
ಬೆಂಗಳೂರು: ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬಳಿಕವೂ, ಅವರ ಅಧಿಕೃತ ನಿವಾಸ ‘ಕಾವೇರಿ’ಯಲ್ಲಿ ರಾಜಕೀಯ ಚಟುವಟಿಕೆಗಳು ಕಣ್ಮರೆಯಾಗಿಲ್ಲ. ಹೊಸದಾಗಿ ರಚನೆಯಾಗಲಿರುವ ಡಿ.ಕೆ. ಶಿವಕುಮಾರ್ ಅವರ ಸಂಪುಟದಲ್ಲಿ ಮಂತ್ರಿಗಿರಿ ಗಿಟ್ಟಿಸಿಕೊಳ್ಳಲೇಬೇಕು ಎಂದು ಪಣತೊಟ್ಟಿರುವ ಶಾಸಕರ ದಂಡು ಈಗ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಮನೆ ಬಾಗಿಲು ತಟ್ಟಿದೆ.

ಸಚಿವ ಸ್ಥಾನಕ್ಕಾಗಿ ಶಾಸಕರ ದುಂಬಾಲು!
ಭಾವಿ ಸಿಎಂ ಡಿಕೆಶಿ ಅವರ ಹೊಸ ಸಚಿವ ಸಂಪುಟ ಸೇರಲು ಕಾಂಗ್ರೆಸ್ ಶಾಸಕರು ತೀವ್ರ ಕಸರತ್ತು ಆರಂಭಿಸಿದ್ದಾರೆ. ಕೆಲವರು ಹೈಕಮಾಂಡ್ ಹಾಗೂ ಡಿಕೆಶಿ ನಿವಾಸಕ್ಕೆ ಅಲೆಯುತ್ತಿದ್ದರೆ, ಸಿದ್ದರಾಮಯ್ಯ ಅವರ ಆಪ್ತ ವಲಯದ ಶಾಸಕರು ಮಾತ್ರ “ನಮಗೆ ಸಚಿವ ಸ್ಥಾನ ಕೊಡಿಸಿ” ಎಂದು ಸಿದ್ದರಾಮಯ್ಯ ಅವರ ಮುಂದೆ ಬೇಡಿಕೆ ಇಡುತ್ತಿದ್ದಾರೆ. ಹಿರಿಯ ನಾಯಕರಾದ ಕೆ.ಜೆ. ಜಾರ್ಜ್, ಬಿ.ಜೆಡ್. ಜಮೀರ್ ಅಹ್ಮದ್ ಖಾನ್, ರಿಜ್ವಾನ್ ಅರ್ಷದ್, ಚಳ್ಳಕೆರೆ ಶಾಸಕ ರಘುಮೂರ್ತಿ, ಹೊಸದುರ್ಗ ಶಾಸಕ ಬಿ.ಜಿ. ಗೋವಿಂದಪ್ಪ, ಅಶೋಕ್ ಪಟ್ಟಣ್, ಪುಟ್ಟರಂಗಶೆಟ್ಟಿ ಹಾಗೂ ಎಂಎಲ್‌ಸಿಗಳಾದ ಐವಾನ್ ಡಿಸೋಜಾ ಮತ್ತು ಬಲ್ಕೀಸ್ ಬಾನು ಸೇರಿದಂತೆ ಹಲವರು ಇಂದು ಬೆಳ್ಳಂಬೆಳಗ್ಗೆ ‘ಕಾವೇರಿ’ ನಿವಾಸಕ್ಕೆ ಭೇಟಿ ನೀಡಿ ಸುದೀರ್ಘ ಚರ್ಚೆ ನಡೆಸಿದ್ದಾರೆ.
ರೇಸ್‌ನಲ್ಲಿ ಮುಂಚೂಣಿಯಲ್ಲಿರುವವರು ಯಾರು?
ಐವಾನ್ ಡಿಸೋಜಾ (MLC)- “ನಾನು ಕ್ರಿಶ್ಚಿಯನ್ ಸಮುದಾಯದ ಕೋಟಾದಡಿ ಸಚಿವ ಸ್ಥಾನದ ಆಕಾಂಕ್ಷಿ. ನಮ್ಮ ಸಮುದಾಯದ ಹಿರಿಯ ನಾಯಕ ಕೆ.ಜೆ. ಜಾರ್ಜ್ ಅವರಿಗೆ ಉಪಮುಖ್ಯಮಂತ್ರಿ (DCM) ಸ್ಥಾನ ನೀಡಬೇಕು” ಎಂದು ಬಹಿರಂಗವಾಗಿಯೇ ಬೇಡಿಕೆ ಇಟ್ಟಿದ್ದಾರೆ. ಶಾಸಕ ರಘುಮೂರ್ತಿ ಹಾಗೂ ಬಿ.ಜಿ. ಗೋವಿಂದಪ್ಪ: ತಮಗೂ ಸಚಿವ ಸ್ಥಾನ ಸಿಗುವ ಸಂಪೂರ್ಣ ವಿಶ್ವಾಸವಿದೆ ಎಂದು ಹೈಕಮಾಂಡ್ ನಾಯಕರ ಮೇಲೆ ನಂಬಿಕೆ ವ್ಯಕ್ತಪಡಿಸಿದ್ದಾರೆ.
