
ಟಾಲಿವುಡ್ನ ಜನಪ್ರಿಯ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಸದ್ದಿಲ್ಲದೆ ವೈವಾಹಿಕ ಜೀವನಕ್ಕೆ ಕಾಲಿಡುವ ಮೂಲಕ ತಮ್ಮ ಅಭಿಮಾನಿಗಳಿಗೆ ಸರ್ಪ್ರೈಸ್ ನೀಡಿದ್ದಾರೆ. ಬುಧವಾರ, ಏಪ್ರಿಲ್ 29ರಂದು ಪವಿತ್ರ ಕ್ಷೇತ್ರ ತಿರುಮಲದಲ್ಲಿ ಅತ್ಯಂತ ಆಪ್ತರ ಸಮ್ಮುಖದಲ್ಲಿ ಕಾವ್ಯ ರೆಡ್ಡಿ ಅವರೊಂದಿಗೆ ಸಾಯಿ ಶ್ರೀನಿವಾಸ್ ವಿವಾಹ ಮಹೋತ್ಸವ ನೆರವೇರಿದೆ. ಕುಟುಂಬ ಸದಸ್ಯರು, ಆಪ್ತ ಸ್ನೇಹಿತರು ಹಾಗೂ ಚಿತ್ರರಂಗ ಮತ್ತು ರಾಜಕೀಯ ಕ್ಷೇತ್ರದ ಕೆಲವೇ ಗಣ್ಯರು ಈ ಸುಂದರ ಕ್ಷಣಕ್ಕೆ ಸಾಕ್ಷಿಯಾಗಿದ್ದು, ನವಜೋಡಿಯ ವಿವಾಹದ ಫೋಟೋ ಹಾಗೂ ವಿಡಿಯೋಗಳು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿವೆ.

ಬೆಲ್ಲಂಕೊಂಡ ಶ್ರೀನಿವಾಸ್ ಅವರ ಕೈಹಿಡಿದ ಕಾವ್ಯ ರೆಡ್ಡಿ ಅವರು ಚಿತ್ರರಂಗಕ್ಕೆ ಸಂಬಂಧಿಸಿದವರಲ್ಲ ಎಂಬುದು ವಿಶೇಷ. ಇವರು ಹೈದರಾಬಾದ್ನ ಪ್ರಮುಖ ವಕೀಲರೊಬ್ಬರ ಪುತ್ರಿಯಾಗಿದ್ದು, ಕಳೆದ ಕೆಲವು ಸಮಯದಿಂದ ಸಾಯಿ ಶ್ರೀನಿವಾಸ್ ಹಾಗೂ ಕಾವ್ಯ ಪ್ರೀತಿಯಲ್ಲಿದ್ದರು ಎನ್ನಲಾಗಿದೆ. ಆರಂಭದಲ್ಲಿ ಪ್ರೇಮ ಪಕ್ಷಿಗಳಾಗಿದ್ದ ಈ ಜೋಡಿ, ನಂತರ ಉಭಯ ಕುಟುಂಬದ ಹಿರಿಯರ ಸಮ್ಮತಿ ಪಡೆದು ಮದುವೆಯಾಗುವ ಮೂಲಕ ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಿದ್ದಾರೆ. ಇನ್ನು ಈ ಜೋಡಿಯ ವಯಸ್ಸಿನ ಅಂತರದ ಬಗ್ಗೆಯೂ ನೆಟ್ಟಿಗರಲ್ಲಿ ಕುತೂಹಲ ಮೂಡಿದ್ದು, 33 ವರ್ಷದ ಶ್ರೀನಿವಾಸ್ ಅವರಿಗಿಂತ ಕಾವ್ಯ ಅವರು ಸುಮಾರು 4 ರಿಂದ 5 ವರ್ಷ ಚಿಕ್ಕವರಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಮದುವೆಯ ಸಂಭ್ರಮದ ಬೆನ್ನಲ್ಲೇ ಈಗ ಅದ್ಧೂರಿ ಆರತಕ್ಷತೆಗೆ ಸಿದ್ಧತೆಗಳು ನಡೆದಿವೆ. ಇಂದು, ಅಂದರೆ ಮೇ 1ರಂದು ಹೈದರಾಬಾದ್ನಲ್ಲಿ ಚಿತ್ರರಂಗದ ತಾರೆಯರಿಗಾಗಿ ಹಾಗೂ ಗಣ್ಯರಿಗಾಗಿ ಭರ್ಜರಿ ರಿಸೆಪ್ಷನ್ ಏರ್ಪಡಿಸಲಾಗಿದೆ. ತಿರುಮಲದಲ್ಲಿ ಸರಳವಾಗಿ ನಡೆದ ಮದುವೆಯನ್ನು ನೋಡಿದ್ದ ಅಭಿಮಾನಿಗಳು, ಹೈದರಾಬಾದ್ನಲ್ಲಿ ನಡೆಯಲಿರುವ ಈ ಸಂಭ್ರಮದಲ್ಲಿ ಟಾಲಿವುಡ್ನ ದೊಡ್ಡ ತಾರಾಬಳಗವೇ ಭಾಗವಹಿಸುವ ನಿರೀಕ್ಷೆಯಲ್ಲಿದ್ದಾರೆ. ನೆಟ್ಟಿಗರು ಈ ಹೊಸ ಜೋಡಿಗೆ ಶುಭಾಶಯಗಳ ಮಳೆ ಸುರಿಸುತ್ತಿದ್ದು, ಬೆಲ್ಲಂಕೊಂಡ ಶ್ರೀನಿವಾಸ್ ಅವರ ದಾಂಪತ್ಯ ಜೀವನ ಸುಖಮಯವಾಗಿರಲಿ ಎಂದು ಹಾರೈಸುತ್ತಿದ್ದಾರೆ.




