BELAGAVIರಾಜಕೀಯ

ಸತೀಶ್ ಜಾರಕಿಹೊಳಿ KPCC ಅಧ್ಯಕ್ಷರಾದ್ರೆ ಪಕ್ಷಕ್ಕೆ ಆನೆ ಬಲ- ಶಾಸಕ ವಿಶ್ವಾಸ ವೈದ್ಯ!

PWD minister Satish jarakiholi must become KPCC president says MLA Vishwas Vaidya

ಬೆಳಗಾವಿ: ಸಿಎಂ ಬದಲಾವಣೆ ಹಾಗೂ ಹೈಕಮಾಂಡ್ ಜಟಾಪಟಿಯ ನಡುವೆಯೇ, ಸೌದತ್ತಿ ಯಲ್ಲಮ್ಮ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿಶ್ವಾಸ ವೈದ್ಯ ಅವರು ರಾಜ್ಯ ರಾಜಕೀಯದಲ್ಲಿ ಹೊಸ ಸುದ್ದಿಗೆ ಗ್ರಾಸವಾಗಿದ್ದಾರೆ.. “ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ನೀಡಿದರೆ ಒಳ್ಳೆಯದು. ಅವರು ಅತ್ಯುತ್ತಮವಾಗಿ ಕೆಲಸ ಮಾಡುತ್ತಾರೆ ಹಾಗೂ ಮುಂಬರುವ ದಿನಗಳಲ್ಲಿ ಪಕ್ಷವನ್ನು ಮತ್ತಷ್ಟು ಬಲವಾಗಿ ಅಧಿಕಾರಕ್ಕೆ ತರಲು ಇದು ಸಹಕಾರಿಯಾಗಲಿದೆ” ಎಂದು ಲೋಕೋಪಯೋಗಿ ಸಚಿವರ ಪರವಾಗಿ ಹೇಳಿದ್ದಾರೆ.ಬೆಳಗಾವಿಯಲ್ಲಿ ಸವದತ್ತಿ ಯಲ್ಲಮ್ಮ ಪ್ರಾಧಿಕಾರದ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಶಾಸಕರು, ಪಕ್ಷದ ಆಂತರಿಕ ಬೆಳವಣಿಗೆಗಳ ಬಗ್ಗೆ ಹಲವು ಆಸಕ್ತಿದಾಯಕ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.

ಉಪಹಾರ ಸಭೆ ನನಗೆ ತಿಳಿದಿಲ್ಲ!

ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯ ಅವರು ಕರೆದಿದ್ದಾರೆ ಎನ್ನಲಾದ ‘ಬ್ರೇಕ್ ಫಾಸ್ಟ್ ಮೀಟಿಂಗ್’ (Breakfast Meeting) ಕುರಿತು ನನಗೆ ಯಾವುದೇ ಮಾಹಿತಿ ಇಲ್ಲ. ನಾನು ಯಲ್ಲಮ್ಮ ಪ್ರಾಧಿಕಾರದ ಸಭೆ ಇರುವುದರಿಂದ ಸದ್ಯ ಬೆಳಗಾವಿಯಲ್ಲೇ ಇದ್ದೇನೆ. ಶಾಸಕಾಂಗ ಪಕ್ಷದ (CLP) ಸಭೆಯ ಬಗ್ಗೆಯೂ ನನಗೆ ಇನ್ನೂ ಯಾವುದೇ ಅಧಿಕೃತ ಮೆಸೇಜ್ ಬಂದಿಲ್ಲ. ನಾಳೆ ಒಂದು ವೇಳೆ ಹೈಕಮಾಂಡ್‌ನಿಂದ ಅಧಿಕೃತ ಸಂದೇಶ ಬಂದರೆ ಬೆಂಗಳೂರಿಗೆ ಹೋಗುತ್ತೇನೆ, ಇಲ್ಲದಿದ್ದರೆ ಇಲ್ಲೇ ಇರುತ್ತೇನೆ.
ಸಿಎಂ ಸಿದ್ದರಾಮಯ್ಯ ಅವರ ಬದಲಾವಣೆ ಆಗುತ್ತದೆಯೋ ಇಲ್ಲವೋ ಎಂಬುದು ನಮಗೆ ಗೊತ್ತಿಲ್ಲ. ಸತೀಶ್ ಜಾರಕಿಹೊಳಿ ಅವರಿಗೆ ಮುಖ್ಯಮಂತ್ರಿ ಸ್ಥಾನ ನೀಡಬೇಕೋ ಅಥವಾ ಕೆಪಿಸಿಸಿ ಅಧ್ಯಕ್ಷ ಪಟ್ಟ ಕೊಡಬೇಕೋ ಎಂಬುದು ಹೈಕಮಾಂಡ್ ವಿವೇಚನೆಗೆ ಬಿಟ್ಟಿದ್ದು ಎಂದು ನುಡಿದರು.

