Ballaryಕ್ರೈಂ ಸ್ಟೋರಿ

ಬಡವರಿಗೆ ಮೂರು ನಾಮ ಇಟ್ಟ ಶಿವರಾಜ್- ಮಹಾವಂಚನೆ!

corporation member husband cheats the people by selling government land as layout sites

ಬಳ್ಳಾರಿ: ಮಹಾನಗರ ಪಾಲಿಕೆಯ ಕಾಂಗ್ರೆಸ್ ಸದಸ್ಯೆಯೊಬ್ಬರ ಪತಿ ಸರ್ಕಾರಿ ಜಾಗವನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಂಡು, ಬಡ ಜನರಿಗೆ ಸೈಟ್ ನೀಡುವುದಾಗಿ ನಂಬಿಸಿ ಲಕ್ಷಾಂತರ ರೂಪಾಯಿ ವಸೂಲಿ ಮಾಡಿ ವಂಚಿಸಿರುವ ಆಘಾತಕಾರಿ ಪ್ರಕರಣವೊಂದು ಬಳ್ಳಾರಿಯಲ್ಲಿ ಬೆಳಕಿಗೆ ಬಂದಿದೆ. ಬಳ್ಳಾರಿ ಪಾಲಿಕೆಯ ಕಾಂಗ್ರೆಸ್ ಸದಸ್ಯೆ ಉಮಾದೇವಿ ಅವರ ಪತಿ, ಕಾಂಗ್ರೆಸ್ ಮುಖಂಡ ಶಿವರಾಜ್ ಬಡವರ ಹೊಟ್ಟೆ ಮೇಲೆ ಹೊಡೆದು ತಿರುಪತಿ ಲಡ್ಡು ಕೊಟ್ಟ ಆರೋಪಿಯಾಗಿದ್ದಾನೆ. ಜಿಲ್ಲಾಡಳಿತ ನಡೆಸಿದ ಭರ್ಜರಿ ಒತ್ತುವರಿ ತೆರವು ಕಾರ್ಯಾಚರಣೆಯ ವೇಳೆ ಈ ಮಹಾ ವಂಚನೆ ಬಹಿರಂಗವಾಗಿದೆ.

7.87 ಎಕರೆ ಸರ್ಕಾರಿ ಜಾಗ ಗುಳುಂ ಸ್ಕೆಚ್!


ಬಳ್ಳಾರಿ ತಾಲೂಕಿನ ಬೂದಿಹಾಳ್ ಗ್ರಾಮದ ಸರ್ವೆ ನಂಬರ್ 125 P ನಲ್ಲಿರುವ ಸುಮಾರು 7.87 ಎಕರೆ ಸರ್ಕಾರಕ್ಕೆ ಸೇರಿದ ಹಳ್ಳದ ಜಾಗವನ್ನು ಉಮಾದೇವಿ ಅವರ ಪತಿ ಶಿವರಾಜ್ ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದರು. ಕೇವಲ ಒತ್ತುವರಿ ಮಾಡುವುದಷ್ಟೇ ಅಲ್ಲದೆ, ಆ ಸರ್ಕಾರಿ ಜಾಗದಲ್ಲೇ ಅನಧಿಕೃತವಾಗಿ ಲೇಔಟ್ (ಬಡಾವಣೆ) ನಿರ್ಮಿಸಿದ್ದರು. ಬಳಿಕ, ಸೂರು ಇಲ್ಲದ ಮುಗ್ಧ ಬಡ ಜನರನ್ನೇ ಟಾರ್ಗೆಟ್ ಮಾಡಿಕೊಂಡ ಐನಾತಿ ಶಿವರಾಜ್, ತಲಾ ಒಂದು ಸೈಟ್‌ಗೆ 1.50 ಲಕ್ಷ ರೂಪಾಯಿ ನಿಗದಿಪಡಿಸಿ ಹಲವರಿಂದ ಲಕ್ಷಾಂತರ ರೂಪಾಯಿ ಹಣ ವಸೂಲಿ ಮಾಡಿ ಸೈಟ್ ಹಂಚಿಕೆ ಮಾಡಿದ್ದನು. ಕಡಿಮೆ ಬೆಲೆಗೆ ಸೈಟ್ ಸಿಗುತ್ತಿದೆ ಎಂದು ಮುಗ್ಧ ಜನತೆ ತಾ ಮುಂದು ನಾ ಮುಂದು ಎಂಬಂತೆ ಸಾಲ ಸೋಲ ಮಾಡಿ ಹಣ ನೀಡಿದ್ದು ಈಗ ಗ್ರಾಹಕರಿಗೆ ಉಂಡೆ ನಾಮ ಸಿಕ್ಕಿದೆ.

ಲೇ ಔಟ್ ಧ್ವಂಸ-ಬಯಲಾಯ್ತು ವಂಚನೆ!
ಸರ್ಕಾರಿ ಜಾಗ ಒತ್ತುವರಿಯಾಗಿರುವ ಕುರಿತು ಮಾಹಿತಿ ಪಡೆದ ಬಳ್ಳಾರಿ ಅಪರ ಜಿಲ್ಲಾಧಿಕಾರಿ (ADC) ಮೊಹಮ್ಮದ್ ಜುಬೇರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಬೂದಿಹಾಳ್ ಗ್ರಾಮದ ಸರ್ವೆ ನಂಬರ್ 125 P ಜಾಗಕ್ಕೆ ಭೇಟಿ ನೀಡಿ ಜೆಸಿಬಿ ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿತು. ಜಿಲ್ಲಾಡಳಿತವು ಅಕ್ರಮ ಲೇಔಟ್ ಧ್ವಂಸಗೊಳಿಸುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ನಿವೇಶನ ಖರೀದಿದಾರರು ತಮಗಾದ ಘನಘೋರ ಮೋಸವನ್ನು ಕಂಡು ಕಣ್ಣೀರಿಟ್ಟರು.

