ಸಿಲಿಕಾನ್ ಸಿಟಿಯಲ್ಲಿ ಚಿನ್ನ ಹಗಲು ದರೋಡೆ- 3 ಕೋಟಿ ಚಿನ್ನ ಮಾಯ!
gold robbery in Malleswaram

ಬೆಂಗಳೂರು: ರಾಜಧಾನಿಯಲ್ಲಿ ವಾರದಿಂದ ಚಿನ್ನದ್ದೇ ಸುದ್ದಿ. ಆದರೆ ಈ ಸುದ್ದಿಯೇ ಬೇರೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿ ಚಿನ್ನಗಳ್ಳರು ಅತ್ಯಂತ ವ್ಯವಸ್ಥಿತವಾಗಿ ಜ್ಯುವೆಲ್ಲರಿ ಕಂಪನಿಯೊಂದರ ಬರೋಬ್ಬರಿ 3 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ವಂಚಿಸಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಹೋಲ್‌ಸೇಲ್ ವ್ಯಾಪಾರಿಗಳ ಧಿರಿಸಿನಲ್ಲಿ ಬಂದ ಮೂವರು ಖದೀಮರು, ನಿಕಟ ಕುತಂತ್ರ ಬಳಸಿ 1 ಕೆಜಿ 850 ಗ್ರಾಂ ಚಿನ್ನಾಭರಣಗಳೊಂದಿಗೆ ಜೂಟ್ ಆಗಿದ್ದಾರೆ.

ಮೇ 16 ರಂದು ಮಲ್ಲೇಶ್ವರಂನಲ್ಲಿ ಹಗಲು ದರೋಡೆ ನಡೆದಿದ್ದು, ಕೃತ್ಯದ ಸಂಪೂರ್ಣ ದೃಶ್ಯಗಳು ಕಚೇರಿಯ ಸಿಸಿಟಿವಿ (CCTV) ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರ ವಿರುದ್ಧ ಎಫ್‌ಐಆರ್ (FIR) ದಾಖಲಿಸಿಕೊಂಡಿದ್ದಾರೆ.
ಹೋಲ್‌ಸೇಲ್ ವ್ಯಾಪಾರಿ ಎಂದು ಹೇಳಿ ಮೋಸ!
ಪ್ರಖ್ಯಾತ ಮೆಹ್ತಾ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ಮಾರಾಟ ವ್ಯವಸ್ಥಾಪಕರು ನೀಡಿರುವ ದೂರಿನ ಅನ್ವಯ ಮಲ್ಲೇಶ್ವರಂ ಪೊಲೀಸರು ತನಿಖೆ ಕೈಗೆತ್ತಿಕೊಂಡಿದ್ದಾರೆ. ಪರೇಶ್ ಸೋನಿ ಎಂಬಾತ ತಾನು ದೊಡ್ಡ ಮಟ್ಟದ ಹೋಲ್‌ಸೇಲ್ ಚಿನ್ನದ ವ್ಯಾಪಾರಿ ಎಂದು ಕಂಪನಿಗೆ ಪರಿಚಯಿಸಿಕೊಂಡಿದ್ದ. “ನಮಗೆ 3 ಕೆಜಿ ತೂಕದ ವಿವಿಧ ವಿನ್ಯಾಸದ ಚಿನ್ನದ ಆಭರಣಗಳು ಬೇಕು” ಎಂದು ಆರ್ಡರ್ ಕೊಟ್ಟು, ಮಲ್ಲೇಶ್ವರದ ಸಂಪಿಗೆ ರಸ್ತೆಯಲ್ಲಿರುವ ತನ್ನ ಆಫೀಸ್‌ಗೆ ಮಾದರಿ ಚಿನ್ನ ತರುವಂತೆ ಸೂಚಿಸಿದ್ದ. ಇದನ್ನೇ ನಂಬಿದ ಕಂಪನಿಯ ಸಿಬ್ಬಂದಿ ಮಹೇಂದ್ರ ಕುಮಾರ್ ಜೈನ್ ಹಾಗೂ ಮತ್ತೊಬ್ಬ ನೌಕರ 3 ಕೆಜಿ ಚಿನ್ನಾಭರಣಗಳ ಬಾಕ್ಸ್ ನಂದಿಗೆ ಕಳ್ಳರ ಕಚೇರಿಗೆ ತೆರಳಿದ್ದರು. ಆಭರಣಗಳನ್ನು ಪರಿಶೀಲಿಸುವ ನಟನೆ ಮಾಡಿದ ಮುಖ್ಯ ಆರೋಪಿ ಪರೇಶ್ ಸೋನಿ, ತನಗೆ ಇಷ್ಟವಾದ ವಿನ್ಯಾಸಗಳ ಚಿನ್ನಾಭರಣಗಳನ್ನು ಆಯ್ಕೆ ಮಾಡಿಕೊಂಡಿದ್ದಾನೆ. “ಇವುಗಳ ಗುಣಮಟ್ಟವನ್ನು ಯಂತ್ರದ ಮೂಲಕ ಪರಿಶೀಲಿಸುವುದಾಗಿ ಹೇಳಿ, ಪಕ್ಕದ ಕ್ಯಾಬಿನ್‌ನಲ್ಲಿದ್ದ ತನ್ನ ಪಾರ್ಟ್‌ನರ್ ಚಂದ್ರಶೇಖರ್ ರಾವ್ ಕೈಗೆ ಕೊಟ್ಟಿದ್ದಾನೆ.
