Shivamogga

ಶರಾವತಿ ಹಿನ್ನೀರು ಇಳಿಕೆ ; ಹಲ್ಕೆ- ಮುಪ್ಪಾನೆ ಲಾಂಚ್ ಸೇವೆ ಸಂಪೂರ್ಣ ಸ್ಥಗಿತ!

Halke-Muppane launch stops from today because of Sharavathi backwater decreasing

ಶಿವಮೊಗ್ಗ/ಸಾಗರ: ಮಲೆನಾಡಿನ ಪ್ರಮುಖ ಜಲಮೂಲವಾಗಿರುವ ಲಿಂಗನಮಕ್ಕಿ ಜಲಾಶಯದ ಶರಾವತಿ ಹಿನ್ನೀರಿನ ಮಟ್ಟ ತೀವ್ರವಾಗಿ ಕುಸಿದಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ಹಲ್ಕೆ-ಮುಪ್ಪಾನೆ ಮಾರ್ಗದ ಲಾಂಚ್ ಸೇವೆಯನ್ನು ಇಂದಿನಿಂದ (ಜೂನ್ 2) ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆ ಪ್ರಕಟಿಸಿದೆ.

ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕರೂರು ಮತ್ತು ಭಾರಂಗಿ ಹೋಬಳಿಗಳನ್ನು ಸಂಪರ್ಕಿಸುವ ಅತ್ಯಂತ ಮಹತ್ವದ ಜಲಮಾರ್ಗ ಇದಾಗಿದ್ದು, ಲಾಂಚ್ ಬಂದ್ ಆಗಿರುವುದರಿಂದ ಸ್ಥಳೀಯರು ಹಾಗೂ ಪ್ರವಾಸಿಗರಿಗೆ ಭಾರಿ ಹಿನ್ನಡೆಯಾಗಿದೆ.

ಲಿಂಗನಮಕ್ಕಿ ಡ್ಯಾಂನಲ್ಲಿ ನೀರಿನ ಮಟ್ಟ ದಿನೇ ದಿನೇ ಕುಸಿಯುತ್ತಿರುವುದರಿಂದ ಜಲಮಾರ್ಗದಲ್ಲಿ ಸಂಚರಿಸುವುದು ಅಪಾಯಕಾರಿಯಾಗಿದೆ.
ಮರದ ಕಾಂಡಗಳ ಆತಂಕ: ನೀರಿನ ಆಳ ಕಡಿಮೆಯಾಗಿರುವುದರಿಂದ ಒಳಭಾಗದಲ್ಲಿರುವ ದೊಡ್ಡ ದೊಡ್ಡ ಮರದ ಕಾಂಡಗಳು ಲಾಂಚ್‌ನ ತಳಭಾಗಕ್ಕೆ ತಾಗುವ ಭೀತಿ ಎದುರಾಗಿದೆ. ವಾಹನಗಳನ್ನು ಲಾಂಚ್‌ಗೆ ಹತ್ತಿಸುವ ಮತ್ತು ಇಳಿಸುವ ಪ್ಲಾಟ್‌ಫಾರ್ಮ್ ಜಾಗದಲ್ಲಿ ಲಾಂಚ್‌ನ ಅಡಿಭಾಗ ಸಂಪೂರ್ಣ ನೆಲಕ್ಕೆ ತಾಗುತ್ತಿದೆ. ಹೀಗಾಗಿ ಅನಾಹುತಗಳನ್ನು ತಪ್ಪಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ.

ಸಾರ್ವಜನಿಕ ಸಂಪರ್ಕ ಕಡಿತ!
ಸಿಗಂಧೂರು ಸೇತುವೆ ನಿರ್ಮಾಣದ ಬಳಿಕವೂ ಕರೂರು ಹೋಬಳಿಯ ಜನರಿಗೆ ಮುಪ್ಪಾನೆ ಮಾರ್ಗವೇ ಜೀವಾಳವಾಗಿತ್ತು. ಕರೂರು ಹೋಬಳಿಯ ಪೊಲೀಸ್ ಠಾಣೆ ಹಾಗೂ ಮೆಸ್ಕಾಂ (MESCOM) ಕಚೇರಿಗಳು ಕಾರ್ಗಲ್-ಜೋಗದಲ್ಲಿದ್ದು, ಈ ಕೆಲಸಗಳಿಗಾಗಿ ಹಾಗೂ ಗ್ಯಾಸ್ ಸಿಲಿಂಡರ್ ಪಡೆಯಲು ತುಮರಿ, ಸಿಗಂದೂರು ಮತ್ತು ಭಾರಂಗಿ ಹೋಬಳಿಯ ಜನ ಈ ಮಾರ್ಗವನ್ನೇ ನೆಚ್ಚಿಕೊಂಡಿದ್ದರು. ಇದರೊಂದಿಗೆ ಉತ್ತರ ಕನ್ನಡದ ಶಿರಸಿ-ಸಿದ್ದಾಪುರ ಭಾಗದ ಜನರು ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರಲು ಇದು ಅತಿ ಮುಖ್ಯ ರಸ್ತೆಯಾಗಿತ್ತು.

ಸದ್ಯಕ್ಕೆ ಲಾಂಚ್ ಸಂಚಾರ ತಾತ್ಕಾಲಿಕವಾಗಿ ಕೊನೆಗೊಂಡಿದೆ. ಮುಂಬರುವ ದಿನಗಳಲ್ಲಿ ಮಳೆ ಚುರುಕಾಗಿ, ಲಿಂಗನಮಕ್ಕಿ ಜಲಾಶಯದ ಹಿನ್ನೀರಿನ ಮಟ್ಟ ಏರಿಕೆಯಾದ ತಕ್ಷಣವೇ ಲಾಂಚ್ ಸಂಚಾರವನ್ನು ಪುನಾರಂಭಿಸಲಾಗುವುದು ಎಂದು ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ ಅಧಿಕಾರಿಗಳು ಸಾರ್ವಜನಿಕರಿಗೆ ಮಾಹಿತಿ ನೀಡಿದ್ದಾರೆ. ಅಲ್ಲಿಯವರೆಗೆ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಸಲು ಕೋರಲಾಗಿದೆ.

#LinganamakkiDam #SharavathiBackwater #LaunchServiceSuspended #MuppaneLaunch #SagaraNews #Shivamogga #MalnadNews #Siganduru #KarnatakaTourism #BreakingNews #FreedomTVKannada #MonsoonUpdate

Comments (0)

Your email address will not be published. Required fields are marked *

Back to top button