ಗರ್ಭಿಣಿ ಪ್ರಾಣಕ್ಕಿಂತ ಝೀರೋ ಟ್ರಾಫಿಕ್ ಮುಖ್ಯಾನಾ? ರಸ್ತೆಯಲ್ಲೇ ಪತಿ ಪ್ರತಿಭಟನೆ!
Protest on zero traffic by a husband of Pragnant lady who was going to hospital

ಬೆಂಗಳೂರು: “ನಮ್ಮ ಕಾರಿನಲ್ಲಿ ಗರ್ಭಿಣಿ ಪತ್ನಿ ಇದ್ದಾಳೆ, ಆಕೆಗೆ ತುರ್ತು ಚಿಕಿತ್ಸೆ ಬೇಕಿದೆ. ಆದರೆ ಸರ್ಕಾರಕ್ಕೆ ನಾವೇನೂ ಅಲ್ವಾ? ವಿಐಪಿಗಳಿಗಾಗಿ ನಾಗರಿಕರ ಪ್ರಾಣದ ಜೊತೆ ಚೆಲ್ಲಾಟ ಆಡ್ತೀರಾ?” – ಹೀಗೆಂದು ತುಂಬು ಗರ್ಭಿಣಿ ಪತ್ನಿಯ ಪತಿ ನಡುರಸ್ತೆಯಲ್ಲೇ ಕುಳಿತು ಕಣ್ಣೀರು ಹಾಕುತ್ತಾ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ನಗರದ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ರಾಜ್ಯಪಾಲರ ಸಂಚಾರಕ್ಕಾಗಿ ‘ಝೀರೋ ಟ್ರಾಫಿಕ್’ ವ್ಯವಸ್ಥೆ ಮಾಡಿದ್ದರಿಂದ ಗಂಟೆಗಟ್ಟಲೆ ರಸ್ತೆ ಬಂದ್ ಆಗಿದ್ದನ್ನು ವಿರೋಧಿಸಿ ವ್ಯಕ್ತಿಯೊಬ್ಬರು ನಡೆಸಿದ ಈ ಆಕ್ರೋಶದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಚಲನ ಮೂಡಿಸಿದೆ.

ಹೈಡ್ರಾಮಾ ಅಲ್ಲ, ಸಾವು-ಬದುಕಿನ ಹೋರಾಟ!
ಕರ್ನಾಟಕದ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರ ಸಂಚಾರದ ಹಿನ್ನೆಲೆಯಲ್ಲಿ ನಿನ್ನೆ ಹಳೆಯ ವಿಮಾನ ನಿಲ್ದಾಣ ರಸ್ತೆಯಲ್ಲಿ ಸುಮಾರು 30 ನಿಮಿಷಗಳ ಕಾಲ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಈಗಾಗಲೇ ಅಂಡರ್‌ಪಾಸ್ ಕಾಮಗಾರಿಯಿಂದಾಗಿ ಕಿರಿದಾಗಿದ್ದ ಈ ರಸ್ತೆಯಲ್ಲಿ ಯಾವುದೇ ಪರ್ಯಾಯ ವ್ಯವಸ್ಥೆ ಮಾಡದೆ ಏಕಾಏಕಿ ರಸ್ತೆ ನಿರ್ಬಂಧಿಸಿದ್ದರಿಂದ ಕಿಲೋಮೀಟರ್‌ಗಟ್ಟಲೆ ವ್ಯಾಪಕ ಟ್ರಾಫಿಕ್ ಜಾಮ್ ಸೃಷ್ಟಿಯಾಗಿತ್ತು. ಇದೇ ಟ್ರಾಫಿಕ್ ನಡುವೆ ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ತನ್ನ ಗರ್ಭಿಣಿ ಪತ್ನಿಯನ್ನು ಆಸ್ಪತ್ರೆಗೆ ಕರೆದೊಯ್ಯುತ್ತಿದ್ದ ವ್ಯಕ್ತಿಯೊಬ್ಬರ ಕಾರು ಸಿಲುಕಿಕೊಂಡಿತ್ತು. ಎಷ್ಟು ಮನವಿ ಮಾಡಿದರೂ ಪೊಲೀಸರು ಬಿಡದಿದ್ದಾಗ, ತೀವ್ರ ಆತಂಕಗೊಂಡ ಪತಿ ಕಾರಿನಿಂದ ಕೆಳಗಿಳಿದು ನಡುರಸ್ತೆಯಲ್ಲೇ ಕುಳಿತು ಪ್ರತಿಭಟನೆ ನಡೆಸಿದರು. “ಕಾರಲ್ಲಿ ಗರ್ಭಿಣಿ ಇದ್ದಾಳೆ, ಆಸ್ಪತ್ರೆಗೆ ಹೋಗಬೇಕು. ಸರ್ಕಾರಕ್ಕೆ ನಾವೇನೂ ಅಲ್ವಾ? ನಮ್ಮ ಪ್ರಾಣಕ್ಕಿಂತ ಇವರಿಗೆ ಝೀರೋ ಟ್ರಾಫಿಕ್ ಮುಖ್ಯಾನಾ?” ಎಂದು ಆಸ್ಪತ್ರೆಗೆ ತೆರಳುತ್ತಿದ್ದ ಗರ್ಭಿಣಿಯ ಪತಿ ಆಕ್ರೋಶ ವ್ಯಕ್ತಪಡಿಸಿದರು.
