Sunday, February 22, 2026
31 C
Bengaluru
Google search engine
LIVE
ಮನೆಸಿನಿಮಾಭೀಮಾ ತೀರದ ಹಂತಕರು ಸಿನಿಮಾ- ರವಿಬೆಳಗೆರೆ ಕಥೆಗೆ ಹೊಸ ಜೀವ

ಭೀಮಾ ತೀರದ ಹಂತಕರು ಸಿನಿಮಾ- ರವಿಬೆಳಗೆರೆ ಕಥೆಗೆ ಹೊಸ ಜೀವ

ಕನ್ನಡ ಸಾಹಿತ್ಯ ಲೋಕದ ದಿವಂಗತ ರವಿಬೆಳಗೆರೆ ಭೀಮಾ ತೀರದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದ ಕಾದಂಬರಿ ಈಗ ಚಿತ್ರರೂಪ ಪಡೆಯುತ್ತಿದೆ. ಸುಮ ಜಿ. ಮತ್ತು ಶ್ರುತಿ ಅನಿಲ್ ಕುಮಾರ್ ಈ ಚಿತ್ರವನ್ನು ಅದ್ಧೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ಈ ಸಿನಿಮಾ ಕೇವಲ ಕಲ್ಪನೆಯಲ್ಲದೆ, ಉತ್ತರ ಕರ್ನಾಟಕದ ಭೀಮಾ ನದಿ ತೀರದಲ್ಲಿ ನಡೆದ ರಕ್ತಸಿಕ್ತ ಇತಿಹಾಸ ಮತ್ತು ಹಂತಕರ ನೈಜ ಬದುಕಿನ ಚಿತ್ರಣವನ್ನು ತೆರೆಯ ಮೇಲೆ ತರುವ ಪ್ರಾಮಾಣಿಕ ಪ್ರಯತ್ನವಾಗಿದೆ.

ಈ ಮಹತ್ವಾಕಾಂಕ್ಷಿ ಚಿತ್ರಕ್ಕೆ ‘ಕಬಡ್ಡಿ’ ಖ್ಯಾತಿಯ ನಿರ್ದೇಶಕ ನರೇಂದ್ರ ಬಾಬು ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಹಿಂದೆ ವಿಭಿನ್ನ ಕಥಾಹಂದರದ ಚಿತ್ರಗಳನ್ನು ನೀಡಿರುವ ಇವರು, ಈ ಬಾರಿ ಭೀಮಾ ತೀರದ ‘ರಿಯಲ್ ಸ್ಟೋರಿ’ಯನ್ನು ಸಿನಿಮಾ ಪ್ರೇಕ್ಷಕರಿಗೆ ನೀಡಲು ಸಜ್ಜಾಗಿದ್ದಾರೆ. ಚಿತ್ರದಲ್ಲಿ ಬಲಿಷ್ಠ ತಾರಾಗಣವಿದ್ದು, ಪ್ರಮುಖ ಪಾತ್ರಗಳಲ್ಲಿ ರವಿಬೆಳಗೆರೆ ಪುತ್ರಿ ಭಾವನಾ ಬೆಳಗೆರೆ, ಲಿಖಿತ್ ಜಿ., ಶರತ್ ಲೋಹಿತಾಶ್ವ, ಖ್ಯಾತ ನಟ ಸೋನು ಸೂದ್ ಹಾಗೂ ಸತ್ಯಜಿತ್ ಶಿಂದೆ ಕಾಣಿಸಿಕೊಳ್ಳುತ್ತಿದ್ದಾರೆ. ನೈಜ ಘಟನೆಗಳ ಆಧಾರಿತ ಈ ಚಿತ್ರದಲ್ಲಿ ಪ್ರತಿಯೊಬ್ಬ ಕಲಾವಿದರಿಗೂ ಪವರ್‌ಫುಲ್ ಪಾತ್ರಗಳನ್ನು ನೀಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.ಸಿನಿಮಾದ ಗುಣಮಟ್ಟಕ್ಕೆ ಪೂರಕವಾಗಿ ಸ್ಯಾಂಡಲ್‌ವುಡ್‌ನ ಪ್ರಮುಖ ತಂತ್ರಜ್ಞರು ಕೈಜೋಡಿಸಿದ್ದಾರೆ. ‘ಮಫ್ತಿ’ ಮತ್ತು ‘ಡೆವಿಲ್’ ಅಂತಹ ಹಿಟ್ ಚಿತ್ರಗಳ ಖ್ಯಾತಿಯ ಹರೀಶ್ ಕೊಮ್ಮೆ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ದೃಶ್ಯಗಳನ್ನು ಅದ್ಭುತವಾಗಿ ಸೆರೆಹಿಡಿಯಲು ಅನುಭವಿ ಛಾಯಾಗ್ರಾಹಕ ಚಂದ್ರಶೇಖರ್ ಅವರು ತಂಡದಲ್ಲಿದ್ದಾರೆ.

