಎಂದರು.
“2008ರಲ್ಲಿ ಪಕ್ಷ ನನಗೆ ಟಿಕೆಟ್ ಕೊಟ್ಟು ಸ್ಪರ್ಧೆ ಮಾಡಿಸಿತ್ತು. 2013ರಲ್ಲಿ ಟಿಕೆಟ್ ಸಿಗದಿದ್ದರೂ ಬಂಡಾಯ ಏಳದೆ ಪಕ್ಷ ಸಂಘಟನೆಯಲ್ಲಿ ತೊಡಗಿಸಿಕೊಂಡೆ. ನನ್ನ ಸೇವೆಯನ್ನು ಗುರುತಿಸಿ ಹೈಕಮಾಂಡ್ ಪರಿಷತ್ ಸದಸ್ಯನನ್ನಾಗಿ ಮಾಡಿದೆ. ಈಗ ಸಚಿವ ಸ್ಥಾನದ ಬೇಡಿಕೆ ನಮ್ಮದಾಗಿದೆ, ಆದರೆ ಅಂತಿಮವಾಗಿ ಈಡೇರಿಸುವುದು ಪಕ್ಷದ ವರಿಷ್ಠರಿಗೆ ಬಿಟ್ಟ ವಿಚಾರ.” ಎಂದು ಎಫ್.ಹೆಚ್. ಜಕ್ಕಪ್ಪನವರ ನುಡಿದರು.

ಇದೇ ವೇಳೆ ದೆಹಲಿ ಪ್ರವಾಸದ ಕುರಿತು ಪ್ರತಿಕ್ರಿಯಿಸಿದ ಅವರು, ತಾವು ದೆಹಲಿಗೆ ಹೋಗುತ್ತಿರುವುದು ನಿಜ. ಆದರೆ ಸಚಿವ ಸ್ಥಾನಕ್ಕಾಗಿ ಮಾತ್ರವಲ್ಲ, ಬೇರೆ ಬೇರೆ ಪಕ್ಷದ ವಿಚಾರಗಳ ಚರ್ಚೆಗಾಗಿ ಹೈಕಮಾಂಡ್ ಭೇಟಿ ಮಾಡುತ್ತಿದ್ದೇವೆ. ಕಳೆದ ಎರಡು ತಿಂಗಳಿಂದ ಹಲವು ಬಾರಿ ಹೈಕಮಾಂಡ್ ನಾಯಕರನ್ನು ಭೇಟಿ ಮಾಡಿ ಬಂದಿರುವುದಾಗಿ ತಿಳಿಸಿದರು.

ಸಿದ್ದರಾಮಯ್ಯನವರ ನಡೆ ಐತಿಹಾಸಿಕ!
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಪ್ರಕ್ರಿಯೆ ಅತ್ಯಂತ ಸುಗಮವಾಗಿ ನಡೆದಿರುವುದಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ದೊಡ್ಡ ಗುಣವೇ ಕಾರಣ ಎಂದು ಜಕ್ಕಪ್ಪನವರ್ ಶ್ಲಾಘಿಸಿದರು. ಮಾಜಿ ಸಿಎಂ ಸಿದ್ದರಾಮಯ್ಯನವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ, ಈಗ ದೊಡ್ಡ ಮನಸ್ಸಿನಿಂದ ಅಧಿಕಾರ ಹಸ್ತಾಂತರ ಮಾಡಿದ್ದಾರೆ. ಯಾವುದೇ ಗೊಂದಲಗಳಿಗೆ ಅವಕಾಶ ನೀಡದ ಅವರ ನಡೆ ಇತಿಹಾಸದಲ್ಲಿ ಉಳಿಯಲಿದೆ.

ಕಾಂಗ್ರೆಸ್ ಕಟ್ಟಾಳು ಡಿ.ಕೆ. ಶಿವಕುಮಾರ್ ಅವರನ್ನು ಸಿಎಂ ಮಾಡಲು ಸಿಎಲ್‌ಪಿ (CLP) ಸಭೆಯಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ. ಜುಲೈ 3ರಂದು ಲೋಕ ಭವನದಲ್ಲಿ ಡಿಕೆಶಿಯವರು ಸರಳ ರೀತಿಯಲ್ಲಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ನಿಯೋಜಿತ ಸಿಎಂ ಆಗಿದ್ದರೂ ಕೂಡ, ಸಿದ್ದರಾಮಯ್ಯನವರ ಸಲಹೆ-ಸೂಚನೆಗಳನ್ನು ಪಡೆದುಕೊಂಡೇ ಮುನ್ನಡೆಯುತ್ತಾರೆ. ಡಿಕೆಶಿಯವರೊಂದಿಗೆ ಹಲವು ಹಿರಿಯ ನಾಯಕರು ಸಚಿವರಾಗಿ ಅಂದೇ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಮಾಹಿತಿ ನೀಡಿದರು.

FreedomTV #FHJakkappanavar #Hubballi #CongressCabinet #DKShivakumar #Siddaramaiah #KarnatakaPolitics #NewCMDKS #AICC #MallikarjunKharge #CabinetBerth #KarnatakaNews #KPCC #PoliticalUpdatesಕನ್ನಡ

Comments (0)

Your email address will not be published. Required fields are marked *

Back to top button