ರಾಯಚೂರು: ಛತ್ರಪತಿ ಶಿವಾಜಿ ಮಹಾರಾಜ್ ಜಯಂತಿಯ ಅಂಗವಾಗಿ ಇಂದು ಅದ್ಧೂರಿ ಮೆರವಣಿಗೆ ಆಯೋಜಿಸಲಾಗಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದೆ. ಇತ್ತೀಚೆಗೆ ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ನಡೆದ ಘಟನೆಗಳನ್ನು ಗಮನದಲ್ಲಿಟ್ಟುಕೊಂಡು, ಮುನ್ನೆಚ್ಚರಿಕಾ ಕ್ರಮವಾಗಿ ರಾಯಚೂರು ಜಿಲ್ಲೆಯಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ನಗರದ ಗಾಂಧಿ ವೃತ್ತದಿಂದ ಆರಂಭವಾಗಲಿರುವ ಈ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಸಾಗಿ ಅಂಬಾದೇವಿ ದೇವಸ್ಥಾನದವರೆಗೆ ತಲುಪಲಿದೆ.ಬೆಳಿಗ್ಗೆ 10 ಗಂಟೆಯಿಂದ ಸಂಜೆ 4 ಗಂಟೆಯೊಳಗೆ ಮೆರವಣಿಗೆಯನ್ನು ಪೂರ್ಣಗೊಳಿಸಲು ಪೊಲೀಸರು ಅನುಮತಿ ನೀಡಿದ್ದು, ಮಧ್ಯಾಹ್ನ 1 ಗಂಟೆಯ ಸುಮಾರಿಗೆ ಮೆರವಣಿಗೆ ಆರಂಭವಾಗುವ ಸಾಧ್ಯತೆಯಿದೆ. ಈ ಬಾರಿಯ ಮೆರವಣಿಗೆಯಲ್ಲಿ ಕೇವಲ ಶಿವಾಜಿ ಮಹಾರಾಜರ ಪುತ್ಥಳಿ ಮಾತ್ರವಲ್ಲದೆ, ಶಿವಪಾರ್ವತಿ, ಶ್ರೀರಾಮ, ಆಂಜನೇಯ ಮತ್ತು ಗಣೇಶನ ವಿಗ್ರಹಗಳು ಸಹ ಆಕರ್ಷಣೆಯ ಕೇಂದ್ರಬಿಂದುವಾಗಿರಲಿವೆ. ಸುಮಾರು 400 ರಿಂದ 500 ಜನರು ಈ ಸಂಭ್ರಮಾಚರಣೆಯಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಸಾರ್ವಜನಿಕ ಶಾಂತಿ ಮತ್ತು ಕೋಮು ಸೌಹಾರ್ದತೆಗೆ ಧಕ್ಕೆ ಉಂಟಾಗದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಷು ಗಿರಿ ಅವರ ನೇತೃತ್ವದಲ್ಲಿ ಮೆರವಣಿಗೆಯುದ್ದಕ್ಕೂ ಭಾರಿ ಭದ್ರತೆ ನಿಯೋಜಿಸಲಾಗಿದೆ. ಭದ್ರತಾ ಕಾರ್ಯಕ್ಕಾಗಿ ಇಬ್ಬರು ಡಿವೈಎಸ್ಪಿ, 5 ಸಿಪಿಐ, 3 ಪಿಎಸ್‌ಐ ಸೇರಿದಂತೆ 120 ಪೊಲೀಸ್ ಪೇದೆಗಳನ್ನು ನಿಯೋಜಿಸಲಾಗಿದೆ. ಇವರೊಂದಿಗೆ ಒಂದು ಕೆಎಸ್‌ಆರ್‌ಪಿ ತುಕಡಿ ಮತ್ತು 4 ಹೋಮ್ ಗಾರ್ಡ್ ತುಕಡಿಗಳು ಸಹ ಹದ್ದಿನ ಕಣ್ಣಿಟ್ಟಿರಲಿವೆ. ಸಾರ್ವಜನಿಕರು ಶಾಂತಿಯುತವಾಗಿ ಜಯಂತಿ ಆಚರಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.


