ಸಿನಿಮಾ

ನಟ ದಿಲೀಪ್ ರಾಜ್ ಹೃದಯಾಘಾತದಿಂದ ನಿಧನ

Dilipraj died by heart attack

ಬೆಂಗಳೂರು: ಸ್ಯಾಂಡಲ್‌ವುಡ್ ಮತ್ತು ಕಿರುತೆರೆಯ ಜನಪ್ರಿಯ ನಟ,ನಿರ್ಮಾಪಕ ದಿಲೀಪ್ ರಾಜ್ (48) ಅವರು ಇಂದು ಮುಂಜಾನೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರ ಅಕಾಲಿಕ ಮರಣದಿಂದ ಕನ್ನಡ ಚಿತ್ರರಂಗ ಮತ್ತು ಕಿರುತೆರೆ ಲೋಕ ಅಚಾನಕ್ ಶಾಕ್ ಗೆ ಒಳಗಾಗಿದೆ.

ಮನೆಯಲ್ಲೇ ಹೃದಯಸ್ತಂಭನ!
ಮಾಹಿತಿಗಳ ಪ್ರಕಾರ,ಇಂದು ಬೆಳಿಗ್ಗೆ ದಿಲೀಪ್ ರಾಜ್ ಅವರಿಗೆ ಮನೆಯಲ್ಲಿದ್ದಾಗ ತೀವ್ರ ಹೃದಯಾಘಾತ ಸಂಭವಿಸಿದೆ.ಕೂಡಲೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರು ಎಳೆದಿದ್ದಾರೆ. ಚಿತ್ರರಂಗದ ಸಕ್ರಿಯ ವ್ಯಕ್ತಿಯಾಗಿದ್ದ ದಿಲೀಪ್ ಅವರ ಸಾವು ಅಭಿಮಾನಿಗಳಿಗೆ ಮತ್ತು ಆಪ್ತರಿಗೆ ಬರಸಿಡಿಲು ಬಡಿದಂತಾಗಿದೆ.

ದಿಲೀಪ್ ಬಣ್ಣದ ಲೋಕದ ಪಯಣ
ಪ್ರಾರಂಭದ ದಿನಗಳಲ್ಲಿ 2005ರಲ್ಲಿ ‘ಬಾಯ್ ಫ್ರೆಂಡ್’ ಚಿತ್ರದ ಮೂಲಕ ನಾಯಕ ನಟನಾಗಿ ಚಿತ್ರರಂಗ ಪ್ರವೇಶಿಸಿದ ದಿಲೀಪ್ ರಾಜ್, ಆರಂಭದಿಂದಲೇ ತಮ್ಮ ನಟನಾ ಕೌಶಲ್ಯದಿಂದ ಗುರುತಿಸಿಕೊಂಡಿದ್ದರು. ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ‘ಮಿಲನ’ ಚಿತ್ರದಲ್ಲಿನ ಇವರ ಪಾತ್ರ ದೊಡ್ಡ ಮಟ್ಟದ ಜನಪ್ರಿಯತೆ ತಂದುಕೊಟ್ಟಿತು. ನಂತರ ‘ಯು ಟರ್ನ್’, ‘ಆರ್ಕೆಸ್ಟ್ರಾ ಮೈಸೂರು’ ಸೇರಿದಂತೆ ಹಲವು ವಿಭಿನ್ನ ಸಿನಿಮಾಗಳಲ್ಲಿ ತಮ್ಮ ಛಾಪನ್ನು ಮೂಡಿಸಿದ್ದರು.

ಕಿರುತೆರೆಯ ಕಿಂಗ್!
ಸಿನಿಮಾ ಮಾತ್ರವಲ್ಲದೆ ಕಿರುತೆರೆಯಲ್ಲೂ ದೊಡ್ಡ ಹೆಸರು ಮಾಡಿದ್ದ ಇವರು,’ಹಿಟ್ಲರ್ ಕಲ್ಯಾಣ’ ಧಾರಾವಾಹಿಯ ನಾಯಕನಾಗಿ ಮನೆಮಾತಾಗಿದ್ದರು. ಅಲ್ಲದೆ ‘ಪಾರು’, ‘ನಾ ನಿನ್ನ ಬಿಡಲಾರೆ’ ಅಂತಹ ಸೂಪರ್ ಹಿಟ್ ಧಾರಾವಾಹಿಗಳನ್ನು ನಿರ್ಮಿಸುವ ಮೂಲಕ ಯಶಸ್ವಿ ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದರು. ನಟನೆಯಷ್ಟೇ ಅಲ್ಲದೆ, ಡಬ್ಬಿಂಗ್ ಕಲಾವಿದನಾಗಿಯೂ ದಿಲೀಪ್ ರಾಜ್ ಚಿತ್ರರಂಗದಲ್ಲಿ ತಮ್ಮ ಬಹುಮುಖ ಪ್ರತಿಭೆಯನ್ನು ತೋರಿದ್ದರು.

ಗಣ್ಯರ ಸಂತಾಪ
ದಿಲೀಪ್ ರಾಜ್ ನಿಧನಕ್ಕೆ ಹಿರಿಯ ನಟ ದೊಡ್ಡಣ್ಣ ಸೇರಿದಂತೆ ಅನೇಕ ಕಲಾವಿದರು ಕಂಬನಿ ಮಿಡಿದಿದ್ದಾರೆ. “ದಿಲೀಪ್ ರಾಜ್ ನನಗೆ ಮಗನ ಸಮಾನವಾಗಿದ್ದ.ಅವರ ತಂದೆ ಮತ್ತು ನಮ್ಮ ಕುಟುಂಬದ ನಡುವೆ ದಶಕಗಳ ಸಂಬಂಧವಿದೆ. ಈ ಸಣ್ಣ ವಯಸ್ಸಿಗೆ ಅವರು ನಮ್ಮನ್ನು ಅಗಲಿರುವುದು ಜೀರ್ಣಿಸಿಕೊಳ್ಳಲು ಅಸಾಧ್ಯ,” ಎಂದು ದೊಡ್ಡಣ್ಣ ಭಾವುಕರಾಗಿ ನುಡಿದಿದ್ದಾರೆ.

ಸದ್ಯ ಅವರ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಸಕಲ ವ್ಯವಸ್ಥೆಗಳನ್ನು ಮಾಡಲಾಗುತ್ತಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶ್ರದ್ಧಾಂಜಲಿ ಅರ್ಪಿಸುತ್ತಿದ್ದಾರೆ.ಒಬ್ಬ ಶಿಸ್ತಿನ ನಟ,ಕನಸುಗಾರ ನಿರ್ಮಾಪಕ ಮತ್ತು ಸಹೃದಯಿ ವ್ಯಕ್ತಿಯನ್ನು ಕನ್ನಡ ಚಿತ್ರರಂಗ ಇಂದು ಕಳೆದುಕೊಂಡಿದೆ.

#DileepRaj #RIPDileepRaj #Sandalwood #KannadaActor #HitlerKalyana #Milana #KannadaFilmIndustry #HeartAttack #BreakingNews #FreedomTV #DileepRajDeath #KannadaSerial

Comments (0)

Your email address will not be published. Required fields are marked *

Back to top button