KOLARಕ್ರೈಂ ಸ್ಟೋರಿ

ಹೊಸ ಡಿಸೈನ್ ಆಸೆಗೆ 10 ಕೋಟಿ ಒಡವೆ ಗೋವಿಂದ!

ಕೋಲಾರ/ಮಾಲೂರು: ಹಳೇ ಒಡವೆಗಳನ್ನು ಕರಗಿಸಿ ಹೊಸ ಡಿಸೈನ್‌ನ ಒಡವೆ ಮಾಡಿಸಬೇಕೇ?ಈ ನ್ಯೂಸ್ ನೋಡಿ ಬುದ್ದಿ ಕಲೀರಿ ಸಿನಿಮಾ ಸ್ಟೈಲ್‌ನಲ್ಲಿ ನೂರಾರು ಅಮಾಯಕ ಮಹಿಳೆಯರಿಗೆ, ಕೂಲಿ ಕಾರ್ಮಿಕರಿಗೆ ಹಾಗೂ ರೈತರಿಗೆ ಬರೋಬರಿ 10 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಒಡವೆಗಳನ್ನು ದೋಚಿ ಜ್ಯುವೆಲರಿ ಮಾಲೀಕನೊಬ್ಬ ರಾತ್ರೋರಾತ್ರಿ ಕುಟುಂಬ ಸಮೇತ ಎಸ್ಕೇಪ್ ಆಗಿರುವ ಘಟನೆ ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನಲ್ಲಿ ಬೆಳಕಿಗೆ ಬಂದಿದೆ.

ಆಸೆ ಹುಟ್ಟಿಸಿ ಚಿನ್ನದೊಂದಿಗೆ ಎಸ್ಕೇಪ್ ಆದ ಗೂಂಡಾರಾಮ್!


ಮಾಲೂರಿನ ಪ್ರಸಿದ್ಧ ‘ರಾಮದೇವ್ ಜ್ಯುವೆಲರ್ಸ್’ ಮಾಲೀಕ ಗೂಂಡಾರಾಮ್ ಎಂಬಾತನೇ ಈ ಮಹಾಮೋಸ ಮಾಡಿದ ಕಿಲಾಡಿ. ಕಡಿಮೆ ಮಜೂರಿ ಹಾಗೂ ಕಡಿಮೆ ಬೆಲೆಯಲ್ಲಿ ಹಳೇ ಒಡವೆಗಳನ್ನು ಕರಗಿಸಿ ಹೊಸ ಡಿಸೈನ್‌ನ ಒಡವೆಗಳನ್ನು ಮಾಡಿಸಿಕೊಡುವುದಾಗಿ ಈತ ಮಹಿಳೆಯರಿಗೆ ನಂಬಿಸಿದ್ದ. ಕಳೆದ ಆರು ತಿಂಗಳಿನಿಂದ ಸುಮಾರು 150ಕ್ಕೂ ಹೆಚ್ಚು ಮಹಿಳೆಯರಿಂದ ಹಳೇ ಬಂಗಾರವನ್ನು ಸಂಗ್ರಹಿಸಿದ್ದ ಗೂಂಡಾರಾಮ್, ಯಾರೂ ಸಂಶಯ ಪಡಬಾರದು ಎಂಬ ಕಾರಣಕ್ಕೆ ಅವರೆಲ್ಲರದ್ದೇ ಒಂದು ವಾಟ್ಸಾಪ್ ಗ್ರೂಪ್ ಮಾಡಿದ್ದ. ಪ್ರತಿದಿನ ಹೊಸ ಹೊಸ ಡಿಸೈನ್‌ಗಳ ಫೋಟೋಗಳನ್ನು ಅದಕ್ಕೆ ಹಾಕಿ ನಂಬಿಕೆ ದ್ರೋಹ ಎಸಗುತ್ತಿದ್ದ.

ಆದರೆ, ಒಡವೆ ಕೊಡಲು ಇವತ್ತು ನಾಳೆ ಎಂದು ಆರು ತಿಂಗಳಿನಿಂದ ಸತಾಯಿಸುತ್ತಿದ್ದ ಈತ, ಕಳೆದ ಮೂರು ದಿನಗಳ ಹಿಂದೆ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಅಂಗಡಿ ಹಾಗೂ ಮನೆ ಎರಡನ್ನೂ ಖಾಲಿ ಮಾಡಿಕೊಂಡು ರಾತ್ರೋರಾತ್ರಿ ಕುಟುಂಬ ಸಮೇತ ಪರಾರಿಯಾಗಿದ್ದಾನೆ.

