
ನವದೆಹಲಿ: ಮುಂಗಾರು ಬಿತ್ತನೆಗೆ ಸಜ್ಜಾಗುತ್ತಿರುವ ರಾಜ್ಯದ ಅನ್ನದಾತನಿಗೆ ಬೆಲೆ ಏರಿಕೆಯ ಭಾರಿ ಹೊಡೆತ ಬಿದ್ದಿದೆ. ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಜಾಗತಿಕ ಪರಿಣಾಮ ಇದೀಗ ನೇರವಾಗಿ ರೈತರ ಜೇಬಿಗೆ ಕತ್ತರಿ ಹಾಕಿದೆ. ರಸಗೊಬ್ಬರ ತಯಾರಿಕಾ ಕಚ್ಚಾ ವಸ್ತುಗಳ ಬೆಲೆ ಹೆಚ್ಚಳಗೊಂಡಿರುವುದರಿಂದ ಪೊಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳ ಬೆಲೆ ವಿಪರೀತ ಏರಿಕೆಯಾಗಿದ್ದು, ರೈತ ಸಮುದಾಯ ಬೆಲೆ ಏರಿಕೆಗೆ ತತ್ತರಿಸಿ ಹೋಗಿದೆ.

20 ದಿನದಲ್ಲೇ ರೂ.800 ಹೆಚ್ಚಳ! ಒಂದು ಚೀಲ ರಸಗೊಬ್ಬರ ರೂ.2,200!
ಮೇ ತಿಂಗಳ ಆರಂಭದಲ್ಲಿ 50 ಕೆ.ಜಿ.ಯ ಒಂದು ಚೀಲ ಕಾಂಪ್ಲೆಕ್ಸ್ ಮತ್ತು ಪೊಟ್ಯಾಷ್ ರಸಗೊಬ್ಬರದ ಬೆಲೆ ₹1,400 ಇತ್ತು. ಆದರೆ ಕೇವಲ ಮೂರೇ ವಾರಗಳಲ್ಲಿ ಇದು ರೂ.1,700 ಕ್ಕೆ ತಲುಪಿ ರೈತರಿಗೆ ಆತಂಕ ಸೃಷ್ಟಿಸಿತ್ತು.ರೈತರಿಗೆ ಕಷ್ಟ ನೀಡಲೆಂದೇ ಇನ್ನಷ್ಟು ಮುಂದೆ ಹೋಗಿ, ಇದೀಗ ಮಾರುಕಟ್ಟೆಗೆ ಬರುತ್ತಿರುವ ಹೊಸ ದಾಸ್ತಾನುಗಳ ಬೆಲೆ ಬರೋಬ್ಬರಿ ರೂ.2,200 ಕ್ಕೆ ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ಈ ದರ ಇನ್ನು ಹೆಚ್ಚಾಗುವ ಸಾಧ್ಯತೆಯಿದೆ ಎಂದು ಕಂಪನಿಗಳ ಪ್ರತಿನಿಧಿಗಳು ತಿಳಿಸಿದ್ದಾರೆ.
ಸಬ್ಸಿಡಿ ಮಿತಿ-ಯೂರಿಯಾ, ಡಿಎಪಿ ಮಾತ್ರ!
ಕೇಂದ್ರ ಸರ್ಕಾರವು ಭಾರಿ ಪ್ರಮಾಣದ ಸಬ್ಸಿಡಿ ನೀಡುತ್ತಿರುವುದರಿಂದ ಸದ್ಯಕ್ಕೆ ಯೂರಿಯಾ ಮತ್ತು ಡಿಎಪಿ (DAP) ದರಗಳು ನಿಯಂತ್ರಣದಲ್ಲಿವೆ.ಆದರೆ, ಪೊಟ್ಯಾಷ್ ಮತ್ತು ಕಾಂಪ್ಲೆಕ್ಸ್ ರಸಗೊಬ್ಬರಗಳಿಗೆ ನೀಡಲಾಗುವ ಸಬ್ಸಿಡಿ ಮಿತ ಪ್ರಮಾಣದಲ್ಲಿದೆ. ಜಾಗತಿಕವಾಗಿ ಬೆಲೆ ಏರಿಕೆಯಾದಾಗಲೆಲ್ಲಾ ಸಬ್ಸಿಡಿ ಪ್ರಮಾಣ ಹೆಚ್ಚಿಸದ ಕಾರಣ,ಮುಕ್ತ ಮಾರುಕಟ್ಟೆಯಲ್ಲಿ ಕಂಪನಿಗಳು ಲಾಭಕ್ಕಾಗಿ ಮನ ಬಂದಂತೆ ದರ ಏರಿಕೆ ಮಾಡುತ್ತಿವೆ. ಇದು ಹೀಗೆಯೇ ಮುಂದುವರಿದರೆ ಯೂರಿಯಾ ಮತ್ತು ಡಿಎಪಿ ದರ ನಿಯಂತ್ರಿಸುವುದು ಕಷ್ಟಕರ ಎನ್ನಲಾಗುತ್ತಿದೆ.