ಭೀಮಾ ತೀರದ ನೈಜ ಘಟನೆಗಳನ್ನು ಆಧರಿಸಿ ಬರೆದಿದ್ದ ಅತ್ಯಂತ ಜನಪ್ರಿಯ ಕಾದಂಬರಿಯನ್ನು ಬೆಳ್ಳಿಪರದೆಗೆ ತರಲು ಚಿತ್ರತಂಡಕ್ಕೆ ಅಧಿಕೃತವಾಗಿ ಹಕ್ಕುಗಳನ್ನು ಭಾವನಾ ಬೆಳಗೆರೆ ನೀಡಿದ್ದಾರೆ. ಈ ಸಿನಿಮಾದ ಮತ್ತೊಂದು ವಿಶೇಷವೆಂದರೆ, ತಮ್ಮ ತಂದೆಯವರಾದ ರವಿಬೆಳಗೆರೆ ಅವರ ಪಾತ್ರವನ್ನೇ ಮಗಳು ಪೋಷಿಸುತ್ತಿದ್ದಾರೆ. ತಂದೆಯ ವ್ಯಕ್ತಿತ್ವವನ್ನು ತೆರೆಯ ಮೇಲೆ ಅಷ್ಟೇ ಪ್ರಭಾವಶಾಲಿಯಾಗಿ ಮಗಳೇ ನಿರ್ವಹಿಸುತ್ತಿರುವುದು ಚಿತ್ರದ ಮೇಲಿನ ಕುತೂಹಲವನ್ನು ಹೆಚ್ಚಿಸಿದೆ. ಕಾದಂಬರಿಯಲ್ಲಿ ತಂದೆಯವರು ಘಟನೆಗಳನ್ನು ಹೇಗೆ ಬರೆದಿದ್ದಾರೋ, ಅದೇ ರೀತಿ ಚಿತ್ರದಲ್ಲಿ ಮೂಡಿಬರಬೇಕು. ಕಥೆಯಲ್ಲಿ ಯಾವುದೇ ಅನಗತ್ಯ ಬದಲಾವಣೆಗಳನ್ನು ಮಾಡಬಾರದು” ಎಂಬುದು ಅವರ ಅಭಿಪ್ರಾಯವಾಗಿದೆ.ಭೀಮಾ ತೀರದ ಭೂಗತ ಲೋಕದ ಸಂಘರ್ಷಗಳು, ಚಂದಪ್ಪ ಹರಿಜನ ಅಂತಹ ಪ್ರಬಲ ಪಾತ್ರಗಳು ಮತ್ತು ಅಲ್ಲಿನ ರಕ್ತಸಿಕ್ತ ಇತಿಹಾಸವನ್ನು ಪುಸ್ತಕದಲ್ಲಿರುವಂತೆಯೇ ನೈಜವಾಗಿ ತೆರೆಗೆ ತರುವ ಪ್ರಯತ್ನಕ್ಕೆ ಅವರು ಬೆಂಬಲ ಸೂಚಿಸಿದ್ದಾರೆ.

ಕಥೆಯ ನೈಜತೆಯನ್ನು ಕಾಪಾಡಿಕೊಳ್ಳಲು ಉತ್ತರ ಕರ್ನಾಟಕದ ವಿಜಯಪುರ, ಕಲಬುರಗಿ ಮತ್ತು ಭೀಮಾ ನದಿ ತೀರದ ಆಸುಪಾಸಿನ ಗ್ರಾಮಗಳಲ್ಲಿಯೇ ಹೆಚ್ಚಿನ ಚಿತ್ರೀಕರಣ ನಡೆಸಲು ಚಿತ್ರತಂಡ ನಿರ್ಧರಿಸಿದೆ. ಅಲ್ಲಿನ ಪರಿಸರ, ಮಣ್ಣಿನ ಸೊಗಡು ಮತ್ತು ಭೌಗೋಳಿಕ ಹಿನ್ನೆಲೆಯನ್ನು ದೃಶ್ಯಗಳಲ್ಲಿ ಸೆರೆಹಿಡಿಯುವುದು ತಂಡದ ಗುರಿಯಾಗಿದೆ.ಈಗಾಗಲೇ ಚಿತ್ರೀಕರಣದ ಪೂರ್ವ ತಯಾರಿಗಳು ಪೂರ್ಣಗೊಂಡಿದ್ದು, ಹಂತ ಹಂತವಾಗಿ ಪ್ರಮುಖ ಭಾಗಗಳನ್ನು ಚಿತ್ರೀಕರಿಸಲು ಪ್ಲಾನ್ ಮಾಡಲಾಗಿದೆ. ಲಿಖಿತ್ ಜಿ. ಮತ್ತು ಶರತ್ ಲೋಹಿತಾಶ್ವ ಅವರ ಕಾಂಬಿನೇಷನ್ ದೃಶ್ಯಗಳು ಸಿನಿಮಾಕ್ಕೆ ವೇಗ ನೀಡಲಿವೆ.ಶೀರ್ಷಿಕೆ ಬಿಡುಗಡೆಯ ಬೆನ್ನಲ್ಲೇ ಸಿನಿಮಾದ ಮೇಲಿನ ಕುತೂಹಲ ದುಪ್ಪಟ್ಟಾಗಿದ್ದು, ಉತ್ತರ ಕರ್ನಾಟಕದ ಸೊಗಡು ಮತ್ತು ಅಲ್ಲಿನ ಕಥಾಹಂದರ ಪ್ರೇಕ್ಷಕರನ್ನು ಸೆಳೆಯುವುದು ಖಚಿತವಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments