MYSORE

ಸೋರುತಿಹುದು ಸರ್ವಪಲ್ಲಿ ರಾಧಾಕೃಷ್ಣನ್ ಬಂಗಲೆ!

S.Radhakrishnan bunglow leakage in Mysore urges for rennovation

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರು ಎಂದ ತಕ್ಷಣ ಜಗತ್ಪ್ರಸಿದ್ಧ ಅರಮನೆ ಹಾಗೂ ಇಲ್ಲಿನ ಭವ್ಯ ಪಾರಂಪರಿಕ ಕಟ್ಟಡಗಳು ಪ್ರವಾಸಿಗರ ಕಣ್ಣು ಕೋರೈಸುತ್ತವೆ. ಲಕ್ಷಾಂತರ ಪ್ರವಾಸಿಗರನ್ನು ಆಕರ್ಷಿಸುವ ಮೈಸೂರು ಅರಮನೆಯ ಸಂರಕ್ಷಣೆ ಹಾಗೂ ಜೀರ್ಣೋದ್ಧಾರ ಕಾಲಕಾಲಕ್ಕೆ ವ್ಯವಸ್ಥಿತವಾಗಿ ನಡೆಯುತ್ತಿದೆ. ಕಾರಣ ಅದು ಕಲೆಕ್ಷನ್ ಕೇಂದ್ರ. ಆದರೆ, ಇತಿಹಾಸ ಸಾರುವ ಉಳಿದ ಪಾರಂಪರಿಕ ಕಟ್ಟಡಗಳ ಗತಿ ಏನು? ಎಂಬ ಯಕ್ಷಪ್ರಶ್ನೆ ಸಾಂಸ್ಕೃತಿಕ ಪ್ರೇಮಿಗಳನ್ನು ಕಾಡತೊಡಗಿದೆ.

ಭಾರತದ ಶಿಕ್ಷಣ ಕ್ಷೇತ್ರಕ್ಕೆ ಸಾರ್ವಕಾಲಿಕ ಕೊಡುಗೆ ನೀಡಿ, ದೇಶದ ಅತ್ಯುನ್ನತ ರಾಷ್ಟ್ರಪತಿ ಹುದ್ದೆಗೇರಿದ ಮಹಾನ್ ತತ್ವಜ್ಞಾನಿ ಸರ್ವಪಲ್ಲಿ ಡಾ. ರಾಧಾಕೃಷ್ಣನ್ ಅವರು ಮೈಸೂರಿನಲ್ಲಿದ್ದಾಗ ವಾಸ್ತವ್ಯ ಹೂಡಿದ್ದ ಐತಿಹಾಸಿಕ ‘ಪ್ರೊಫೆಸರ್ ಕ್ವಾಟ್ರಸ್ ಸೂಕ್ತ ನಿರ್ವಹಣೆಯಿಲ್ಲದೆ ಶಿಥಿಲಾವಸ್ಥೆ ತಲುಪಿದೆ.

ಐತಿಹಾಸಿಕ ಬಂಗಲೆ!


ಡಾ. ರಾಧಾಕೃಷ್ಣನ್ ಅವರು ಮೈಸೂರು ವಿಶ್ವವಿದ್ಯಾನಿಲಯದಲ್ಲಿ ನಾಲ್ಕು ವರ್ಷಗಳ ಕಾಲ ತತ್ವಶಾಸ್ತ್ರ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾಗ (೧೯೧೮-೧೯೨೧) ಅವರಿಗೆ ಉಳಿದುಕೊಳ್ಳಲು ಈ ಭವ್ಯ ಬಂಗಲೆಯನ್ನು ನೀಡಲಾಗಿತ್ತು. ಮೈಸೂರಿನ ಪ್ರಸಿದ್ಧ ಕುಕ್ಕರಹಳ್ಳಿ ಕೆರೆಯ ಸಮೀಪವಿರುವ ಈ ಬಂಗಲೆ ನೂರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿದೆ. ಕಾಲಕ್ರಮೇಣ ಈ ಬಂಗಲೆ ೨೦೧೩ರ ಅವಧಿಯಲ್ಲಿ ತೀವ್ರ ಶಿಥಿಲಾವಸ್ಥೆ ತಲುಪಿತ್ತು. ಆಗ ಪ್ರಮುಖ ಶಿಕ್ಷಣ ತಜ್ಞ ಡಾ. ಎಂ.ಆರ್. ದೊರೆಸ್ವಾಮಿ ಅವರು ಮೈಸೂರು ವಿಶ್ವವಿದ್ಯಾಲಯಕ್ಕೆ ಪತ್ರ ಬರೆದು, ಈ ಐತಿಹಾಸಿಕ ಸ್ಮಾರಕವನ್ನು ಪುನರುಜ್ಜೀವನಗೊಳಿಸುವಂತೆ ವಿನಂತಿಸಿದ್ದರು. ಎಚ್ಚೆತ್ತ ಮೈಸೂರು ವಿವಿಯು ದಾನಿಗಳ ನೆರವಿನೊಂದಿಗೆ ಸುಮಾರು ೫೪ ಲಕ್ಷ ರೂ. ವೆಚ್ಚದಲ್ಲಿ ಎರಡು ಅಂತಸ್ತಿನ ಈ ಪಾರಂಪರಿಕ ಶೈಲಿಯ ಬಂಗಲೆಯನ್ನು ಯಥಾಸ್ಥಿತಿಯಲ್ಲಿ ನವೀಕರಿಸಿತ್ತು.ಬಳಿಕ ಡಾ. ರಾಧಾಕೃಷ್ಣನ್ ಅವರ ಸವಿ ನೆನಪಿನಲ್ಲಿ ಈ ಬಂಗಲೆಯನ್ನು ಗ್ರಂಥಾಲಯ ಹಾಗೂ ಸಂಶೋಧನಾ ಕೇಂದ್ರವಾಗಿ ಪರಿವರ್ತಿಸಿ ಪ್ರವಾಸಿಗರ ವೀಕ್ಷಣೆಗೆ ಮುಕ್ತಗೊಳಿಸಲಾಗಿತ್ತು. ಆದರೆ ಮತ್ತೆ ಬಂಗಲೆ ಗಾಳಿ ಮಳೆಗೆ ಶಿಥಿಲಗೊಂಡಿದ್ದು ಮಳೆ ಬಂದರೆ ಸೋರಲಾರಂಭಿಸುತ್ತದೆ ಎಂದು ಪ್ರೊ. ರಂಗರಾಜು ನೋವಿನಿಂದ ಹೇಳಿದರು.