ರಸಗೊಬ್ಬರ ಖರೀದಿಗೆ ‘ಎಫ್ಐಡಿ (FID) ಕಡ್ಡಾಯ!
ಕಳ್ಳಸಂತೆಯಲ್ಲಿ ಗೊಬ್ಬರ ಮಾರಾಟ ಹಾಗೂ ಗೊಬ್ಬರದ ದುರುಪಯೋಗ ತಡೆಯಲು ಸರ್ಕಾರ ಈಗ ಕಠಿಣ ನಿಯಮ ಜಾರಿಗೆ ತಂದಿದೆ. ಬಳ್ಳಾರಿಯಲ್ಲಿ ಇತ್ತೀಚೆಗೆ ಪತ್ತೆಯಾದ ಅಕ್ರಮ ಯೂರಿಯಾ ಜಾಲಕ್ಕೆ ಕೇರಳದ ನಂಟು ಇರುವುದು ಬಯಲಾದ ಬೆನ್ನಲ್ಲೇ ಈ ಕ್ರಮ ಕೈಗೊಳ್ಳಲಾಗಿದೆ. ರಸಗೊಬ್ಬರ ಖರೀದಿಸಲು ಈಗ ಎಫ್ಐಡಿ (ರೈತರ ಗುರುತಿನ ಸಂಖ್ಯೆ) ಕಡ್ಡಾಯವಾಗಿದ್ದು ಈ ಕ್ರಮವನ್ನು ರೈತರು ಚಾಚೂ ತಪ್ಪದೆ ಪಾಲಿಸಬೇಕು. ಖರೀದಿ ಮಿತಿಯಿಂದ ರೈತರಿಗೆ ಕಿರಿಕಿರಿ- ‘ಕೆ ಕಿಸಾನ್’ ಆ್ಯಪ್ ಮೂಲಕ ನೋಂದಣಿ ಮಾಡಿ, ಸದ್ಯಕ್ಕೆ ಎಕರೆಗೆ ಕೇವಲ 1 ಚೀಲ ಮಾತ್ರ ವಿತರಿಸಲಾಗುತ್ತಿದೆ.ಆಟೋಮ್ಯಾಟಿಕ್ ಲಾಕ್: ಎಫ್‌ಐಡಿ ಮೂಲಕ ಒಮ್ಮೆ ಗೊಬ್ಬರ ಖರೀದಿ ಮಾಡುತ್ತಿದ್ದಂತೆ ಸಿಸ್ಟಂ ಲಾಕ್ ಆಗಲಿದ್ದು,ಬೇರೆಲ್ಲೂ ಹೆಚ್ಚುವರಿ ಗೊಬ್ಬರ ಕೊಳ್ಳಲು ಬರುವುದಿಲ್ಲ.
ದೊಡ್ಡ ರೈತರಿಗೆ ವಿನಾಯಿತಿ-20 ಎಕರೆಗಿಂತ ಹೆಚ್ಚು ಭೂಮಿ ಹೊಂದಿರುವ ರೈತರು ‘ಬೆಳೆ ದೃಢೀಕರಣ ಪ್ರಮಾಣ ಪತ್ರ’ ಸಲ್ಲಿಸಿ ಹೆಚ್ಚುವರಿ ಯೂರಿಯಾ ಪಡೆಯಲು ಅವಕಾಶ ಕಲ್ಪಿಸಲಾಗಿದೆ.ಒಟ್ಟಾರೆಯಾಗಿ, ಒಂದೆಡೆ ಮಳೆಯ ಕಣ್ಣಾಮುಚ್ಚಾಲೆ,ಇನ್ನೊಂದೆಡೆ ರಸಗೊಬ್ಬರ ಅಭಾವ ಹಾಗೂ ಬೆಲೆ ಏರಿಕೆಯ ಹೊಡೆತದಿಂದಾಗಿ ಮುಂಗಾರು ಹಂಗಾಮಿನ ಆರಂಭದಲ್ಲೇ ರೈತರು ಆತಂಕಕ್ಕೆ ಸಿಲುಕಿದ್ದಾರೆ. ದೇಶಕ್ಕೆ ಅನ್ನ ಕೊಡುವ ರೈತನಿಗೆ ಮಾತ್ರ ಸುಭದ್ರೆತೆ ಇಲ್ಲವೇ ಇಲ್ಲ. ಪ್ರಸ್ತುತ ರೈತರಿಗೆ ನಾನ್ ಸಾಯ ನೀನ್ ಸಾಯ ನಿಮ್ಮ ಮಕ್ಕಳ ಸಾಯ ವಾಕ್ಯ ಹೋಲುವಂತಿರುವುದು ಅತ್ಯಂತ ಖೇದಕರ.
#FreedomTV #FertilizerPriceHike #FarmersDistress #KarnatakaAgriculture #KoppalNews #PotashPrice #ComplexFertilizer #KkisanApp #FIDCompulsory #MiddleEastWarImpact #CentralGovernmentSubsidy #KannadaNews #AgricultureUpdate




