Sunday, February 22, 2026
31 C
Bengaluru
Google search engine
LIVE
ಮನೆದೇಶ/ವಿದೇಶದೇಶದ ಮೇಲೆ ದಾಳಿಗೆ ಸಂಚು: ತಮಿಳುನಾಡು ಮತ್ತು ಬಂಗಾಳದಲ್ಲಿ 8 ಶಂಕಿತ ಉಗ್ರರ ಬಂಧನ

ದೇಶದ ಮೇಲೆ ದಾಳಿಗೆ ಸಂಚು: ತಮಿಳುನಾಡು ಮತ್ತು ಬಂಗಾಳದಲ್ಲಿ 8 ಶಂಕಿತ ಉಗ್ರರ ಬಂಧನ

ದೆಹಲಿ : ಭಾರತದಲ್ಲಿ ದಾಳಿ ನಡೆಸಲು ಸಂಚು ರೂಪಿಸಿದ್ದ ಪಾಕಿಸ್ತಾನದ ಐಎಸ್‌ಐ ಹಾಗೂ ಬಾಂಗ್ಲಾದೇಶದ ಉಗ್ರಗಾಮಿ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿದ್ದ ಎಂಟು ಮಂದಿ ಶಂಕಿತರನ್ನು ಪೊಲೀಸರು ಯಶಸ್ವಿ ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಉಡುಪು ಉತ್ಪಾದನಾ ಘಟಕಗಳಲ್ಲಿ ಅಡಗಿದ್ದ ಮಿಜಾನೂರ್ ರೆಹಮಾನ್, ಮೊಹಮ್ಮದ್ ಶಬತ್, ಉಮರ್, ಮೊಹಮ್ಮದ್ ಲಿಟನ್, ಮೊಹಮ್ಮದ್ ಶಾಹಿದ್ ಮತ್ತು ಮೊಹಮ್ಮದ್ ಉಜ್ಜಲ್ ಎಂಬ ಆರು ಮಂದಿಯನ್ನು ಸೆರೆಹಿಡಿಯಲಾಗಿದ್ದು, ಉಳಿದ ಇಬ್ಬರನ್ನು ಪಶ್ಚಿಮ ಬಂಗಾಳದಲ್ಲಿ ಬಂಧಿಸಲಾಗಿದೆ.

ಬಂಧಿತರಲ್ಲಿ ಬಾಂಗ್ಲಾದೇಶಿ ಪ್ರಜೆಗಳೂ ಸೇರಿದ್ದು, ಇವರು ಭಾರತದಲ್ಲಿ ಗುರುತಿಸಿಕೊಳ್ಳಲು ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸುತ್ತಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.ಬಂಧಿತ ಶಂಕಿತರಿಂದ ಎಂಟು ಮೊಬೈಲ್ ಫೋನ್‌ಗಳು ಮತ್ತು 16 ಸಿಮ್ ಕಾರ್ಡ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇವುಗಳನ್ನು ಸಂಚು ರೂಪಿಸಲು ಬಳಸಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಮಿಳುನಾಡು ಪೊಲೀಸರು ಶಂಕಿತರನ್ನು ಪ್ರಾಥಮಿಕ ವಿಚಾರಣೆ ನಡೆಸಿ ಹೆಚ್ಚಿನ ತನಿಖೆಗಾಗಿ ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದ್ದಾರೆ.

ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಸಂಘಟನೆಯು ದೆಹಲಿಯ ಐತಿಹಾಸಿಕ ಕೆಂಪು ಕೋಟೆ, ಚಾಂದನಿ ಚೌಕ್‌ನ ದೇವಾಲಯಗಳು ಸೇರಿದಂತೆ ದೇಶದ ಪ್ರಮುಖ ಧಾರ್ಮಿಕ ಕೇಂದ್ರಗಳ ಮೇಲೆ ದಾಳಿ ನಡೆಸಲು ಸಿದ್ಧತೆ ನಡೆಸಿತ್ತು ಎಂಬ ಗುಪ್ತಚರ ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾರ್ಯಾಚರಣೆ ನಡೆದಿದೆ. ದಾಳಿಯ ಸಂಚಿನ ಹಿಂದೆ ಸೇಡಿನ ಕಿಚ್ಚು ಇರುವುದು ಕಂಡುಬಂದಿದೆ. ಫೆಬ್ರವರಿ 6 ರಂದು ಪಾಕಿಸ್ತಾನದ ಇಸ್ಲಾಮಾಬಾದ್‌ನ ಮಸೀದಿಯೊಂದರಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದಲ್ಲಿ 31 ಮಂದಿ ಸಾವನ್ನಪ್ಪಿದ್ದರು. ಈ ದಾಳಿಯ ಹೊಣೆಯನ್ನು ಇಸ್ಲಾಮಿಕ್ ಸ್ಟೇಟ್ ಹೊತ್ತುಕೊಂಡಿತ್ತಾದರೂ, ಈ ಘಟನೆಗೆ ಸೇಡು ತೀರಿಸಿಕೊಳ್ಳಲು ಉಗ್ರ ಸಂಘಟನೆಗಳು ಭಾರತವನ್ನು ಗುರಿಯಾಗಿಸಿಕೊಂಡಿವೆ ಎಂದು ಮೂಲಗಳು ತಿಳಿಸಿವೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments