Wednesday, February 11, 2026
26.6 C
Bengaluru
Google search engine
LIVE
ಮನೆ#Exclusive News'ವಂದೇ ಮಾತರಂ' ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ;ಹೊಸ ಮಾರ್ಗಸೂಚಿ

‘ವಂದೇ ಮಾತರಂ’ ಹಾಡುವಾಗ ಎದ್ದು ನಿಲ್ಲುವುದು ಕಡ್ಡಾಯ;ಹೊಸ ಮಾರ್ಗಸೂಚಿ

ಕೇಂದ್ರ ಗೃಹ ಸಚಿವಾಲಯವು ಹೊರಡಿಸಿರುವ ಇತ್ತೀಚಿನ ಮಹತ್ವದ ಆದೇಶದ ಪ್ರಕಾರ, ಇನ್ನು ಮುಂದೆ ಸರ್ಕಾರಿ ಕಾರ್ಯಕ್ರಮಗಳಲ್ಲಿ ರಾಷ್ಟ್ರಗೀತೆ ‘ಜನಗಣಮನ’ಕ್ಕೆ ನೀಡುವಷ್ಟೇ ಗೌರವ ಮತ್ತು ಪ್ರಾಮುಖ್ಯತೆಯನ್ನು ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ಗೂ ನೀಡಲಾಗುತ್ತದೆ. ಈ ಹೊಸ ಶಿಷ್ಟಾಚಾರದ ಅನ್ವಯ, ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ ಆರು ಚರಣಗಳನ್ನು ಹಾಡುವುದು ಅಥವಾ ನುಡಿಸುವುದು ಕಡ್ಡಾಯವಾಗಿದೆ. ಸುಮಾರು 3.10 ನಿಮಿಷಗಳ ಕಾಲ ನಡೆಯುವ ಈ ಗೀತೆಯ ಗಾಯನ ಅಥವಾ ವಾದನದ ಸಂದರ್ಭದಲ್ಲಿ ಸಭಿಕರೆಲ್ಲರೂ ಕಡ್ಡಾಯವಾಗಿ ಎದ್ದು ನಿಂತು ಗೌರವ ಸೂಚಿಸಬೇಕು ಎಂಬ ನಿಯಮವನ್ನು ಜಾರಿಗೆ ತರಲಾಗಿದೆ.

