ಜಮೀರ್ ಪಕ್ಷದ್ರೋಹಿ- ಆಡಿಯೋ ಲೀಕ್!
Anti party element in by election by Zameer ahmed Audio leak in davangere

ದಾವಣಗೆರೆ: ರಾಜ್ಯ ರಾಜಕಾರಣದಲ್ಲಿ ಹಾಗೂ ಆಡಳಿತಾರೂಢ ಕಾಂಗ್ರೆಸ್ ಪಾಳಯದಲ್ಲಿ ಭಾರಿ ಸಂಚಲನ ಮೂಡಿಸಬಲ್ಲ ಆಡಿಯೋ ಬಾಂಬ್ ಒಂದು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಆಗಿದೆ. ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಕಾಂಗ್ರೆಸ್‌ನ ಪ್ರಭಾವಿ ನಾಯಕ, ಸಚಿವ ಜಮೀರ್ ಅಹಮದ್ ಖಾನ್ ಅವರೇ ಸ್ವತಃ ಪಕ್ಷದ ಅಧಿಕೃತ ಅಭ್ಯರ್ಥಿ ವಿರುದ್ಧ ಕೆಲಸ ಮಾಡಿದ್ದಾರಾ? ಎಂಬ ದಟ್ಟ ಅನುಮಾನವನ್ನು ಈ ವೈರಲ್ ಆಡಿಯೋ ಹುಟ್ಟುಹಾಕಿದೆ. ಸದ್ಯ ಸಾಮಾಜಿಕ ಜಾಲತಾಣದ ‘ಎಕ್ಸ್’ (X) ಖಾತೆಯಲ್ಲಿ ‘ಕಾಕ್ರೋಚ್ ಪಾರ್ಟಿ’ ಹೆಸರಿನ ಪೇಜ್‌ನಿಂದ ಈ ಆಡಿಯೋ ಬಿಡುಗಡೆಯಾಗಿದ್ದು, ಕೈ ಪಾಳಯದಲ್ಲಿ ತಲ್ಲಣ ಸೃಷ್ಟಿಸಿದೆ.

ಪಕ್ಷೇತರನಿಗೆ ಜಮೀರ್ ಬೆಂಬಲ!
ದಾವಣಗೆರೆಯ ಕಾಂಗ್ರೆಸ್ ಮುಖಂಡ ಹಾಗೂ ಕೆಎಂಡಿಸಿ (KMDC) ನಿರ್ದೇಶಕ ಮೊಹಮ್ಮದ್ ಸಿರಾಜ್ ಜೊತೆಗೆ ಸಚಿವ ಜಮೀರ್ ಅಹಮದ್ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಇದಾಗಿದೆ. ಇದರಲ್ಲಿ ಕಾಂಗ್ರೆಸ್‌ನ ಅಧಿಕೃತ ಅಭ್ಯರ್ಥಿಗೆ ಮತ ಹಾಕಿಸದಂತೆ ಹಾಗೂ ಪಕ್ಷೇತರ ಅಭ್ಯರ್ಥಿ (ಕುಕ್ಕರ್ ಗುರುತು) ಮತ್ತು ಎಸ್‌ಡಿಪಿಐ (SDPI) ಪರವಾಗಿ ಮತ ಚಲಾಯಿಸುವಂತೆ ಜಮೀರ್ ಪ್ರಚೋದಿಸಿದ್ದಾರೆ ಎನ್ನಲಾದ ಸಂಭಾಷಣೆ ಇದೆ.
“ಮುಸ್ಲಿಂ ವೋಟಿಂಗ್ ಕಡಿಮೆ ಇದೆ. ಅವರು ಹೊರಗಡೆ ಬಂದರೆ ನಂಬೋಕಾಗಲ್ಲ, ಕಾಂಗ್ರೆಸ್‌ಗೇ ವೋಟ್ ಹಾಕಿಬಿಡುತ್ತಾರೆ! ಹಾಗಾಗಿ ಯಾರನ್ನೂ ಒತ್ತಾಯ ಮಾಡಿ ಮನೆಯಿಂದ ಹೊರಗೆ ಕರೆದುಕೊಂಡು ಬರಬೇಡಿ. ಅವರು ಪಕ್ಷೇತರರಿಗೆ ಅಥವಾ ಎಸ್‌ಡಿಪಿಐಗೆ ವೋಟ್ ಹಾಕಲಿ.”
— ಆಡಿಯೋದಲ್ಲಿರುವ ಜಮೀರ್ ಅಹಮದ್ (ಎನ್ನಲಾದ ಧ್ವನಿ)
ವೈರಲ್ ಆಡಿಯೋದ ಕಂಪ್ಲೀಟ್ ಮಾಹಿತಿ ಇಲ್ಲಿದೆ.
ಜಮೀರ್: ನಾನು ನಿನಗೆ ಬೆಳಗ್ಗೆ 6 ಗಂಟೆಯಿಂದ ಕಾಲ್ ಮಾಡ್ತಿದ್ದೀನಿ.
ಮೊಹಮ್ಮದ್ ಸಿರಾಜ್: ಇಲ್ಲ ಸರ್, ನನ್ನ ಮೊಬೈಲ್ ಆಫ್ ಇತ್ತು. ನನ್ನ ಮಗನ ಮೊಬೈಲ್ ಬಳಸ್ತಿದ್ದೆ, ನಾನು ವಾರ್ಡ್‌ಲ್ಲೇ ಇದ್ದೆ. ಬೆಳಗ್ಗೆ 7 ಗಂಟೆಯಿಂದ ಕೆಲಸ ಮಾಡ್ತಿದ್ದೀನಿ.
