bengaluruಕ್ರೈಂ ಸ್ಟೋರಿ

ಶಾಲೆಯಲ್ಲಿ ಭೀಕರ ಅಗ್ನಿ ಅವಘಡ, ತಪ್ಪಿದ ದುರಂತ!

Fire incident in Chitrakoota school Nagadevanahalli

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಂದು ಬೆಳಗ್ಗೆ ಭೀಕರ ಅಗ್ನಿ ಅವಘಡವೊಂದು ಸಂಭವಿಸಿದೆ. ಕೆಂಗೇರಿ ಸಮೀಪದ ನಾಗದೇವನಹಳ್ಳಿಯಲ್ಲಿರುವ ಪ್ರಸಿದ್ಧ ಚಿತ್ರಕೂಟ ಕೌಶಲ್ಯ ಶಾಲೆಯಲ್ಲಿ ತರಗತಿಗಳು ನಡೆಯುತ್ತಿದ್ದ ವೇಳೆಯೇ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದಾಗಿ ಕಟ್ಟಡಕ್ಕೆ ಬೆಂಕಿ ಹೊತ್ತಿಕೊಂಡಿದೆ. ಅದೃಷ್ಟವಶಾತ್ ಶಿಕ್ಷಕರು ಹಾಗೂ ಶಾಲಾ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ ನೂರಾರು ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಶಾಲೆಯಲ್ಲಿ 2 ಸಾವಿರ ಚಿತ್ರಕೂಟರು!


ಚಿತ್ರಕೂಟ ಶಾಲೆಯಲ್ಲಿ ಸುಮಾರು 2,000ಕ್ಕೂ ಹೆಚ್ಚು ವಿದ್ಯಾರ್ಥಿಗಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇಂದು ಬೆಳಗ್ಗೆ 9 ಗಂಟೆಗೆ ಎಂದಿನಂತೆ ಶಾಲೆ ಆರಂಭವಾಗಿತ್ತು. ಆದರೆ, ಬೆಳಗ್ಗೆ 10:15ರ ಸುಮಾರಿಗೆ ಶಾಲಾ ಕಟ್ಟಡದ 4ನೇ ಮಹಡಿಯಲ್ಲಿ ಇದ್ದಕ್ಕಿದ್ದಂತೆ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಕ್ಷಣಾರ್ಧದಲ್ಲೇ ಬೆಂಕಿಯ ಕೆನ್ನಾಲಿಗೆ ಪಕ್ಕದ 3ನೇ ಮಹಡಿಗೂ ವ್ಯಾಪಿಸಿದೆ. ಕಟ್ಟಡದಿಂದ ದಟ್ಟ ಹೊಗೆ ಹಾಗೂ ಬೆಂಕಿ ಹೊರಬರುತ್ತಿದ್ದಂತೆ ಎಚ್ಚೆತ್ತ ಶಾಲಾ ಸಿಬ್ಬಂದಿ, ತಕ್ಷಣವೇ ಕಾರ್ಯಪ್ರವೃತ್ತರಾಗಿ ಎಲ್ಲಾ ತರಗತಿಗಳಲ್ಲಿದ್ದ ಮಕ್ಕಳನ್ನು ಸುರಕ್ಷಿತವಾಗಿ ಶಾಲಾ ಮೈದಾನ ಹಾಗೂ ಹೊರಗೆ ಕಳುಹಿಸಿದ್ದಾರೆ.

ಪೋಷಕರ ಸಭೆ ನಡೆಯುತ್ತಿದ್ದಾಗಲೇ ಅವಘಡ!
ವಿಶೇಷವೆಂದರೆ, ಘಟನೆ ನಡೆದ ಸಮಯದಲ್ಲಿ ಶಾಲೆಯ ಒಳಗೆ 50ಕ್ಕೂ ಹೆಚ್ಚು ಮಕ್ಕಳ ಪೋಷಕರ ಸಭೆ (Parents-Teacher Meeting) ನಡೆಯುತ್ತಿತ್ತು. ಅವಘಡದ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಪೋಷಕರು ತೀವ್ರ ಆತಂಕದಿಂದ ಶಾಲೆಯತ್ತ ಧಾವಿಸಿದ್ದು, ಶಾಲಾ ಗೇಟ್ ಮುಂಭಾಗದಲ್ಲಿ ಜಮಾಯಿಸಿದ್ದರು. ಮಕ್ಕಳ ಸುರಕ್ಷತೆಯನ್ನು ಖಚಿತಪಡಿಸಿಕೊಂಡ ಬಳಿಕವಷ್ಟೇ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ.

ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ: ಘಟನಾ ಸ್ಥಳಕ್ಕೆ ಕೆಂಗೇರಿ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ತಕ್ಷಣವೇ ಧಾವಿಸಿದ್ದಾರೆ. ಒಟ್ಟು 4 ಅಗ್ನಿಶಾಮಕ ವಾಹನಗಳ ಮೂಲಕ ಸಿಬ್ಬಂದಿ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಸದ್ಯ ಯಾವುದೇ ಪ್ರಾಣಹಾನಿ ಅಥವಾ ಗಾಯಗೊಂಡ ವರದಿಯಾಗಿಲ್ಲ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

#BengaluruFireAccident #KengeriSchoolFire #ChitrakootaSchool #ShortCircuit #FireAccident #BengaluruNews #BreakingNews #FreedomTV #SchoolSafety #FireFighters #KengeriPolice #Nagadevanahalli #KarnatakaNews

Comments (0)

Your email address will not be published. Required fields are marked *

Back to top button