ಜಿಎಸ್‌ಟಿ ಬಿಲ್ ಇಲ್ಲ, ಬರೀ ಬಿಳಿ ಹಾಳೆಯೇ ಸಾಕ್ಷಿ!
ಮೋಸಹೋದ ಅಮಾಯಕ ಮಹಿಳೆಯರು ಜಿಎಸ್‌ಟಿ (GST) ಬಿಲ್ ಪಡೆಯದೆ, ಕೇವಲ ಬಿಳಿ ಹಾಳೆಯಲ್ಲಿ ಒಡವೆ ಹಾಗೂ ಹಣ ಪಡೆದಿರುವ ಬಗ್ಗೆ ಮಾಲೀಕ ಬರೆದುಕೊಟ್ಟಿದ್ದ ಚೀಟಿಯನ್ನೇ ನಂಬಿ ಒಡವೆ ಒಪ್ಪಿಸಿದ್ದರು. ಈಗ ಆ ಬಿಳಿ ಹಾಳೆಗಳನ್ನು ಹಿಡಿದುಕೊಂಡು ಮಹಿಳೆಯರು ಕಣ್ಣೀರು ಹಾಕುತ್ತಿದ್ದಾರೆ. ಸದ್ಯ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ಮುಖಂಡರ ಸಹಾಯದೊಂದಿಗೆ ನೂರಾರು ಮಹಿಳೆಯರು ಮಾಲೂರು ಪೊಲೀಸ್ ಠಾಣೆಗೆ ಮುತ್ತಿಗೆ ಹಾಕಿ ದೂರು ದಾಖಲಿಸಿದ್ದಾರೆ. “ಈಗಿನ ಕಾಲದಲ್ಲಿ ಒಂದು ಗ್ರಾಂ ಚಿನ್ನ ಮಾಡಿಸುವುದೂ ಕಷ್ಟ. ಮನೆಯಲ್ಲಿ ಯಾರಿಗೂ ಹೇಳದೆ ಹಳೇ ಒಡವೆ ತಂದುಕೊಟ್ಟು ಮೋಸ ಹೋಗಿದ್ದೇವೆ. ಅವನು ಫೋನ್ ಸ್ವಿಚ್ ಆಫ್ ಮಾಡಿಕೊಂಡು ಊರು ಬಿಟ್ಟಿದ್ದಾನೆ. ಅವನ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಿ, ನಮಗೆ ನ್ಯಾಯ ಕೊಡಿಸಿ ನಮ್ಮ ಒಡವೆ ನಮಗೆ ಕೊಡಿಸಿದರೆ ಸಾಕು.” ಎಂದು ಬಂಗಾರ ಕಳೆದುಕೊಂಡ ಸಂತ್ರಸ್ತೆ ಮಂಜುಳಾ ತಮ್ಮ ಅಳಲನ್ನು ತೋಡಿಕೊಂಡರು.

“ಅಮಾಯಕ ಮಹಿಳೆಯರು ಮತ್ತು ರೈತರನ್ನು ಗುರಿಯಾಗಿಸಿ 10 ಕೋಟಿ ರೂಪಾಯಿ ಬೆಲೆಬಾಳುವ ಒಡವೆ ಸಮೇತ ಮಾಲೀಕ ಎಸ್ಕೇಪ್ ಆಗಿದ್ದಾನೆ. ಜಿಎಸ್‌ಟಿ ಬಿಲ್ ಇಲ್ಲದ ಖಾಲಿ ಹಾಳೆಯಲ್ಲಿ ಬರೆದುಕೊಟ್ಟು ವಂಚಿಸಿದ್ದಾನೆ. ಪೊಲೀಸರು ತಕ್ಷಣವೇ ಈ ವಂಚಕನನ್ನು ಬಂಧಿಸಿ ಮಹಿಳೆಯರಿಗೆ ನ್ಯಾಯ ಒದಗಿಸಬೇಕು, ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುವುದು.” ಎಂದು ಶ್ರೀನಿವಾಸ್, ಕರವೇ ತಾಲೂಕು ಅಧ್ಯಕ್ಷರು, ಮಾಲೂರು ಹೇಳಿದರು.

ಮಾಡದ ತಪ್ಪಿಗೆ ಮಹಿಳೆಯರು ಹಾಗೂ ಕರವೇ ಕಾರ್ಯಕರ್ತರು ಪೊಲೀಸ್ ಠಾಣೆ ಅಲೆಯುವಂತಾಗಿದ್ದು, ವಂಚಕ ಗೂಂಡಾರಾಮ್ ಪತ್ತೆಗಾಗಿ ಮಾಲೂರು ಪೊಲೀಸರು ಜಾಲ ಬೀಸಿದ್ದಾರೆ.

#FreedomTV #MalurGoldScam #KolarNews #RamdevJewellers #GundaramEscaped #GoldScam #KarnatakaCrime #PublicAwareness #FraudJeweller #KaRaWe #JusticeForWomen #GoldLoversBeware #BreakingNewsಕನ್ನಡ

Comments (0)

Your email address will not be published. Required fields are marked *

Back to top button