ಈ ಗೀತೆಯನ್ನು ನುಡಿಸುವ ಮೊದಲು ಪ್ರೇಕ್ಷಕರಿಗೆ ಸೂಚನೆ ನೀಡುವ ಉದ್ದೇಶದಿಂದ ವಿಶೇಷ ‘ಡ್ರಮ್ ರೋಲ್’ ಬಳಸುವ ಕ್ರಮವನ್ನು ಪರಿಚಯಿಸಲಾಗಿದೆ. ಡ್ರಮ್ ಸದ್ದು ನಿಧಾನವಾಗಿ ಪ್ರಾರಂಭವಾಗಿ ಗರಿಷ್ಠ ಮಟ್ಟವನ್ನು ತಲುಪಿ, ನಂತರ ಏಳನೇ ಬೀಟ್ ತನಕ ಕೇಳಿಸುವಂತೆ ಕಡಿಮೆ ಪಿಚ್‌ಗೆ ಮರಳುತ್ತದೆ. ಇದಾದ ಒಂದು ಬೀಟ್ ವಿರಾಮದ ನಂತರ ಗೀತೆಯನ್ನು ಆರಂಭಿಸಲಾಗುತ್ತದೆ. ಈ ಹೊಸ ಶಿಷ್ಟಾಚಾರವು ರಾಷ್ಟ್ರಪತಿಗಳು ಮತ್ತು ರಾಜ್ಯಪಾಲರ ಉಪಸ್ಥಿತಿಯ ಕಾರ್ಯಕ್ರಮಗಳು, ಧ್ವಜಾರೋಹಣ ಸಂದರ್ಭಗಳು, ರಾಷ್ಟ್ರೀಯ ಪ್ರಶಸ್ತಿ ಪ್ರದಾನ ಸಮಾರಂಭಗಳು ಹಾಗೂ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ರಾಷ್ಟ್ರವನ್ನುದ್ದೇಶಿಸಿ ನಡೆಯುವ ಭಾಷಣಗಳ ವೇಳೆ ಕಡ್ಡಾಯವಾಗಿ ಅನ್ವಯವಾಗುತ್ತದೆ. ಆದರೆ, ಸಾಕ್ಷ್ಯಚಿತ್ರ ಅಥವಾ ಚಿತ್ರಗಳ ಪ್ರದರ್ಶನದ ನಡುವೆ ಈ ಗೀತೆ ಬಂದಾಗ ಎದ್ದು ನಿಲ್ಲುವ ಅಗತ್ಯವಿರುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ವಂದೇ ಮಾತರಂ ಗೀತೆಯ 150ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಸರ್ಕಾರವು ಈ ನಿರ್ಧಾರವನ್ನು ತೆಗೆದುಕೊಂಡಿದ್ದು, ಎಲ್ಲಾ ಶಾಲೆಗಳಲ್ಲೂ ದಿನದ ಆರಂಭದಲ್ಲಿ ರಾಷ್ಟ್ರಗೀತೆಯ ಜೊತೆಗೆ ವಂದೇ ಮಾತರಂ ಅನ್ನು ಹಾಡಲು ಸಲಹೆ ನೀಡಿದೆ. ಈ ದೇಶಭಕ್ತಿ ಗೀತೆಯ ಹಿಂದೆ ಒಂದು ರೋಚಕ ಇತಿಹಾಸವಿದೆ. 1875ರಲ್ಲಿ ಬಂಕಿಮ್ ಚಂದ್ರ ಚಟ್ಟೋಪಾಧ್ಯಾಯರು ಬ್ರಿಟಿಷರ ‘ಸೇವ್ ದಿ ಕ್ವೀನ್’ ಹಾಡಿಗೆ ಪ್ರತಿಯಾಗಿ ಈ ಗೀತೆಯನ್ನು ರಚಿಸಿದರು. ತಾಯಿನಾಡನ್ನು ದೈವಿಕವಾಗಿ ಆರಾಧಿಸುವ ಈ ಹಾಡು 1882ರಲ್ಲಿ ಅವರ ‘ಆನಂದಮಠ’ ಕಾದಂಬರಿಯ ಭಾಗವಾಯಿತು. 1896ರ ಕೋಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ ಮೊದಲ ಬಾರಿಗೆ ಸಾರ್ವಜನಿಕವಾಗಿ ಹಾಡಲ್ಪಟ್ಟ ಈ ಗೀತೆ, ಭಾರತೀಯ ಸ್ವಾತಂತ್ರ್ಯ ಹೋರಾಟಗಾರರ ಅಚ್ಚುಮೆಚ್ಚಿನ ಘೋಷವಾಕ್ಯವಾಗಿ ದೇಶಾದ್ಯಂತ ದೇಶಪ್ರೇಮದ ಕಿಚ್ಚನ್ನು ಹಚ್ಚಿತ್ತು . ಆದ್ದರಿಂದ ರಾಷ್ಟ್ರಗೀತೆಗೂ ಮುನ್ನ ವಂದೇ ಮಾತರಂನ 6 ಚರಣಗಳನ್ನು ಹಾಡುವುದು ಕಡ್ಡಾಯ ಎಂದು ಘೋಷಿಸಲಾಗಿದೆ.

RELATED ARTICLES

ಪ್ರತ್ಯುತ್ತರ ಬಿಟ್ಟು

ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ನಮೂದಿಸಿ!
ದಯವಿಟ್ಟು ನಿಮ್ಮ ಹೆಸರನ್ನು ಇಲ್ಲಿ ನಮೂದಿಸಿ

Most Popular

Recent Comments