ನಿರ್ವಹಣಾ ವೈಫಲ್ಯ – ಸಾರ್ವಜನಿಕರ ಆಕ್ರೋಶ
ನವೀಕರಣಗೊಂಡ ಕೆಲವೇ ವರ್ಷಗಳಲ್ಲಿ ನಿರ್ವಹಣೆಯ ಕೊರತೆಯಿಂದಾಗಿ ಕಟ್ಟಡ ಸೊರಗಿ ಸೋರುತ್ತಿದೆ. ಗೋಡೆಗಳು ಬಿರುಕು ಬಿಟ್ಟು, ಶಿಥಿಲಾವಸ್ಥೆಯತ್ತ ಮುಖ ಮಾಡಿದೆ. ದೇಶದ ಹೆಮ್ಮೆಯ ತತ್ವಜ್ಞಾನಿ ಬೋಧಿಸಿದ ಹಾಗೂ ನೆಲೆಸಿದ ಮೈಸೂರು ವಿಶ್ವವಿದ್ಯಾಲಯದ ಈ ಜಾಗ ಪ್ರತಿಯೊಬ್ಬರಿಗೂ ಹೆಮ್ಮೆಯ ವಿಷಯ. ಆದರೆ ಇಂತಹ ಮಹಾನ್ ವ್ಯಕ್ತಿಯ ನೆನಪಿನ ಬಂಗಲೆ ಹೀಗೆ ಹಾಳಾಗುತ್ತಿರುವುದಕ್ಕೆ ಪಪಾರಂಪರಿಕ ಪ್ರೇಮಿಗಳು ಬೇಸರ ವ್ಯಕ್ತಪಡಿಸಿದ್ದಾರೆ.
“ಡಾ. ರಾಧಾಕೃಷ್ಣನ್ ಅವರು ತಂಗಿದ್ದ ಈ ಬಂಗಲೆ ಮೈಸೂರಿನ ಶೈಕ್ಷಣಿಕ ಇತಿಹಾಸದ ಹೆಗ್ಗುರುತು. ಇದನ್ನು ಯಥಾಸ್ಥಿತಿಯಲ್ಲಿ ನವೀಕರಿಸಿ, ಶಾಶ್ವತವಾಗಿ ಸಂರಕ್ಷಿಸುವುದು ವಿಶ್ವವಿದ್ಯಾಲಯ ಮತ್ತು ಸರ್ಕಾರದ ಕರ್ತವ್ಯವಾಗಿದೆ.” ಎಂದು ಪ್ರೊ. ರಂಗರಾಜು, ನಿವೃತ್ತ ಪ್ರಾಧ್ಯಾಪಕರು ಹಾಗೂ ಪರಂಪರೆ ಸಂರಕ್ಷಣಾ ಸಮಿತಿಯ ಮಾಜಿ ಸದಸ್ಯರು ಹೇಳಿದರು. ಈ ಬಂಗಲೆಯನ್ನು ತಕ್ಷಣವೇ ದುರಸ್ತಿಗೊಳಿಸಿ ಮೈಸೂರಿಗೆ ಬರುವ ಪ್ರವಾಸಿಗರಿಗೆ ಮತ್ತು ವಿದ್ಯಾರ್ಥಿಗಳಿಗೆ ಮುಕ್ತಗೊಳಿಸಬೇಕು. ಇದನ್ನೊಂದು ಪವಿತ್ರ ಪ್ರವಾಸಿ ತಾಣವಾಗಿ ಮತ್ತು ಜ್ಞಾನದ ಕೇಂದ್ರವಾಗಿ ಉಳಿಸಬೇಕು ಎನ್ನುವುದು ಮೈಸೂರಿನ ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.

#Mysuru #HeritageMysuru #DrRadhakrishnanBungalow #MysoreUniversity #KukkarahalliLake #SaveHeritage #FreedomTV #KarnatakaTourism #HistoricMysuru #EducationLegend

Comments (0)

Your email address will not be published. Required fields are marked *

Back to top button