
‘ರತ್ನನ್ ಪ್ರಪಂಚ’ ಸಿನಿಮಾದ ಮೂಲಕ ಕನ್ನಡಿಗರ ಮನಗೆದ್ದ ನಟಿ ರೆಬಾ ಮೋನಿಕಾ ಜಾನ್ ಇದೀಗ ತಮ್ಮ ವೈಯಕ್ತಿಕ ಜೀವನದ ಅತ್ಯಂತ ಸಂತಸದ ಸುದ್ಧಿಯೊಂದನ್ನು ಅಭಿಮಾನಿಗಳೊಂದಿಗೆ ಹಂಚಿಕೊಂಡಿದ್ದಾರೆ. ವಿವಾಹವಾದ ಎರಡು ವರ್ಷಗಳ ನಂತರ ರೆಬಾ ಅವರು ಶೀಘ್ರದಲ್ಲೇ ತಾಯಿಯಾಗುತ್ತಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಪತಿ ಜೋಮನ್ ಜೋಸೆಫ್ ಅವರೊಂದಿಗೆ ಸುಂದರವಾದ ಬೇಬಿ ಬಂಪ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಈ ಸಿಹಿ ಸುದ್ಧಿಯನ್ನು ಅಭಿಮಾನಿಗಳಿಗೆ ಮುಟ್ಟಿಸಿದ್ದಾರೆ. ಬೀಚ್ ಬದಿಯಲ್ಲಿ ನಡೆಸಲಾದ ಈ ಫೋಟೋ ಶೂಟ್ನಲ್ಲಿ ರೆಬಾ ಅವರು ತಾಯ್ತನದ ಸಂಭ್ರಮದಲ್ಲಿದ್ದು, ಹೊಸ ಅತಿಥಿಯ ಆಗಮನದ ನಿರೀಕ್ಷೆಯಲ್ಲಿರುವುದಾಗಿ ತಿಳಿಸಿದ್ದಾರೆ.

ಮಲಯಾಳಂನ ‘ಜಾಕೋಬಿಂತೆ ಸ್ವರ್ಗರಾಜ್ಯಂ’ ಚಿತ್ರದ ಮೂಲಕ ಸಿನಿಪಯಣ ಆರಂಭಿಸಿದ ರೆಬಾ ಮೋನಿಕಾ ಜಾನ್, ದಳಪತಿ ವಿಜಯ್ ಅಭಿನಯದ ‘ಬಿಗಿಲ್’ ಚಿತ್ರದಲ್ಲಿ ಆಸಿಡ್ ದಾಳಿಯ ಸಂತ್ರಸ್ತೆಯಾಗಿ ಅಮೋಘ ಅಭಿನಯ ನೀಡಿ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದರು. ಕನ್ನಡದಲ್ಲಿ ಡಾಲಿ ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಹಾಗೂ ತೆಲುಗಿನ ‘ಸಾಮಜವರಗಮನ’ ಚಿತ್ರಗಳು ಅವರಿಗೆ ದೊಡ್ಡ ಮಟ್ಟದ ಜನಪ್ರಿಯತೆಯನ್ನು ತಂದುಕೊಟ್ಟವು. 2022 ರಲ್ಲಿ ಅವರು ತಮ್ಮ ದೀರ್ಘಕಾಲದ ಗೆಳೆಯ, ವೃತ್ತಿಯಲ್ಲಿ ವ್ಯವಹಾರ ಸಲಹೆಗಾರರಾಗಿರುವ ಜೋಮನ್ ಜೋಸೆಫ್ ಅವರನ್ನು ಮದುವೆಯಾಗಿದ್ದರು.

ರೆಬಾ ಅವರು ತಮ್ಮ ಗರ್ಭಾವಸ್ಥೆಯ ವಿಚಾರವನ್ನು ಹಂಚಿಕೊಳ್ಳುತ್ತಿದ್ದಂತೆಯೇ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳ ಮಳೆ ಸುರಿಸುತ್ತಿದ್ದಾರೆ. ಸದ್ಯ ಹಂಚಿಕೊಂಡಿರುವ ಫೋಟೋಗಳು ಅಂತರ್ಜಾಲದಲ್ಲಿ ಸಖತ್ ವೈರಲ್ ಆಗುತ್ತಿದ್ದು, ಹೊಸ ಅತಿಥಿಯ ಬರುವಿಕೆಗೆ ದಂಪತಿಗಳು ಕಾತರದಿಂದ ಕಾಯುತ್ತಿದ್ದಾರೆ. ವೃತ್ತಿಜೀವನದಲ್ಲಿ ಯಶಸ್ಸಿನ ಉತ್ತುಂಗದಲ್ಲಿರುವಾಗಲೇ ವೈಯಕ್ತಿಕ ಜೀವನದ ಈ ಸುಂದರ ಘಟ್ಟವನ್ನು ಅವರು ಸಂಭ್ರಮಿಸುತ್ತಿರುವುದು ಅವರ ಅಭಿಮಾನಿಗಳಿಗೆ ಹೆಚ್ಚಿನ ಸಂತಸ ತಂದಿದೆ.




