ಕ್ರೈಂ ಸ್ಟೋರಿಜಿಲ್ಲೆಸುದ್ದಿ

ಸಾಲ ತೀರಿಸಲು ಪಕ್ಕದ ಮನೆಯ ವೃದ್ಧೆಯ ಹತ್ಯೆ; 6 ಗಂಟೆಯಲ್ಲೇ ಹಂತಕನ ಸೆರೆ

ಬೆಂಗಳೂರು: ನೆಲಮಂಗಲದಲ್ಲಿ ನಡೆದಿದ್ದ ವೃದ್ಧೆಯ ಭೀಕರ ಕೊಲೆ ಪ್ರಕರಣವನ್ನು ಭೇದಿಸಿರುವ ಪೊಲೀಸರು, ಕೃತ್ಯ ಎಸಗಿದ ಆರು ಗಂಟೆಯಲ್ಲೇ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ನೆಲಮಂಗಲ ನಗರದ ಪೇಟೆ ಬೀದಿಯಲ್ಲಿ ವಾಸವಾಗಿದ್ದ 69 ವರ್ಷದ ಶೋಭಾ ಎಂಬುವವರೇ ಕೊಲೆಯಾದ ದುರ್ದೈವಿ. ಈ ಸಂಬಂಧ ಪಕ್ಕದ ಮನೆಯಲ್ಲೇ ವಾಸವಿದ್ದ ಶಿವಕುಮಾರ್ ಎಂಬಾತನನ್ನು ನೆಲಮಂಗಲ ಟೌನ್ ಪೊಲೀಸರು ಬಂಧಿಸಿದ್ದಾರೆ.

ವೃದ್ಧ ದಂಪತಿ ಮನೆಯಲ್ಲಿ ಒಬ್ಬರೇ ಇರುವುದನ್ನು ಗಮನಿಸಿದ ಆರೋಪಿ ಶಿವಕುಮಾರ್, ಮನೆಗೆ ನುಗ್ಗಿ ಶೋಭಾ ಅವರ ಕತ್ತು ಹಿಸುಕಿ ಹತ್ಯೆ ಮಾಡಿದ್ದಾನೆ. ಬಳಿಕ ಅವರ ಮೈಮೇಲಿದ್ದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದನು. ಪ್ರಕರಣದ ತನಿಖೆ ಕೈಗೆತ್ತಿಕೊಂಡ ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಆರೋಪಿಯ ಸುಳಿವು ಸಿಕ್ಕಿದೆ. ನೆಲಮಂಗಲ ಟೌನ್ ಸಿಪಿಐ ಭರತ್ ಗೌಡ ನೇತೃತ್ವದ ತಂಡವು ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಸೆರೆಹಿಡಿದಿದೆ.

ಪೊಲೀಸ್ ವಿಚಾರಣೆ ವೇಳೆ ಆರೋಪಿ ಶಿವಕುಮಾರ್ ತನ್ನ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ತನಗೆ ಮೈತುಂಬ ಸಾಲವಿದ್ದು, ಅದನ್ನು ತೀರಿಸಲು ಹಣದ ಅಗತ್ಯವಿತ್ತು. ಹೀಗಾಗಿ ಚಿನ್ನಾಭರಣ ದೋಚುವ ಉದ್ದೇಶದಿಂದಲೇ ಪಕ್ಕದ ಮನೆಯ ವೃದ್ಧೆಯನ್ನು ಹತ್ಯೆ ಮಾಡಲು ಸ್ಕೆಚ್ ಹಾಕಿದ್ದಾಗಿ ಆತ ಬಾಯ್ಬಿಟ್ಟಿದ್ದಾನೆ. ಕೇವಲ ಆರು ಗಂಟೆಯ ಅವಧಿಯಲ್ಲಿ ಕೊಲೆ ರಹಸ್ಯ ಭೇದಿಸಿದ ಪೊಲೀಸ್ ತಂಡದ ಕಾರ್ಯವೈಖರಿಗೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

Comments (0)

Your email address will not be published. Required fields are marked *

Back to top button