ರಂಗನಾಥಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಚೆನ್ನಮ್ಮ ಅಂತ್ಯಕ್ರಿಯೆ!
Chennamma's funeral at the foothills of Ranganathaswamy Betta!

ಹಾಸನ : ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಧರ್ಮಪತ್ನಿ ಚೆನ್ನಮ್ಮ ಅವರು ನಿಧನರಾಗಿದ್ದು, ಅವರ ಪಾರ್ಥಿವ ಶರೀರವನ್ನು ಹಾಸನ ಜಿಲ್ಲೆಯ ಹೊಳೆನರಸೀಪುರ ಪಟ್ಟಣದಲ್ಲಿರುವ ಶಾಸಕ ಹೆಚ್.ಡಿ.ರೇವಣ್ಣ ಅವರ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.
ಚೆನ್ನಮ್ಮ ಅವರ ಅಂತ್ಯಕ್ರಿಯೆ ಇಂದು ಸಂಜೆ ಹರದನಹಳ್ಳಿ ಗ್ರಾಮದ ಸಮೀಪವಿರುವ ಕ್ಯಾತನಹಳ್ಳಿ ಗ್ರಾಮದ ಬೆಟ್ಟದ ರಂಗನಾಥಸ್ವಾಮಿ ದೇವಾಲಯದ ತಪ್ಪಲಿನಲ್ಲಿರುವ ಸ್ವಂತ ಜಮೀನಿನಲ್ಲಿ ನೆರವೇರಲಿದೆ. ಈಗಾಗಲೇ ಅಂತ್ಯಕ್ರಿಯೆಗೆ ಸಂಬಂಧಿಸಿದಂತೆ ಎಲ್ಲಾ ರೀತಿಯ ಸಿದ್ಧತೆಗಳು ಪೂರ್ಣಗೊಂಡಿದ್ದು, ಕುಟುಂಬಸ್ಥರು ಹಾಗೂ ಅಭಿಮಾನಿಗಳು ಅಂತಿಮ ದರ್ಶನ ಪಡೆಯುತ್ತಿದ್ದಾರೆ.
ರಾಜ್ಯದ ಮೂಲೆ ಮೂಲೆಗಳಿಂದ ಗಣ್ಯರು, ಮಠಾಧೀಶರು, ಜೆಡಿಎಸ್ ಪಕ್ಷದ ನಾಯಕರು ಹಾಗೂ ಅಭಿಮಾನಿಗಳು ಚೆನ್ನಮ್ಮ ಅಂತಿಮದರ್ಶನ ಪಡೆದಿದ್ದಾರೆ.
ಅಂತ್ಯಕ್ರಿಯೆ ನಡೆಯುವ ಸ್ಥಳವನ್ನು ಬೆಂಗಳೂರಿನ ಪ್ರಸಿದ್ಧ ವಾಸ್ತು ತಜ್ಞರಾದ ಹರಿಪ್ರಸಾದ್ ಅವರು ವಾಸ್ತು ಪ್ರಕಾರ ಪರಿಶೀಲಿಸಿ, ಗುರುತು ಮಾಡಿದ್ದಾರೆ. ಮಧ್ಯಾಹ್ನ 2:00 ಗಂಟೆಯ ನಂತರ ಧಾರ್ಮಿಕ ವಿಧಿವಿಧಾನಗಳು ಆರಂಭವಾಗಲಿದ್ದು, ಸಂಜೆ 4:30ರ ಒಳಗೆ ಅಂತ್ಯಕ್ರಿಯೆ ಪ್ರಕ್ರಿಯೆಗಳನ್ನು ಪೂರ್ಣಗೊಳ್ಳಲಿದೆ.