ಈ ಹಿಂದೆ ಸಿದ್ದರಾಮಯ್ಯ ಅವರ ಕಾನೂನು ಸಲಹೆಗಾರರಾಗಿದ್ದ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಅವರಿಗೆ ಈ ಬಾರಿ ಸಚಿವ ಸ್ಥಾನ ಸಿಗುವ ಸಾಧ್ಯತೆ ದಟ್ಟವಾಗಿದೆ. “ಕೊಡಗು ಜಿಲ್ಲೆಗೆ ಒಂದು ಸಚಿವ ಸ್ಥಾನ ನೀಡಬೇಕು ಎಂಬುದು ಜನರ ಆಶಯವೂ ಹೌದು, ನನಗೂ ಸಚಿವ ಸ್ಥಾನ ಸಿಗುವ ವಿಶ್ವಾಸವಿದೆ” ಎಂದು ಪೊನ್ನಣ್ಣ ತಿಳಿಸಿದ್ದಾರೆ.
ಮೌನಕ್ಕೆ ಶರಣಾದ ಯತೀಂದ್ರ ಸಿದ್ದರಾಮಯ್ಯ!
ಇಷ್ಟು ದಿನಗಳ ಕಾಲ ತಮ್ಮ ತಂದೆ ಸಿದ್ದರಾಮಯ್ಯ ಅವರೇ ಪೂರ್ಣಾವಧಿ ಸಿಎಂ ಆಗಿ ಇರುತ್ತಾರೆ ಎಂದು ಬ್ಯಾಟಿಂಗ್ ಮಾಡುತ್ತಿದ್ದ ಡಾ. ಯತೀಂದ್ರ ಸಿದ್ದರಾಮಯ್ಯ ತಂದೆಯ ರಾಜೀನಾಮೆ ಬಳಿಕ ಸಂಪೂರ್ಣ ಸೈಲೆಂಟ್ ಆಗಿದ್ದಾರೆ. ದೆಹಲಿ ಪ್ರವಾಸದಲ್ಲೂ ತಂದೆಯ ಜೊತೆಯಲ್ಲಿದ್ದ ಯತೀಂದ್ರ ಇಂದು ಮಾಧ್ಯಮಗಳ ಮುಂದೆ ಬರದೆ ಮೌನಕ್ಕೆ ಶರಣಾಗಿದ್ದಾರೆ. ರಾಜಕೀಯ ಚರ್ಚೆಗಳ ಪ್ರಕಾರ, ಯತೀಂದ್ರ ಸಿದ್ದರಾಮಯ್ಯ ಅವರಿಗೆ ಹೊಸ ಸಂಪುಟದಲ್ಲಿ ಪ್ರಮುಖ ಸಚಿವ ಸ್ಥಾನ ಅಥವಾ ಉಪಮುಖ್ಯಮಂತ್ರಿ (DCM) ಸ್ಥಾನ ನೀಡುವ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಮಾತುಕತೆ ನಡೆದಿದೆ ಎನ್ನಲಾಗುತ್ತಿದೆ. ಇಂದಿನ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯ ಬಳಿಕ ಯತೀಂದ್ರ ಅವರ ರಾಜಕೀಯ ಭವಿಷ್ಯದ ಮುಂದಿನ ಚಿತ್ರಣ ಸಿಗಲಿದೆ.
ಈ ಎಲ್ಲಾ ರಾಜಕೀಯ ಬೆಳವಣಿಗೆಯ ನಡುವೆಯೂ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಕೊನೆಯದಾಗಿ ಸಾರ್ವಜನಿಕರ ಬಳಿ ತೆರಳಿ ಅವರ ಅಹವಾಲುಗಳನ್ನು ಸ್ವೀಕರಿಸಿದರು. ಒಟ್ಟಿನಲ್ಲಿ, ಸಿಎಂ ಪೀಠದಿಂದ ಕೆಳಗಿಳಿದರೂ ಕಾವೇರಿ ನಿವಾಸದಲ್ಲಿ ಸಿದ್ದರಾಮಯ್ಯ ಅವರ ರಾಜಕೀಯ ಶಕ್ತಿ ಮಾತ್ರ ಕಮ್ಮಿಯಾಗಿಲ್ಲ!
#Siddaramaiah #KaveriResidence #DKShivakumarCabinet #KarnatakaPolitics #CongressLobby #YatindraSiddaramaiah #ASPonnanna #KJGeorge #ZameerAhmedKhan #FreedomTV #BreakingNews #KarnatakaNewGovernment #CLPMeeting #BengaluruNews




