
ಮಂಡ್ಯ: ರಾಜ್ಯ ರಾಜಕೀಯದಲ್ಲಿ ಸೃಷ್ಟಿಯಾಗಿರುವ ನಾಯಕತ್ವ ಬದಲಾವಣೆಯ ಮಹಾ ತಿರುವಿನ ನಡುವೆಯೇ, ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ಅತ್ಯಂತ ಕುತೂಹಲಕಾರಿ ಹೇಳಿಕೆಯೊಂದನ್ನು ನೀಡಿದ್ದಾರೆ. “ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಾಜೀನಾಮೆ ಹಾಗೂ ಹೊಸ ನಾಯಕತ್ವ ಘೋಷಣೆಯ ಬಗ್ಗೆ ನಮಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಆದರೆ, ನಾಳೆ ನಡೆಯಲಿರುವ ಹೈಕಮಾಂಡ್ ಮಹತ್ವದ ನಿರ್ಧಾರದ ಬಳಿಕವೇ ಎಲ್ಲದಕ್ಕೂ ಉತ್ತರ ಸಿಗಲಿದೆ” ಎಂದು ಹೇಳುವ ಮೂಲಕ ಗೋಜಲು ಸೃಷ್ಟಿಸಿದ್ದಾರೆ. ಸಚಿವರು, ಸಿಎಂ ಮತ್ತು ಡಿಸಿಎಂ ನಡುವಿನ ಬಾಂಧವ್ಯ ಹಾಗೂ ನಾಳೆಯ ಹೈವೋಲ್ಟೇಜ್ ಮೀಟಿಂಗ್ ಬಗ್ಗೆ ಹಲವು ಸಂಗತಿಗಳನ್ನು ಹಂಚಿಕೊಂಡಿದ್ದಾರೆ.

“ಸಿದ್ದರಾಮಯ್ಯ – ಡಿಕೆಶಿ ನಮಗೆ ಎರಡು ಕಣ್ಣುಗಳಿದ್ದಂತೆ!”
ಕಾಂಗ್ರೆಸ್ ಪಕ್ಷಕ್ಕೆ ಇಬ್ಬರು ನಾಯಕರ ಕೊಡುಗೆಯನ್ನು ಶ್ಲಾಘಿಸಿದ ಚಲುವರಾಯಸ್ವಾಮಿ, ಪಕ್ಷದ ಒಗ್ಗಟ್ಟಿನ ಮಂತ್ರ ಜಪಿಸಿದರು. “ನನಗೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಇಬ್ಬರೂ ಎರಡು ಕಣ್ಣುಗಳಿದ್ದಂತೆ. ಇವರಿಬ್ಬರು ಕೇವಲ ನಮಗಷ್ಟೇ ಅಲ್ಲ; ಇಡೀ ಕಾಂಗ್ರೆಸ್ ಸರ್ಕಾರ, ಪಾರ್ಟಿ ಮತ್ತು ರಾಜ್ಯಕ್ಕೇ ಎರಡು ಕಣ್ಣುಗಳಾಗಿದ್ದಾರೆ. ರಾಜ್ಯದಲ್ಲಿ ನಾವು 136 ಜನ ಶಾಸಕರು ಗೆದ್ದು ಬೀಗಲು ಇವರಿಬ್ಬರ ಅಪಾರ ಶ್ರಮವೇ ಕಾರಣ.” ಇವರಿಬ್ಬರ ಮುಂದಿನ ರಾಜಕೀಯ ಭವಿಷ್ಯದ ಬಗ್ಗೆ ಎಐಸಿಸಿ ತೀರ್ಮಾನ ಮಾಡುತ್ತದೆ. ಸದ್ಯಕ್ಕೆ ಮಾಧ್ಯಮಗಳು ಹಾಗೂ ವಿರೋಧ ಪಕ್ಷದವರು ಈ ವಿಚಾರವನ್ನು ಭಾರಿ ಚರ್ಚೆ ಮಾಡುತ್ತಿದ್ದಾರೆ ಅಷ್ಟೇ. ಹೈಕಮಾಂಡ್‌ನಿಂದ ಯಾವುದೇ ಅಧಿಕೃತ ಪ್ರಕಟಣೆ ಇನ್ನೂ ಹೊರಬಿದ್ದಿಲ್ಲ.
