ಕ್ರೈಂ ಸ್ಟೋರಿ

ವರುಣನ ರೌದ್ರಾವತಾರ- ಆಲಿಕಲ್ಲು ಮಳೆಗೆ ಮಗು ಬಲಿ, ನಾಲ್ವರು ಗಂಭೀರ!

Heavy rain in Bidar small baby died some injured

ಬೀದರ್: ಗಡಿಜಿಲ್ಲೆ ಬೀದರ್‌ನಲ್ಲಿ ವರುಣನ ಆರ್ಭಟ ಮಿತಿಮೀರಿದೆ. ಜಿಲ್ಲೆಯಾದ್ಯಂತ ತಡರಾತ್ರಿಯಿಂದ ಬೆಳ್ಳಂಬೆಳಿಗ್ಗೆಯವರೆಗೆ ಗುಡುಗು, ಸಿಡಿಲು ಹಾಗೂ ಬಿರುಗಾಳಿ ಸಹಿತ ಸುರಿದ ಧಾರಾಕಾರ ಆಲಿಕಲ್ಲು ಮಳೆ ಭಾರೀ ದುರಂತವೊಂದನ್ನು ಸೃಷ್ಟಿಸಿದೆ. ಬಿರುಗಾಳಿಯ ರಭಸಕ್ಕೆ ಮನೆಯ ಮೇಲ್ಛಾವಣಿಯ ಕಲ್ಲು ಬಿದ್ದ ಪರಿಣಾಮ ೬ ವರ್ಷದ ಕಂದಮ್ಮ ಮೃತಪಟ್ಟು, ಒಂದೇ ಕುಟುಂಬದ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಹೃದಯವಿದ್ರಾವಕ ಘಟನೆ ಹುಲಸೂರು ಪಟ್ಟಣದಲ್ಲಿ ಸಂಭವಿಸಿದೆ.

ಹುಲಸೂರಿನಲ್ಲಿ ನಡುಕ-ಕಂದಮ್ಮ ಮಾಹೇರಾ ಸಾವು!


ಹುಲಸೂರು ಪಟ್ಟಣದ ತಹಶೀಲ್ದಾರ್ ಕಚೇರಿ ಮುಂಭಾಗದ ಬಡಾವಣೆಯಲ್ಲಿ ಈ ಭೀಕರ ದುರ್ಘಟನೆ ನಡೆದಿದೆ. ಮಾಹೇರಾ (6) ಎಂಬ ಹೆಸರಿನ ಆರು ವರ್ಷದ ಹೆಣ್ಣುಮಗು ಮೇಲ್ಛಾವಣಿಯ ಕಲ್ಲು ತಲೆಗೆ ಬಿದ್ದ ತಕ್ಷಣವೇ ಜೀವ ಕಳೆದುಕೊಂಡಿದೆ. ಈ ಘಟನೆಯಲ್ಲಿ ಫೖಸ್ (8), ಲಾಯಿಬಾ (10), ಯಾಸ್ಮೀನ್ (30) ಹಾಗೂ ಇಸ್ಮಾಯಿಲ್ ಶೇಕ್ (36) ಎಂಬ ನಾಲ್ವರು ತೀವ್ರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ತಕ್ಷಣವೇ ಹುಲಸೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ. ಸ್ಥಳಕ್ಕೆ ತಹಶೀಲ್ದಾರ್ ಶಿವಾನಂದ ಮೇತ್ರೆ ಅವರು ಭೇಟಿ ನೀಡಿ, ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಹುಲಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿದೆ.

ಜನಜೀವನ-ಅಸ್ತವ್ಯಸ್ತ-ಬಿಸಿಲಿಗೆ ತಂಪು!
ಕಳೆದ ಕೆಲವು ದಿನಗಳಿಂದ ಕಾದು ಕೆಂಡದಂತಾಗಿದ್ದ ಗಡಿಜಿಲ್ಲೆಯ ಭೂಮಿಗೆ ವರುಣದೇವ ತಂಪೆರೆದಿದ್ದಾನೆ. ನಿನ್ನೆ ತಡರಾತ್ರಿಯಿಂದ ಆರಂಭವಾದ ಮಳೆ ಜಿಲ್ಲೆಯ ಪ್ರಮುಖ ತಾಲೂಕುಗಳಾದ ಬೀದರ್, ಔರಾದ್, ಬಸವಕಲ್ಯಾಣ, ಹುಲಸೂರ, ಹುಮನಾಬಾದ್ ಹಾಗೂ ಭಾಲ್ಕಿಯಲ್ಲಿ ಇಂದೂ ಸಹ ಬಿಟ್ಟುಬಿಡದೇ ಧಾರಾಕಾರವಾಗಿ ಸುರಿದಿದೆ. ಒಂದು ಕಡೆ ತಂಪಾದರೆ ಮತ್ತೊಂದು ಕಡೆ ಮಳೆಯ ಅವಾಂತರದಿಂದ ಜನರ ಸರಕು ಸಾಮಾನುಗಳು ಜಲಾವೃತಗೊಂಡು ಹಲವಾರು ಮನೆಗಳಿಗೆ ನೀರು ನುಗ್ಗಿದೆ.

ರೈತರ ಮುಖದಲ್ಲಿ ಮಂದಹಾಸ!
ಬೆಳಗಿನ ಜಾವ ಬೀಸಿದ ಭೀಕರ ಬಿರುಗಾಳಿಯಿಂದಾಗಿ ಜನ ತೊಂದರೆ ಅನುಭವಿಸಿದರೆ, ಪ್ರಸಕ್ತ ಸಾಲಿನ ಮುಂಗಾರು ಬಿತ್ತನೆಗೆ ಭರದಿಂದ ಸಿದ್ಧತೆ ಮಾಡಿಕೊಳ್ಳುತ್ತಿದ್ದ ಅನ್ನದಾತರ ಮುಖದಲ್ಲಿ ಮಾತ್ರ ಈ ಮಳೆ ಹೊಸ ಭರವಸೆ ಮೂಡಿಸಿದ್ದು, ಮಂದಹಾಸ ಮೂಡುವಂತೆ ಮಾಡಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಜನರಿಗೂ ಹವಾಮಾನ ತಂಪಾಗಿರುವುದು ನಿರಾಳ ತಂದಿದೆ.

#FreedomTV #BidarRain #HulasurTragedy #HeavyRainfall #HailStorm #KarnatakaWeather #BidarNews #RainFires #FarmersHappy #ChildDeath #DistressNews #BreakingNews #KannadaNews

Comments (0)

Your email address will not be published. Required fields are marked *

Back to top button