ramanagaraರಾಜಕೀಯ

ಮತದಾರರಿಗೆ ಚೊಂಬು ಕೊಡ್ತಿರಾ- ಡಿಕೆಶಿ ವಿರುದ್ಧ ನಿಖಿಲ್ ಗುಡುಗು!

Nikhil kumarswamy counters DKS on Bidadi township project

ರಾಮನಗರ: ಜಮೀನು ಸ್ವಾಧೀನ ವಿವಾದಕ್ಕೆ ಸಂಬಂಧಿಸಿದಂತೆ ರಾಮನಗರ ಜಿಲ್ಲೆಯ ಬಿಡದಿಯ ಭೈರಮಂಗಲ ಗ್ರಾಮದಲ್ಲಿ ಜೆಡಿಎಸ್ ಯುವ ನಾಯಕ ನಿಖಿಲ್ ಕುಮಾರಸ್ವಾಮಿ ಅವರು ರಾಜ್ಯ ಕಾಂಗ್ರೆಸ್ ಸರ್ಕಾರ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಚುನಾವಣೆ ವೇಳೆ ಜನರ ಹತ್ತಿರ ಬೇಡಿ ಪೆನ್ನು, ಪೇಪರ್ ಪಡೆದುಕೊಂಡ ನೀವು, ಈಗ ಅಧಿಕಾರ ಕೊಟ್ಟ ಜನರಿಗೆ ‘ಚೊಂಬು’ ಕೊಡ್ತಾ ಇದ್ದೀರಿ” ಎಂದು ತೀಕ್ಷ್ಣವಾಗಿ ಕುಟುಕಿದರು. ರೈತರ ಪರ ಹೋರಾಟದಲ್ಲಿ ಭಾಗಿಯಾಗಿ ಭೈರಮಂಗಲ ಗ್ರಾಮದಲ್ಲಿ ಮಾತನಾಡಿದ ನಿಖಿಲ್, ಡಿಕೆಶಿ ಅವರ ಇತ್ತೀಚಿನ ಹೇಳಿಕೆ ಹಾಗೂ ಸಿಎಂ ಬದಲಾವಣೆ ಕುರಿತು ಮುಕ್ತವಾಗಿ ಹರಿಹಾಯ್ದರು.

ರೈತರಿಗೆ ವಿನಾಶಕ್ಕೆ ನಿಂತಿದೆ ಕಾಂಗ್ರೆಸ್​!

ಭೈರಮಂಗಲ ಭಾಗದ 26 ಗ್ರಾಮಗಳಿಗೆ ಇಂದು ಭೇಟಿ ನೀಡಿ ರೈತರ ಅಹವಾಲು ಆಲಿಸುತ್ತಿರುವ ನಿಖಿಲ್ ಕುಮಾರಸ್ವಾಮಿ, ಜಮೀನು ಕಳೆದುಕೊಳ್ಳುತ್ತಿರುವ ಅನ್ನದಾತರ ಬೆಂಬಲಕ್ಕೆ ನಿಂತಿದ್ದಾರೆ. “ನಾವಿಲ್ಲಿ ರೈತರ ವಿಚಾರದಲ್ಲಿ ಯಾವುದೇ ರಾಜಕೀಯ ಬೆರೆಸುತ್ತಿಲ್ಲ. ಇದು ಅನ್ನದಾತರ ಬದುಕಿನ ಪ್ರಶ್ನೆ. ತಮ್ಮ ಪಿತ್ರಾರ್ಜಿತ ಆಸ್ತಿಯನ್ನು ಉಳಿಸಿಕೊಳ್ಳುವುದು ರೈತರ ಹಕ್ಕು. ಆದರೆ ಈ ಯೋಜನೆಯಿಂದ ರೈತರ ವಿನಾಶವಾಗುವುದು ಖಂಡಿತ. ಇದನ್ನು ಕಾಂಗ್ರೆಸ್ ನಾಯಕರು ಕೇವಲ ತಮ್ಮ ಪ್ರತಿಷ್ಠೆಯಾಗಿ ತಗೆದುಕೊಂಡಂತೆ ಕಾಣುತ್ತಿದೆ.” “ರೈತರು ಎರಡೇಟು ಹೊಡೆದರೂ ಸರಿ, ನಾವು ಯೋಜನೆ ಮಾಡಿಯೇ ತೀರುತ್ತೇವೆ” ಎಂಬ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಹೇಳಿಕೆಗೆ ತಿರುಗೇಟು ನೀಡಿದ ನಿಖಿಲ್, “ರೈತರ ಕೈಯಲ್ಲಿ ಹೊಡೆಸಿಕೊಳ್ಳುವುದು ದೂರದ ಮಾತು. ಇಲ್ಲಿ ರೈತರು ಪ್ರತಿಭಟನೆಗೆ ಕೂತು ಬರೋಬ್ಬರಿ 435 ದಿನಗಳು ಕಳೆದಿವೆ. ನಾನು ಜಿಲ್ಲೆಯ ಮಗ ಅಂತ ಹೇಳಿಕೊಳ್ಳುವ ಡಿಕೆಶಿ ಅವರಾಗಲಿ, ಸ್ಥಳೀಯ ಶಾಸಕರಾಗಲಿ ಇಲ್ಲಿಯವರೆಗೆ ಬಂದು ಯಾಕೆ ರೈತರನ್ನು ಭೇಟಿ ಮಾಡಿಲ್ಲ? ಅವರ ಸಮಸ್ಯೆ ಆಲಿಸಿಲ್ಲ?” ಎಂದು ಪ್ರಶ್ನಿಸಿದರು. “ನಾವು ಭೌತಿಕವಾಗಿ ಈ ಜಿಲ್ಲೆಯಲ್ಲಿ ಹುಟ್ಟದೇ ಇರಬಹುದು. ಆದರೆ, ಈ ಜಿಲ್ಲೆಯ ಮಣ್ಣಿನೊಂದಿಗೆ ನಮ್ಮ ಭಾವನೆ ಅಡಗಿದೆ” ಎಂದು ಭಾವುಕರಾದರು.

