ರಾಜಕೀಯಸುದ್ದಿ

ಸಿದ್ದು ಸೇಫ್.. ಸಚಿವರಿಗೆ ನಡುಕ! ಸಚಿವ ಸಂಪುಟಕ್ಕೆ ಹೈಕಮಾಂಡ್ ಸರ್ಜರಿ ಫಿಕ್ಸ್!

ರಾಜ್ಯ ಕಾಂಗ್ರೆಸ್ ಸರ್ಕಾರದ ಆಂತರಿಕ ವಲಯದಲ್ಲಿ ಈಗ ಸಂಪುಟ ಪುನಾರಚನೆಯ ಸಂಚಲನ ತೀವ್ರಗೊಂಡಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಇತ್ತೀಚೆಗೆ ನೀಡಿದ ಹೇಳಿಕೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಭದ್ರತೆಯನ್ನು ಒದಗಿಸಿದೆಯಾದರೂ, ಹಾಲಿ ಸಚಿವರಿಗೆ ಮಾತ್ರ ನಡುಕ ಹುಟ್ಟಿಸಿವೆ. ಮುಖ್ಯಮಂತ್ರಿ ಸ್ಥಾನದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಇಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆಯೇ, ಹೈಕಮಾಂಡ್ ದೃಷ್ಟಿ ಈಗ ಸಚಿವ ಸಂಪುಟದ ಕಡೆಗೆ ಹರಿದಿದೆ. ಶಾಸಕರು ಸಚಿವ ಸಂಪುಟ ಪುನಾರಚನೆ ಮಾಡಲೇಬೇಕೆಂದು ಪಟ್ಟು ಹಿಡಿದಿದ್ದು, ಈ ಒತ್ತಡಕ್ಕೆ ಮಣಿದು ಸುಮಾರು 10 ರಿಂದ 18 ಸಚಿವರಿಗೆ ಕೊಕ್ ನೀಡುವ ಸಾಧ್ಯತೆಗಳು ದಟ್ಟವಾಗಿವೆ. ಈ ಬೆಳವಣಿಗೆಯು ಸಚಿವ ಸ್ಥಾನ ಉಳಿಸಿಕೊಳ್ಳಲು ಸಚಿವರು ಕಸರತ್ತು ನಡೆಸುವಂತೆ ಮಾಡಿದ್ದರೆ, ಸಚಿವ ಸ್ಥಾನ ವಂಚಿತ ಹಿರಿಯ ಶಾಸಕರಲ್ಲಿ ಹೊಸ ಭರವಸೆ ಮೂಡಿಸಿದೆ.

ಸಚಿವ ಸ್ಥಾನದಿಂದ ಯಾರನ್ನು ಕೈಬಿಡಲಾಗುತ್ತದೆ ಎಂಬ ಪಟ್ಟಿ ಈಗಾಗಲೇ ಸಿದ್ಧವಾಗುತ್ತಿದೆ ಎನ್ನಲಾಗುತ್ತಿದ್ದು, ಇದು ಹಾಲಿ ಸಚಿವರ ಆತಂಕಕ್ಕೆ ಕಾರಣವಾಗಿದೆ. ಮೂಲಗಳ ಪ್ರಕಾರ ಕೆ. ವೆಂಕಟೇಶ್, ಎಂ.ಸಿ. ಸುಧಾಕರ್, ಕೆ.ಎಚ್. ಮುನಿಯಪ್ಪ, ಕೃಷ್ಣ ಬೈರೇಗೌಡ, ದಿನೇಶ್ ಗುಂಡೂರಾವ್ ಹಾಗೂ ಮಧು ಬಂಗಾರಪ್ಪ ಅವರ ಸ್ಥಾನಗಳಿಗೆ ಕುತ್ತು ಬರುವ ಲಕ್ಷಣಗಳಿವೆ. ಇವರಷ್ಟೇ ಅಲ್ಲದೆ, ಸಂತೋಷ್ ಲಾಡ್, ಬೋಸರಾಜು, ರಹೀಂ ಖಾನ್, ಎಸ್.ಎಸ್. ಮಲ್ಲಿಕಾರ್ಜುನ್, ಶರಣು ಪ್ರಕಾಶ್ ಪಾಟೀಲ್, ಲಕ್ಷ್ಮಿ ಹೆಬ್ಬಾಳ್ಕರ್ ಮತ್ತು ಹೆಚ್.ಸಿ. ಮಹದೇವಪ್ಪ ಅವರಿಗೆ ಸಚಿವ ಸಂಪುಟದಿಂದ ಬಿಡುಗಡೆ ನೀಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿಬರುತ್ತಿವೆ. ಆಡಳಿತದಲ್ಲಿ ಹೊಸ ಚೈತನ್ಯ ತುಂಬಲು ಮತ್ತು ಅಸಮಾಧಾನಿತ ಹಿರಿಯ ನಾಯಕರನ್ನು ಸಮಾಧಾನಪಡಿಸಲು ಈ ಆಮೂಲಾಗ್ರ ಬದಲಾವಣೆಗೆ ಹೈಕಮಾಂಡ್ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

ಇನ್ನೊಂದೆಡೆ, ತೆರವಾಗಲಿರುವ ಈ ಸ್ಥಾನಗಳನ್ನು ತುಂಬಲು ಆಕಾಂಕ್ಷಿಗಳ ದಂಡೇ ಕಾದು ಕುಳಿತಿದೆ. ಹಿರಿಯ ನಾಯಕರಾದ ಕೆ.ಎನ್. ರಾಜಣ್ಣ, ಜಯಚಂದ್ರ, ಬಸವರಾಜ್ ರಾಯರೆಡ್ಡಿ ಹಾಗೂ ಲಕ್ಷ್ಮಣ ಸವದಿ ಅವರು ಸಚಿವ ಸ್ಥಾನದ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದಾರೆ. ಯುವ ನಾಯಕ ಪ್ರದೀಪ್ ಈಶ್ವರ್, ಸ್ಪೀಕರ್ ಸ್ಥಾನದಲ್ಲಿರುವ ಯು.ಟಿ. ಖಾದರ್, ಅಶೋಕ್ ಪಟ್ಟಣ್ ಸೇರಿದಂತೆ ಡಿ.ಜಿ. ಶಾಂತನಗೌಡ, ಪ್ರಸಾದ್ ಅಬ್ಬಯ್ಯ ಮತ್ತು ಪ್ರಿಯಕೃಷ್ಣ ಅವರ ಹೆಸರುಗಳು ಕೂಡ ಸಚಿವ ಸ್ಥಾನದ ಪಟ್ಟಿಯಲ್ಲಿ ಪ್ರಮುಖವಾಗಿ ಕೇಳಿಬರುತ್ತಿವೆ. ಒಟ್ಟಾರೆಯಾಗಿ, ರಾಜ್ಯ ರಾಜಕಾರಣದಲ್ಲಿ ಮುಂಬರುವ ದಿನಗಳಲ್ಲಿ ಸಂಪುಟ ಸರ್ಜರಿಯು ಭಾರಿ ಬದಲಾವಣೆಗಳಿಗೆ ಸಾಕ್ಷಿಯಾಗಲಿದ್ದು, ಯಾರಿಗೆ ಅದೃಷ್ಟ ಒಲಿಯಲಿದೆ ಮತ್ತು ಯಾರಿಗೆ ಕೊಕ್ ಬೀಳಲಿದೆ ಎಂಬುದು ಸದ್ಯದ ಕುತೂಹಲದ ವಿಷಯವಾಗಿದೆ.

Comments (0)

Your email address will not be published. Required fields are marked *

Back to top button