ಭೀಮಾತೀರ ಹತ್ಯಾಕಾಂಡದ 12 ಆರೋಪಿಗಳ ಬಂಧನ!
12 murderers cought by police of Bheema river case

ವಿಜಯಪುರ: ಶಾಂತವಾಗಿದ್ದ ಭೀಮಾತೀರದಲ್ಲಿ ಮತ್ತೆ ರಕ್ತ ಚೆಲ್ಲಿದೆ. ವಿಜಯಪುರ ಜಿಲ್ಲೆಯ ಚಡಚಣ ತಾಲೂಕಿನ ಗೋವಿಂದಪುರ ಗ್ರಾಮದಲ್ಲಿ ಜಮೀನು ವಿವಾದ ಹಾಗೂ ಹಳೇ ದ್ವೇಷದ ಹಿನ್ನೆಲೆಯಲ್ಲಿ ಒಂದೇ ಕುಟುಂಬದ ಐವರು ಸೇರಿದಂತೆ ಬರೋಬರಿ 6 ಜನರನ್ನು ಅತ್ಯಂತ ಭೀಕರವಾಗಿ ಹತ್ಯೆ ಮಾಡಲಾದ ಘಟನೆ ಇಡೀ ರಾಜ್ಯವನ್ನೇ ನಡುಗಿಸಿದೆ. ಆದರೆ, ಪ್ರಕರಣವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿದ ವಿಜಯಪುರ ಪೊಲೀಸರು ಘಟನೆ ನಡೆದ ಕೇವಲ 48 ಗಂಟೆಗಳಲ್ಲಿ 12 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.

ಜಮೀನಿನಲ್ಲೇ ಹೆಣವಾದ್ರು 6 ಜನ ಅಮಾಯಕರು!
ಮೇ 29 ರ ಮಧ್ಯಾಹ್ನ ಗೋವಿಂದಪುರ ಗ್ರಾಮದ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದವರ ಮೇಲೆ ದುಷ್ಕರ್ಮಿಗಳ ದಂಡು ಏಕಾಏಕಿ ಮಾರಕಾಸ್ತ್ರಗಳು ಹಾಗೂ ಗನ್ ಹಿಡಿದು ಮುಗಿಬಿದ್ದಿತ್ತು. ಮಚ್ಚುಗಳಿಂದ ಕೊಚ್ಚಿ ಹಾಗೂ ತೋಟದ ಮನೆಯಲ್ಲೇ ಗುಂಡಿನ ದಾಳಿ ನಡೆಸಿ ಸ್ಥಳದಲ್ಲೇದುಂಡಪ್ಪ ರೇವಣಸಿದ್ದಪ್ಪ ನಿರಾಳೆ, ಶಿವಪುತ್ರ ರೇವಣಸಿದ್ದಪ್ಪ ನಿರಾಳೆ, ಚಂದ್ರಕಾಂತ ಅಲಿಯಾಸ್ ಚಂದು ರೇವಣಸಿದ್ದಪ್ಪ ನಿರಾಳೆ, ರಾಹುಲ್ ನಿರಾಳೆ, ಸಮರ್ಥ ನಿರಾಳೆ, ಶಬ್ಬೀರ ಬಾಬುಸಾಬ ಅತ್ತಾರ ಒಟ್ಟು 6 ಜನರನ್ನು ಕೊಲ್ಲಲಾಗಿತ್ತು.
ಲೈಸೆನ್ಸ್ ಗನ್‌ನಿಂದ ಕೊಲೆಗಳು!
ಹತ್ಯಾಕಾಂಡದ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ಒಟ್ಟು 12 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ತನಿಖೆ ಚುರುಕುಗೊಳಿಸಿದ ಪೊಲೀಸರು ಎಫ್‌ಐಆರ್‌ನಲ್ಲಿದ್ದ ಮೂವರು ಹಾಗೂ ಈ ಕೊಲೆಯಲ್ಲಿ ಭಾಗಿಯಾಗಿದ್ದ ಇತರ 9 ಜನ ಸೇರಿದಂತೆ ಒಟ್ಟು12 ಜನರನ್ನು ಹೆಡೆಮುರಿ ಕಟ್ಟಿದ್ದಾರೆ. “ಭೀಮಾತೀರದ ನಿರಾಳೆ ಕುಟುಂಬದ ಹತ್ಯಾಕಾಂಡಕ್ಕೆ ಸಂಬಂಧಿಸಿ 12 ಜನರನ್ನು ಬಂಧಿಸಲಾಗಿದೆ. ಈ ಕೊಲೆಯಲ್ಲಿ ಪ್ರಮುಖ ಆರೋಪಿ ಕಲ್ಲನಗೌಡ ಪಾಟೀಲನ ಲೈಸೆನ್ಸ್ ಗನ್‌ನಿಂದ ಫೈರಿಂಗ್ ಮಾಡಲಾಗಿದೆ. ಪ್ರಕರಣದಲ್ಲಿ ಇನ್ನು9 ಜನ ತಲೆಮರೆಸಿಕೊಂಡಿದ್ದು, ಅವರಿಗಾಗಿ ತೀವ್ರ ಹುಡುಕಾಟ ನಡೆದಿದೆ.” ಎಂದು ಲಕ್ಷ್ಮಣ ನಿಂಬರಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಹೇಳಿದರು.
ಹಳೇ ಹಗೆತನ ಮತ್ತು ಆಸ್ತಿ ಜಗಳ ಇಷ್ಟೊಂದು ಭೀಕರ ಸ್ವರೂಪ ಪಡೆದುಕೊಂಡು ಒಂದೇ ಬಾರಿ ಆರು ಜೀವಗಳನ್ನು ಬಲಿಪಡೆದಿರುವುದು ವಿಜಯಪುರ ಜನತೆಯನ್ನು ಆತಂಕಕ್ಕೆ ತಳ್ಳಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಿದ್ದಾರೆ. ತ ಭೀಮಾತೀರದ ಈ ರಕ್ತಚರಿತ್ರೆ ಮುಂದಿನ ದಿನಗಳಲ್ಲಿ ಇನ್ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದುನೋಡಬೇಕಿದೆ.
#FreedomTV #BhimateeraMassacre #VijayapuraCrime #ChadachanHorror #GovindapuraMurder #MassMurder #SPLaxmanNimbargi #FiringCase #NiraleFamily #PropertyDispute #VijayapuraPolice #KarnatakaCrime #BreakingNewsಕನ್ನಡ




