ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆ ಬಳಿ ಕಳೆದ ಡಿಸೆಂಬರ್‌ನಲ್ಲಿ ಸಂಭವಿಸಿದ್ದ ಭೀಕರ ಹೀಲಿಯಂ ಸಿಲಿಂಡರ್ ಸ್ಫೋಟದ ಬೆನ್ನಲ್ಲೇ ಮೈಸೂರು ನಗರ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದಾರೆ. ಸಾರ್ವಜನಿಕರ ಜೀವ ಮತ್ತು ಆಸ್ತಿ ರಕ್ಷಣೆ ದೃಷ್ಟಿಯಿಂದ ಮೈಸೂರು ನಗರ ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಹೀಲಿಯಂ ಅನಿಲ ಬಳಸಿ ಬಲೂನ್ ತುಂಬುವುದು, ಮಾರಾಟ ಮಾಡುವುದು ಹಾಗೂ ಸಂಗ್ರಹಿಸುವುದನ್ನು ಮುಂದಿನ ಆದೇಶದವರೆಗೆ ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮೈಸೂರು ಪೊಲೀಸ್ ಕಮಿಷನರ್ ಸೀಮಾ ಲಾಟ್ಕರ್ ಅವರು BNSS-2023 ಸೆಕ್ಷನ್ 152ರ ಅಡಿಯಲ್ಲಿ ಈ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಈ ಆದೇಶದ ಅನ್ವಯ, ಪ್ರವಾಸಿ ಕೇಂದ್ರಗಳು, ಹಬ್ಬ-ಜಾತ್ರೆಗಳು ಮತ್ತು ಜನಸಂದಣಿ ಇರುವ ಪ್ರದೇಶಗಳಲ್ಲಿ ಹೀಲಿಯಂ ಬಲೂನ್ ಮಾರಾಟಕ್ಕೆ ಅವಕಾಶವಿರುವುದಿಲ್ಲ. ಬಹುತೇಕ ಮಾರಾಟಗಾರರು ಹೀಲಿಯಂ ಹೆಸರಿನಲ್ಲಿ ಅಪಾಯಕಾರಿ ಅನಿಲಗಳನ್ನು ಬಳಸುತ್ತಿದ್ದಾರೆ ಮತ್ತು ಅದರ ಸುರಕ್ಷಿತ ಬಳಕೆಯ ಬಗ್ಗೆ ತಿಳುವಳಿಕೆ ಹೊಂದಿಲ್ಲದಿರುವುದು ಇಂತಹ ದುರ್ಘಟನೆಗಳಿಗೆ ಕಾರಣವಾಗುತ್ತಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದ್ದಾರೆ. ಆದಾಗ್ಯೂ, ವೈದ್ಯಕೀಯ ಮತ್ತು ವೈಜ್ಞಾನಿಕ ಬಳಕೆಗಳಿಗೆ ಯಾವುದೇ ನಿರ್ಬಂಧ ಇರುವುದಿಲ್ಲ. ಸಭೆ-ಸಮಾರಂಭಗಳಲ್ಲಿ ಅನಿವಾರ್ಯವಿದ್ದಲ್ಲಿ ಮಾತ್ರ ಮುಂಚಿತವಾಗಿ ಅನುಮತಿ ಪಡೆದು ಬಳಸಲು ಅವಕಾಶ ಕಲ್ಪಿಸಲಾಗಿದೆ.
ಕಳೆದ 2025ರ ಡಿಸೆಂಬರ್ 25ರಂದು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ನಡೆದ ಸ್ಫೋಟದಲ್ಲಿ ಬಲೂನ್ ಮಾರಾಟಗಾರ ಸಲೀಂ ಸೇರಿದಂತೆ ಮೂವರು ಮೃತಪಟ್ಟಿದ್ದರು. ಈ ಘಟನೆಯು ಆಕಸ್ಮಿಕವೋ ಅಥವಾ ಉದ್ದೇಶಪೂರ್ವಕವೋ ಎಂಬ ಬಗ್ಗೆ ಗಂಭೀರ ತನಿಖೆ ನಡೆದಿತ್ತು. ಪ್ರಕರಣದ ಗಂಭೀರತೆ ಅರಿತ ರಾಷ್ಟ್ರೀಯ ತನಿಖಾ ಸಂಸ್ಥೆ ಕೂಡ ಮಾಹಿತಿ ಸಂಗ್ರಹಿಸಿತ್ತು. ಅಂದು ಸಂಭವಿಸಿದ ಆಘಾತಕಾರಿ ಘಟನೆಯಿಂದ ಎಚ್ಚೆತ್ತುಕೊಂಡಿರುವ ಇಲಾಖೆ, ಇದೀಗ ಇಂತಹ ಅಪಾಯಕಾರಿ ಸಿಲಿಂಡರ್‌ಗಳ ಬಳಕೆಗೆ ಬ್ರೇಕ್ ಹಾಕಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಯಾರಾದರೂ ಅಪ್ರಮಾಣಿತ ಗ್ಯಾಸ್ ಸಿಲಿಂಡರ್ ಅಥವಾ ಅಪಾಯಕಾರಿ ಅನಿಲ ಬಳಸಿ ಬಲೂನ್ ಮಾರಾಟ ಮಾಡುವುದು ಕಂಡುಬಂದರೆ ಕೂಡಲೇ ಪೊಲೀಸರಿಗೆ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ. ಪೋಷಕರು ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಸೂಚಿಸಿರುವ ಪೊಲೀಸರು, ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದ್ದಾರೆ.