ಸುಮಾರು 1 ಕೆಜಿ 850 ಗ್ರಾಂ ತೂಕದ ಚಿನ್ನಾಭರಣಗಳನ್ನು ಪಡೆದ ಚಂದ್ರಶೇಖರ್ ರಾವ್ ಕಚೇರಿಯ ಹಿಂಬಾಗಿಲಿನಿಂದ ಕಣ್ಮರೆಯಾಗಿದ್ದಾನೆ. ಹೋದವನು ಬಹಳ ಹೊತ್ತಾದರೂ ಬರದಿದ್ದಾಗ ಜ್ಯುವೆಲ್ಲರಿ ಸಿಬ್ಬಂದಿ ಆತಂಕಗೊಂಡಿದ್ದಾರೆ. ಇದನ್ನು ಗಮನಿಸಿದ ಕಚೇರಿಯಲ್ಲಿದ್ದ ಪರೇಶ್ ಸೋನಿ ಮತ್ತು ಶ್ಯಾಮ್, “ಅವನು ಎಲ್ಲೂ ಹೋಗಲ್ಲ, ಎಲ್ಲಿದ್ದಾನೆ ಅಂತ ನಾವೇ ಹುಡುಕಿಕೊಂಡು ಕರೆದುಕೊಂಡು ಬರ್ತೀವಿ” ಎಂದು ಹೇಳಿ ಆಫೀಸ್‌ನಿಂದ ಹೊರಟವರು ಇದುವರೆಗೂ ಪತ್ತೆಯಾಗಿಲ್ಲ!
ಬಂಗಾರದ ಕಳ್ಳರಿಗಾಗಿ ಮಲ್ಲೇಶ್ವರಂ ಪೊಲೀಸ ಬಲೆ!
ಚಿನ್ನಾಭರಣಗಳೊಂದಿಗೆ ಮೂವರೂ ಆರೋಪಿಗಳು ಕಣ್ಮರೆಯಾದ ಬಳಿಕ ತಾವು ಮೋಸ ಹೋಗಿರುವುದು ಜ್ಯುವೆಲ್ಲರಿ ಸಿಬ್ಬಂದಿಗೆ ಮನವರಿಕೆಯಾಗಿದೆ. ಆರೋಪಿಗಳಾದ ಪರೇಶ್ ಸೋನಿ, ಶ್ಯಾಮ್ ಹಾಗೂ ಚಂದ್ರಶೇಖರ್ ರಾವ್ ಎಂಬುವವರು ಪೂರ್ವಯೋಜಿತವಾಗಿಯೇ ನಕಲಿ ಕಚೇರಿ ತೆರೆದು ಈ ಕೋಟ್ಯಂತರ ರೂಪಾಯಿ ದರೋಡೆ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.ಸದ್ಯ ಆರೋಪಿಗಳ ಗುರುತು ಪತ್ತೆಯಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಮಲ್ಲೇಶ್ವರಂ ಪೊಲೀಸರು ಆರೋಪಿಗಳ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿ ತೀವ್ರ ಜಾಲ ಬೀಸಿದ್ದಾರೆ.
#BengaluruRobbery #MalleshwaramCrime #GoldCheatingCase #MehtaGold #GoldRobbery #NammaBengaluru #BengaluruPolice #CrimeNews #CCTVFootage #FIR #BreakingNews #FreedomTV