ಉಲ್ಟಾ ಹೊಡೆದ ಶಿವರಾಜ- ಮೋಸ ಬಟಾಬಯಲಾಗ್ತಿದ್ದಂತೆ ಉಲ್ಟಾ ಹೊಡೆದಿರುವ ಶಿವರಾಜ್ ನನಗೂ ಇದಕ್ಕೂ ಸಂಬಂಧ ಇಲ್ಲ ನಾನು ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ, ಜನ ಸೈಟ್ ಕೇಳಿದ್ರು. ಹೊನ್ನೂರ ಎಂಬುವವರ ಲೇಔಟ್ ನ ಸೈಟ್ ಮಾರಾಟದಲ್ಲಿ ನಾನು ಮಧ್ಯಸ್ಥಿಕೆ ವಹಿಸಿದೆ. ಇದೀಗ ಅನ್ಯಾಯಕ್ಕೆ ಒಳಗಾಗಿರೋ ಜನರಿಗೆ ಕೊಟ್ಟಿರೋ ಹಣ ವಾಪಸ್ ಕೊಡ್ತೇವೆ ಎಂದಿದ್ದಾರೆ. ಆದ್ರೆ ಕಟ್ಟಿಕೊಂಡ ಮನೆಯ ಹಣದ ಬಗ್ಗೆ ಕೇಳಿದ್ರೆ ನನಗೇನು ಗೊತ್ತಿಲ್ಲ ಎಂದು ನುಣುಚಿಕೊಂಡಿದ್ದಾನೆ.

ಎಡಿಸಿ ಮುಂದೆ ಬಡವರ ಗೋಳು- ನಂಬಿ ಮನೆ ಹಾಳು!
ಒತ್ತುವರಿ ತೆರವು ಕಾರ್ಯದ ವೇಳೆ ಸ್ಥಳದಲ್ಲಿದ್ದ ಅಪರ ಜಿಲ್ಲಾಧಿಕಾರಿ ಮೊಹಮ್ಮದ್ ಜುಬೇರ್ ಅವರ ಮುಂದೆ ಸೈಟ್ ಕಳೆದುಕೊಂಡ ಸಂತ್ರಸ್ತರು ತಮ್ಮ ಅಳಲನ್ನು ತೋಡಿಕೊಂಡರು. “ನಮ್ಮಲ್ಲಿರುವ ಅಲ್ಪಸ್ವಲ್ಪ ಹಣವನ್ನು ಕೊಟ್ಟು ಸೈಟ್ ಖರೀದಿಸಿದ್ದೆವು. ಇದು ಸರ್ಕಾರಿ ಜಾಗ ಎಂದು ನಮಗೆ ಗೊತ್ತಿರಲಿಲ್ಲ. ಈಗ ಕಟ್ಟಿದ ಹಣವೂ ಇಲ್ಲ, ಇತ್ತ ಸೈಟೂ ಇಲ್ಲದಂತಾಗಿದೆ” ಎಂದು ಅಳಲು ತೋಡಿಕೊಂಡಿದ್ದಾರೆ.
ಸರ್ಕಾರಕ್ಕೆ ಸೇರಿದ ಹಳ್ಳದ ಜಾಗವನ್ನು ಒತ್ತುವರಿ ಮಾಡಿದ ಕಾಂಗ್ರೆಸ್ ಮುಖಂಡ ಶಿವರಾಜ್, ನಂಬಿ ಬಂದ ಬಡ ಜನರ ಬದುಕನ್ನೇ ಹಳ್ಳಕ್ಕೆ ತಳ್ಳಿದ್ದಾರೆ. ಸದ್ಯಕ್ಕೆ ಜಿಲ್ಲಾಡಳಿತವು ಕೋಟ್ಯಂತರ ರೂಪಾಯಿ ಮೌಲ್ಯದ ಸರ್ಕಾರಿ ಭೂಮಿಯನ್ನು ಯಶಸ್ವಿಯಾಗಿ ವಶಕ್ಕೆ ಪಡೆದಿದೆ. ಆದರೆ, ರಾಜಕಾರಣಿಯ ಮಾತನ್ನು ನಂಬಿ ಮೋಸಹೋದ ಬಡ ಜನರಿಗೆ ನ್ಯಾಯ ಒದಗಿಸಿಕೊಡಬೇಕು ಮತ್ತು ವಂಚಕ ಶಿವರಾಜ್ ವಿರುದ್ಧ ಕಠಿಣ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಸಾರ್ವಜನಿಕರು ತೀವ್ರವಾಗಿ ಆಗ್ರಹಿಸಿದ್ದಾರೆ.

#FreedomTV #Ballari #BallariNews #LandScam #Encroachment #CongressLeader #FraudingPoor #BallariCorporation #GovernmentLand #IllegalLayout #PublicProperty #JusticeForPoor

Comments (0)

Your email address will not be published. Required fields are marked *

Back to top button