ಜಮೀರ್: ನೀನು ಬೆಳಗ್ಗೆಯಿಂದ ಕೆಲಸ ಮಾಡ್ತಿರಬೇಕಿತ್ತಲ್ಲೋ, ಏನಯ್ಯಾ?
ಮೊಹಮ್ಮದ್ ಸಿರಾಜ್: ನನ್ನ ಮಗ ಬೆಳಗ್ಗಿನಿಂದ ನನ್ನ ಜೊತೆಯಲ್ಲೇ ಇದ್ದಾನೆ. ಹಫೀಜ್ ಸಾಬ್ ಕೂಡ ನನ್ನ ಜೊತೆಯಲ್ಲೇ ಇದ್ದಾರೆ.
ಜಮೀರ್: ಇದು ನನ್ನ ಮರ್ಯಾದೆ ಪ್ರಶ್ನೆ. ನನಗೆ ರಾತ್ರಿಯೂ ಸರಿಯಾಗಿ ನಿದ್ದೆ ಬಂದಿಲ್ಲ.
ಮೊಹಮ್ಮದ್ ಸಿರಾಜ್: ನಾನು ಕೂಡ ಬೆಳಗ್ಗೆ 4ಕ್ಕೆ ಮಲಗಿದ್ದು… ನಾನು ವಾರ್ಡ್ 14ರಲ್ಲೇ ಇದ್ದೆ. ಆಮೇಲೆ ವಾರ್ಡ್ ನಂ 12ಕ್ಕೆ ಹೋದೆ. ವಾರ್ಡ್ ನಂ 12ರಲ್ಲಿ ರಿಯಾಜ್ ಕಾಲ್ ಮಾಡಿದ್ದ. ಅಲ್ಲಿ ಏನೋ ಗಲಾಟೆಯಾಗಿದೆ ಅನ್ಸುತ್ತೆ. ಅಲ್ಲಿಂದ ನಾನು ಮನ್ಸೂರ್ ವಾರ್ಡ್‌ಗೆ ಹೋದೆ. ಮನ್ಸೂರ್ ವಾರ್ಡ್‌ನಿಂದ ವಾರ್ಡ್ 14ಕ್ಕೆ ವಾಪಸ್ ಬಂದೆ.
ಜಮೀರ್: ಒಟ್ಟಾರೆ ವೋಟಿಂಗ್ ಹೇಗಿದೆ?
ಮೊಹಮ್ಮದ್ ಸಿರಾಜ್: ಬರೀ ಕುಕ್ಕರ್… ನಾವು ಕುಕ್ಕರಿಗೆ ಮಾತ್ರ ವೋಟ್ ಕೇಳಿದ್ದೀವಿ.
ಜಮೀರ್: ಆದ್ರೆ ವೋಟಿಂಗ್ ಪರ್ಸೆಂಟೇಜ್ ಕಮ್ಮಿ ಇದೆ.
‘ನನ್ನ ಮರ್ಯಾದೆ ಪ್ರಶ್ನೆ’ ಎಂದಿದ್ದೇಕೆ ಜಮೀರ್?
“ಇದು ನನ್ನ ಮರ್ಯಾದೆ ಪ್ರಶ್ನೆ, ರಾತ್ರಿ ಸರಿಯಾಗಿ ನಿದ್ದೆ ಬಂದಿಲ್ಲ” ಎಂದು ಜಮೀರ್ ಹೇಳಿರುವುದು ಮತ್ತು ಅದಕ್ಕೆ ಸಿರಾಜ್ “ನಾವು ಬರೀ ಕುಕ್ಕರ್‌ಗೇ ವೋಟ್ ಕೇಳುತ್ತಿದ್ದೇವೆ” ಎಂದು ಉತ್ತರಿಸಿರುವುದು ಕಾಂಗ್ರೆಸ್ ಹೈಕಮಾಂಡ್‌ಗೆ ಭಾರಿ ಆಘಾತ ನೀಡಿದೆ. ಪಕ್ಷದ ಜವಾಬ್ದಾರಿಯುತ ಸ್ಥಾನದಲ್ಲಿದ್ದುಕೊಂಡು, ಉಪಚುನಾವಣೆಯಲ್ಲಿ ಸ್ವಪಕ್ಷದ ಅಭ್ಯರ್ಥಿಗೇ ಬೆನ್ನಿಗೆ ಇರಿಯುವ ಕೆಲಸ ನಡೆದಿದೆಯೇ ಎಂಬ ಪ್ರಶ್ನೆಗೆ ಈಗ ಕೆಪಿಸಿಸಿ ಉತ್ತರಿಸಬೇಕಿದೆ.
ಈ ಆಡಿಯೋ ಕ್ಲಿಪ್ ಈಗ ಇಡೀ ರಾಜ್ಯ ರಾಜಕಾರಣದಲ್ಲಿ ಕಾಂಗ್ರೆಸ್‌ನ ಆಂತರಿಕ ಕಚ್ಚಾಟ ಹಾಗೂ ದ್ರೋಹದ ರಾಜಕಾರಣವನ್ನು ಬೀದಿಗೆ ತಂದಿದೆ. ಈ ಆಡಿಯೋದ ಸತ್ಯಾಸತ್ಯತೆ ಇನ್ನಷ್ಟೇ ತಿಳಿಯಬೇಕಾಗಿದ್ದು, ಹೈಕಮಾಂಡ್ ಜಮೀರ್ ವಿರುದ್ಧ ಏನು ಶಿಸ್ತು ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.
#FreedomTV #ZameerAhmedKhan #AudioLeak #DavanagereSouth #ByElection #CongressControversy #ZameerAudioControversy #KarnatakaPolitics #CrossVoting #SDPI #KMDC #PoliticalBreaking #Siddaramaiah #DKShivakumar #CongressVsCongress