ಡಿಕೆಶಿ ಮುಂದಿನ ಸಿಎಂ – ನಿಖಿಲ್ ಉತ್ತರ !
ರಾಜ್ಯ ರಾಜಕೀಯದಲ್ಲಿ ಸಿದ್ದರಾಮಯ್ಯ ರಾಜೀನಾಮೆ ನೀಡಲಿದ್ದು, ಡಿ.ಕೆ. ಶಿವಕುಮಾರ್ ಮುಂದಿನ ಮುಖ್ಯಮಂತ್ರಿಯಾಗಲಿದ್ದಾರೆ ಎಂಬ ಭಾರಿ ಚರ್ಚೆಯ ಕುರಿತು ಕೇಳಲಾದ ಪ್ರಶ್ನೆಗೆ ನಿಖಿಲ್ ಕುಮಾರಸ್ವಾಮಿ ಅತ್ಯಂತ ತೂಕದ ಪ್ರತಿಕ್ರಿಯೆ ನೀಡಿದ್ದಾರೆ “ರಾಜ್ಯದಲ್ಲಿ ಮುಂದೆ ಯಾರು ಸಿಎಂ ಆಗ್ತಾರೋ, ಯಾರು ಡಿಸಿಎಂ ಆಗ್ತಾರೋ ನಮಗೆ ಗೊತ್ತಿಲ್ಲ. ಅದರ ಬಗ್ಗೆ ನಾನು ಹೆಚ್ಚಾಗಿ ಪ್ರತಿಕ್ರಿಯೆ ಕೊಡಲು ಹೋಗುವುದಿಲ್ಲ. ರಾಜ್ಯದಲ್ಲಿ 136 ಸೀಟುಗಳನ್ನು ಗೆದ್ದು, ಅತಿ ದೊಡ್ಡ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಮತ್ತು ಸರ್ಕಾರ ನಡೆಸುತ್ತಿದೆ. ಹಾಗಾಗಿ ಕುರ್ಚಿಯ ಮೇಲೆ ಯಾರನ್ನು ಕೂರಿಸಬೇಕು ಎನ್ನುವುದು ಸಂಪೂರ್ಣವಾಗಿ ಅವರ ಪಾರ್ಟಿಗೆ ಬಿಟ್ಟ ವಿಚಾರ” ಎಂದು ಜಾರಿಕೊಂಡರು.
ಬಿಡದಿ ಟೌನ್ ಶಿಪ್ ಯೋಜನೆಗೆ ರೈತರು 435 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದರೂ ಸರ್ಕಾರ ಕ್ಯಾರೆ ಎನ್ನದಿರುವುದನ್ನು ಅಸ್ತ್ರ ಮಾಡಿಕೊಂಡಿರುವ ಜೆಡಿಎಸ್, ನಿಖಿಲ್ ಕುಮಾರಸ್ವಾಮಿ ನೇತೃತ್ವದಲ್ಲಿ ಉಗ್ರ ಹೋರಾಟಕ್ಕೆ ನಿಂತಿದ್ದು ರಾಜಕೀಯ ಬೆಳವಣಿಗೆಗಳು ಮುಂದುವರೆದಿವೆ.

#FreedomTV #NikhilKumaraswamy #DKShivakumar #RamanagaraNews #FarmersProtest #LandAcquisition #CongressvsJDS #Bidadi #Bhairamangala #KarnatakaPolitics #CMChangeKarnataka #BreakingNews #KannadaNews

Comments (0)

Your email address will not be published. Required fields are marked *

Back to top button