ನಮ್ಮವರಿಗೂ ಅವಕಾಶ ಕೊಡಿ! 65 ಶಾಸಕರ ರಹಸ್ಯ ಸಭೆಯ ಸತ್ಯ ಒಪ್ಪಿಕೊಂಡ ವೈದ್ಯ!
ರಾಜ್ಯ ಕಾಂಗ್ರೆಸ್‌ನಲ್ಲಿ ಸಚಿವ ಸ್ಥಾನಕ್ಕಾಗಿ ಒಳಗೊಳಗೆ ನಡೆಯುತ್ತಿರುವ ಯುವ ಶಾಸಕರ ಬಂಡಾಯದ ಬಗ್ಗೆಯೂ ವಿಶ್ವಾಸ ವೈದ್ಯ ಶಾಕಿಂಗ್ ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. ನಾನು ವೈಯಕ್ತಿಕವಾಗಿ ಯಾವುದೇ ಸಚಿವ ಸ್ಥಾನದ ಆಕಾಂಕ್ಷಿಯಲ್ಲ, ಅದಕ್ಕಾಗಿ ಲಾಬಿ ಕೂಡ ಮಾಡುವುದಿಲ್ಲ. ಆದರೆ, ಕಾಂಗ್ರೆಸ್‌ನ ಒಟ್ಟು 136 ಶಾಸಕರ ಪೈಕಿ ಶೇಕಡಾ 40 ರಷ್ಟು ಜನ ಮೊದಲ ಬಾರಿ ಗೆದ್ದ ಯುವ ಶಾಸಕರಿದ್ದಾರೆ. ಒಮ್ಮೆ ಅಥವಾ ಎರಡು ಬಾರಿ ಗೆದ್ದಿರುವ ಶಾಸಕರೆಲ್ಲ ಸೇರಿ ಸುಮಾರು ನಾಲ್ಕೈದು ತಿಂಗಳ ಹಿಂದೆ ಬೆಂಗಳೂರಿನಲ್ಲಿ ಒಂದು ರಹಸ್ಯ ಸಭೆ ನಡೆಸಿದ್ದೆವು. ಆ ಸಭೆಯಲ್ಲಿ ಬರೋಬ್ಬರಿ 65 ಜನ ಶಾಸಕರು ಭಾಗಿಯಾಗಿದ್ದೆವು. “ನಮ್ಮಂತಹ ಹೊಸಬರಿಗೂ ಸಂಪುಟದಲ್ಲಿ ಅವಕಾಶ ಕೊಡಿ” ಎಂದು ನಾವು ನಾಯಕರನ್ನು ಕೇಳಿರುವುದು ನಿಜ ಎಂದು ಸತ್ಯ ಒಪ್ಪಿಕೊಂಡಿದ್ದಾರೆ.

ಒಂದೆಡೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ನಡುವೆ ಕುರ್ಚಿ ಸಮರ ನಡೆಯುತ್ತಿದ್ದರೆ, ಇನ್ನೊಂದೆಡೆ ಬೆಳಗಾವಿ ಸಾಹುಕಾರ್ ಸತೀಶ್ ಜಾರಕಿಹೊಳಿ ಪರ ಉತ್ತರದ ಶಾಸಕರು ಬಹಿರಂಗವಾಗಿಯೇ ಧ್ವನಿ ಎತ್ತುತ್ತಿದ್ದಾರೆ. ಅದರಲ್ಲೂ ಮೊದಲ ಬಾರಿ ಗೆದ್ದಿರುವ 65 ಕ್ಕೂ ಹೆಚ್ಚು ಶಾಸಕರು ಒಗ್ಗಟ್ಟಾಗಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿರುವುದು, ಮುಂಬರುವ ದಿನಗಳಲ್ಲಿ ಸಂಪುಟ ಪುನಾರಚನೆಯ ವೇಳೆ ಭಾರಿ ಬದಲಾವಣೆಯ ಮುನ್ಸೂಚನೆ ನೀಡುತ್ತಿದೆ.

#FreedomTV #KarnatakaPolitics #VishwasVaidya #SatishJarkiholi #CongressCMChange #KPCCPresident #Siddaramaiah #BelagaviNews #CLPMeeting #CabinetExpansion #KannadaNews #BreakingNews

Comments (0)

Your email address will not be published. Required fields are marked *

Back to top button