ದಾವಣಗೆರೆ ದಕ್ಷಿಣ – ಬಾಗಲಕೋಟೆ ಉಪಚುನಾವಣೆ: ಇವಿಎಂನಲ್ಲಿ ಅಭ್ಯರ್ಥಿಗಳ ಭವಿಷ್ಯ

ರಾಜ್ಯದ ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತದಾನದ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದ್ದು, ಅಭ್ಯರ್ಥಿಗಳ ರಾಜಕೀಯ ಭವಿಷ್ಯ ಈಗ ಇವಿಎಂ ಯಂತ್ರಗಳಲ್ಲಿ ಭದ್ರವಾಗಿದೆ. ಕಳೆದ ಹದಿನೈದು ದಿನಗಳಿಂದ ನಡೆದ ಅಬ್ಬರದ ಪ್ರಚಾರಕ್ಕೆ ಗುರುವಾರ ಸಂಜೆ ತೆರೆಬಿದ್ದಿದ್ದು, ಮತದಾರರು ತಮ್ಮ ತೀರ್ಪನ್ನು ದಾಖಲಿಸಿದ್ದಾರೆ. ಎರಡು ಕ್ಷೇತ್ರಗಳ ಒಟ್ಟಾರೆ ಮತದಾನದ ಪ್ರಮಾಣವನ್ನು ಗಮನಿಸಿದಾಗ, ಮತದಾರರು ಅತಿ ಹೆಚ್ಚಿನ ಆಸಕ್ತಿಯಿಂದ ಮತಗಟ್ಟೆಗೆ ಬಂದಿರುವುದು ಸ್ಪಷ್ಟವಾಗುತ್ತದೆ. ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಶೇಕಡಾ 68.55 ರಷ್ಟು ಮತದಾನವಾಗಿದ್ದರೆ, ಬಾಗಲಕೋಟೆಯಲ್ಲಿ ಶೇಕಡಾ 68.73 ರಷ್ಟು ಮತದಾನ ದಾಖಲಾಗಿದೆ. ಈ ಸರಾಸರಿ ಶೇಕಡಾ 68 ರಷ್ಟು ಮತದಾನವುಅಭ್ಯರ್ಥಿಗಳ ಎದೆಯಲ್ಲಿ ಢವ ಢವ ಹೆಚ್ಚಿಸಿದೆ.
ಚುನಾವಣಾ ಪ್ರಕ್ರಿಯೆಯು ಶಾಂತಿಯುತವಾಗಿ ಸಾಗಬೇಕಿದ್ದರೂ, ಹಣ ಮತ್ತು ಉಡುಗೊರೆಗಳ ಆಮಿಷದ ಗಂಭೀರ ಆರೋಪಗಳು ಎರಡೂ ಕ್ಷೇತ್ರಗಳಿಂದ ಕೇಳಿಬಂದಿವೆ. ಬಾಗಲಕೋಟೆಯ ರಾಜೀವ್ ಗಾಂಧಿ ಕಾಲೋನಿಯಲ್ಲಿ ಹಣ ಹಂಚುತ್ತಿದ್ದ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಾಗಿದ್ದರೆ, ವಾಂಬೆ ಕಾಲೋನಿಯ ಮಹಿಳೆಯೊಬ್ಬರು ತನಗೆ ಹಣ ನೀಡಲಾಗಿದೆ ಎಂದು ಬಹಿರಂಗವಾಗಿ ಹೇಳಿಕೆ ನೀಡಿರುವುದು ವಿವಾದಕ್ಕೆ ಕಾರಣವಾಗಿದೆ. ಹಳೇಪೇಟೆಯಲ್ಲಿ ಹಣ ಹಂಚಲು ಬಂದ ಕಾರ್ಯಕರ್ತರನ್ನು ಹಿಡಿಯಲು ಹೋದಾಗ ಅವರು ತಪ್ಪಿಸಿಕೊಂಡ ಘಟನೆಯೂ ನಡೆದಿದೆ. ಇತ್ತ ದಾವಣಗೆರೆಯಲ್ಲಿ ಕೇವಲ ಹಣ ಮಾತ್ರವಲ್ಲದೆ, ಮತದಾರರನ್ನು ಸೆಳೆಯಲು ‘ಕೋಳಿ’ ಹಂಚಲಾಗಿದೆ ಎಂಬ ವಿಭಿನ್ನ ಆರೋಪಗಳು ಕೇಳಿಬಂದಿದ್ದು, ಈ ಕುರಿತಾದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿವೆ.