ಸಿಎಂ ನಿವಾಸದಲ್ಲಿ ‘ಬ್ರೇಕ್ ಫಾಸ್ಟ್ ಮೀಟಿಂಗ್’
ನಾಳೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರೆದಿರುವ ಸಚಿವರ ಮಹತ್ವದ ಉಪಾಹಾರ ಸಭೆಯ ಬಗ್ಗೆಯೂ ಸಚಿವರು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಮಾತನಾಡಿದ್ದಾರೆ.”ಹೌದು, ನಾಳೆ ಮುಖ್ಯಮಂತ್ರಿಗಳು ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದಿದ್ದಾರೆ. ಅಲ್ಲಿಗೆ ಹೋದ ಮೇಲಷ್ಟೇ ಅಸಲಿ ವಿಚಾರ ಏನೆಂಬುದು ನಮಗೆ ಗೊತ್ತಾಗಲಿದೆ. ಸದ್ಯಕ್ಕೆ ದೆಹಲಿಯಲ್ಲಿ ರಾಜ್ಯಸಭೆ ಹಾಗೂ ಎಂಎಲ್‌ಸಿ ಸ್ಥಾನಗಳ ಆಯ್ಕೆ ಕುರಿತು ಚರ್ಚೆಯಾಗಿದೆ ಎಂದು ಮಾತ್ರ ನಮಗೆ ಗೊತ್ತು. ಆ ಬಗ್ಗೆ ಎಐಸಿಸಿ ನಾಳೆ ಬಹುಶಃ ಅಧಿಕೃತ ಪಟ್ಟಿ ಬಿಡುಗಡೆ ಮಾಡಬಹುದು. ವರಿಷ್ಠರು ಏನು ಸಂದೇಶ ಕಳುಹಿಸುತ್ತಾರೋ ಅದಕ್ಕೆ ನಾವು ಬದ್ಧರಾಗಿರುತ್ತೇವೆ. ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ.” ಎಂದರು.
ವಿರೋಧ ಪಕ್ಷಗಳಿಗೆ ಬೇರೆ ಕೆಲಸ ಇಲ್ಲ!
ಸರ್ಕಾರ ಪತನಗೊಳ್ಳಲಿದೆ ಎಂದು ಭವಿಷ್ಯ ನುಡಿಯುತ್ತಿರುವ ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದರು. “ವಿರೋಧ ಪಕ್ಷದವರಿಗೆ ಹಿಂದೆ ಆಡಳಿತ ನಡೆಸಿದ ಯೋಗ್ಯತೆಯೂ ಇಲ್ಲ, ಮುಂದೆ ಅವರಿಗೆ ಯಾವುದೇ ನಿರ್ದಿಷ್ಟ ಗುರಿಯೂ ಇಲ್ಲ. ಕೇವಲ ಅಧಿಕಾರದಲ್ಲಿರುವ ನಮ್ಮನ್ನು ಟೀಕೆ ಮಾಡುವುದು ಹಾಗೂ ಸದಾ ಕಾಲು ಎಳೆಯುವುದೇ ಅವರ ದಿನನಿತ್ಯದ ಕೆಲಸವಾಗಿದೆ” ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್‌ನ ಪ್ರಮುಖ ಸಚಿವರೊಬ್ಬರು “ನಾಳೆ ಗೊತ್ತಾಗಲಿದೆ” ಎಂದು ಹೇಳಿರುವುದು ಸಿದ್ದರಾಮಯ್ಯ ಅವರ ರಾಜೀನಾಮೆ ಪ್ರಕ್ರಿಯೆ ಬಹುತೇಕ ಅಂತಿಮ ಘಟ್ಟಕ್ಕೆ ತಲುಪಿದೆ ಎಂಬುದಕ್ಕೆ ಪರೋಕ್ಷ ಸಾಕ್ಷಿಯಂತಿದೆ. ನಾಳೆ ಸಿಎಂ ನಿವಾಸದಲ್ಲಿ ನಡೆಯಲಿರುವ ಸಚಿವರ ಬ್ರೇಕ್ ಫಾಸ್ಟ್ ಮೀಟಿಂಗ್ ಕೇವಲ ಸೌಜನ್ಯದ ಭೇಟಿಯಲ್ಲ, ಬದಲಿಗೆ ನಾಯಕತ್ವ ಬದಲಾವಣೆಯ ಸಭೆ ಎನ್ನುವುದು ರಾಜಕೀಯ ಪಂಡಿತರ ಲೆಕ್ಕಾಚಾರವಾಗಿದೆ.
#FreedomTV #NChaluvarayaswamy #SiddaramaiahResignation #DKShivakumar #KarnatakaPolitics #CongressCMChange #MandyaNews #BreakfastMeeting #HighCommandDecision #AICCList #RajyaSabhaElection #KannadaNews #BreakingNews