ರಸ್ತೆ ಮಧ್ಯದಲ್ಲೇ ನಿಂತು ಅಧಿಕಾರಿಗಳ ವಿಐಪಿ ಸಂಸ್ಕೃತಿಯ ವಿರುದ್ಧ ಘೋಷಣೆಗಳನ್ನು ಕೂಗಿದ ಪತಿಗೆ ಸ್ಥಳದಲ್ಲಿದ್ದ ಇತರ ಸಾರ್ವಜನಿಕರು ಹಾಗೂ ಸವಾರರು ಸಾಥ್ ನೀಡಿ ಬೆಂಬಲ ಸೂಚಿಸಿದರು.
ಸೋಶಿಯಲ್ ಮೀಡಿಯಾದಲ್ಲಿ ನೆಟ್ಟಿಗರ ತೀವ್ರ ಆಕ್ರೋಶ!
ಈ ಇಡೀ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆ, ಬೆಂಗಳೂರು ಟ್ರಾಫಿಕ್ ಪೊಲೀಸರ (BTP) ವಿರುದ್ಧ ಸಾರ್ವಜನಿಕ ವಲಯದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗುತ್ತಿದೆ. ಅಂಡರ್‌ಪಾಸ್ ನಿರ್ಮಾಣ ಹಂತದಲ್ಲಿರುವ ಇಂತಹ ಸೂಕ್ಷ್ಮ ರಸ್ತೆಗಳಲ್ಲಿ ಗಣ್ಯರ ಸಂಚಾರಕ್ಕೆ ಗಂಟೆಗಟ್ಟಲೆ ಸಾರ್ವಜನಿಕರನ್ನು, ಅದರಲ್ಲೂ ಆಂಬ್ಯುಲೆನ್ಸ್ ಮತ್ತು ತುರ್ತು ವಾಹನಗಳನ್ನು ತಡೆಯುವುದು ಎಷ್ಟು ಸರಿ ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಟ್ವಿಟರ್ ಹಾಗೂ ಫೇಸ್‌ಬುಕ್‌ನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದ್ದು, ಭದ್ರತೆಯ ದೃಷ್ಟಿಯಿಂದ ಸಂಚಾರ ನಿಯಂತ್ರಣ ಅನಿವಾರ್ಯ ಎನ್ನುವ ವಾದ ಒಂದೆಡೆಯಾದರೆ, ಸಾಮಾನ್ಯ ನಾಗರಿಕರ ಪ್ರಾಣದ ಮುಂದೆ ಯಾವ ವಿಐಪಿ ಭದ್ರತೆಯೂ ಮುಖ್ಯವಲ್ಲ ಎಂದು ಬಹುತೇಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಈ ಘಟನೆ ಬೆಂಗಳೂರಿನ ವಿಐಪಿ ಸಂಸ್ಕೃತಿ ಮತ್ತು ಟ್ರಾಫಿಕ್ ನಿರ್ವಹಣೆಯ ವೈಫಲ್ಯವನ್ನು ಮತ್ತೊಮ್ಮೆ ಜಗಜ್ಜಾಹೀರು ಮಾಡಿದೆ.
#FreedomTV #ZeroTraffic #VIPCulture #BengaluruTraffic #OldAirport Road #GovernorThawarchandGehlot #PregnantWomanProtest #NammaBengaluru #BengaluruTrafficPolice #PublicOutrage #VIPVsCommonMan #ViralVideo #KarnatakaNewsಕನ್ನಡ




