ರಾಜಕೀಯರಾಜ್ಯಸುದ್ದಿ

ಸಿದ್ದರಾಮಯ್ಯ ಸುಳ್ಳು ಹೇಳುವುದನ್ನು ನಿಲ್ಲಿಸಲಿ – ಸಿ.ಟಿ. ರವಿ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಚರಮಸೀಮೆ ತಲುಪಿದ್ದು, ಜನರ ವಿಶ್ವಾಸವನ್ನು ಸಂಪೂರ್ಣವಾಗಿ ಕಳೆದುಕೊಂಡಿದೆ ಎಂದು ಬಿಜೆಪಿ ನಾಯಕ ಹಾಗೂ ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಬಕಾರಿ ಇಲಾಖೆಯ ಹಗರಣ ಮತ್ತು ಅನುದಾನದ ಜಟಾಪಟಿ ಕುರಿತು ಸರ್ಕಾರದ ವಿರುದ್ಧ ಹರಿಹಾಯ್ದರು. ಅಬಕಾರಿ ಇಲಾಖೆಯಲ್ಲಿ ‘ಮಂತ್ಲಿ ಮನಿ’ ದಂಧೆ ಬಹಿರಂಗವಾದಾಗಲೇ ಸಚಿವರನ್ನು ವಜಾ ಮಾಡಬೇಕಿತ್ತು ಎಂದು ಒತ್ತಾಯಿಸಿದ ಸಿ.ಟಿ. ರವಿ, “ಈ ಇಡೀ ಸರ್ಕಾರವೇ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಖ್ಯಮಂತ್ರಿಗಳೇ ‘ನಾನು ಇನ್ನೆಷ್ಟು ದಿನ ಇರುತ್ತೇನೋ ಗೊತ್ತಿಲ್ಲ, ಇರುವಷ್ಟು ದಿನ ಚೀಲ ತುಂಬಿಸಿಕೊಳ್ಳೋಣ’ ಎಂಬ ಮನಸ್ಥಿತಿಯಲ್ಲಿದ್ದಾರೆ,” ಎಂದು ಲೇವಡಿ ಮಾಡಿದರು.

ಸದನದಲ್ಲಿ ನರೇಗಾ ಕಾಯ್ದೆಗೆ ರಾಮನ ಹೆಸರು ಸೇರಿಸುವ ಕುರಿತಾದ ಚರ್ಚೆಗೆ ಪ್ರತಿಕ್ರಿಯಿಸಿದ ಅವರು, “ಗಾಂಧೀಜಿಯವರ ಹೆಸರಿನ ಜೊತೆ ರಾಮನ ಹೆಸರು ಸೇರಿಸುವುದರಲ್ಲಿ ತಪ್ಪೇನಿದೆ? ಗಾಂಧೀಜಿಯವರಿಗೆ ಪ್ರೇರಣೆಯೇ ಶ್ರೀರಾಮಚಂದ್ರ. ವಿರೋಧ ಮಾಡುವುದಕ್ಕೆ ಅಲ್ಲಿ ಯಾವುದೇ ಅಂಶಗಳಿಲ್ಲದಿದ್ದರೂ ಕಾಂಗ್ರೆಸ್ ನಾಯಕರು ವಿನಾಕಾರಣ ಬಾಯಿ ಬಡಿದುಕೊಳ್ಳುತ್ತಿದ್ದಾರೆ,” ಎಂದು ಟೀಕಿಸಿದರು.

ಕೇಂದ್ರದ ಅನುದಾನದ ವಿಚಾರದಲ್ಲಿ ಸಿಎಂ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ ಅವರು ಅಂಕಿ-ಅಂಶಗಳನ್ನು ತೆರೆದಿಟ್ಟರು. “ಯುಪಿಎ ಅವಧಿಯ 10 ವರ್ಷಗಳಲ್ಲಿ ರಾಜ್ಯಕ್ಕೆ ಬಂದಿದ್ದು ಕೇವಲ 81,791 ಕೋಟಿ ರೂ. ಆದರೆ ಮೋದಿ ಸರ್ಕಾರ ಕಳೆದ 10 ವರ್ಷಗಳಲ್ಲಿ 3,21,974 ಕೋಟಿ ರೂ. ನೀಡಿದೆ. ಈ ವರ್ಷವೂ 57,876 ಕೋಟಿ ತೆರಿಗೆ ಹಂಚಿಕೆಯಲ್ಲಿ ಈಗಾಗಲೇ 34,154 ಕೋಟಿ ಬಿಡುಗಡೆಯಾಗಿದೆ. ಸಿದ್ದರಾಮಯ್ಯ ಅವರು ಸುಳ್ಳು ಹರಡುವುದನ್ನು ಮೊದಲು ನಿಲ್ಲಿಸಲಿ, ಎಂದು ಗುಡುಗಿದರು. ಸರ್ಕಾರಕ್ಕೆ ಯಾವುದೇ ನೈತಿಕತೆ ಇಲ್ಲ, ರಾಜ್ಯಪಾಲರಿಂದ ಏನೇ ಓದಿಸಿದರೂ ಜನರ ಮನಸ್ಸಿನಲ್ಲಿರುವ ಸರ್ಕಾರದ ವಿರುದ್ಧದ ಆಕ್ರೋಶವನ್ನು ಬದಲಿಸಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟರು.

Comments (0)

Your email address will not be published. Required fields are marked *

Back to top button