ಬೆಂಗಳೂರಿನಲ್ಲಿ ಕಳೆಕಟ್ಟಿದ ಮಾವು ಮತ್ತು ಹಲಸಿನ ಮೇಳ

ಮೇಳದಲ್ಲಿ ಬಾದಾಮಿ, ಮಲ್ಲಿಕಾ, ಸೆಂದೂರಾ, ರಸಪೂರಿಗೆ ನೂಕುನುಗ್ಗಲು!

ಬೆಂಗಳೂರು: ಇಂದಿನಿಂದ 10 ದಿನಗಳ ಕಾಲ ಕಬ್ಬನ್ ಪಾರ್ಕ್ ಮತ್ತು ಲಾಲ್ ಬಾಗ್ ನಲ್ಲಿ ಮಾವು ಮೇಳ ನಡೆಯುತ್ತಿದೆ. ಇಲ್ಲಿ ರುಚಿಕರವಾದ ಬಾಯಲ್ಲಿ ನೀರೂರಿಸುವ ವಿವಿಧ ತಳಿಯ ಬಾದಾಮಿ, ಮಲ್ಲಿಕಾ, ಸೆಂದೂರಾ, ರಸಪೂರಿ ಮಾವು ದೊರೆಯುತ್ತಿದ್ದು ಗ್ರಾಹಕರು ತಂಡೋಪ ತಂಡವಾಗಿ ಬರುತ್ತಿರುವುದು ಉದ್ಯಾನನಗರಿಗೆ ಶುಭ ಸಂಗತಿಯೇ ಸರಿ. ಗ್ರಾಹಕರಿಗೆ ಕೈಗೆಟುಕುವ ದರದಲ್ಲಿ ಮಾವು ಹಾಗೂ ಹಲಸು ಲಭ್ಯವಿದ್ದು ಈ ಮೇಳವನ್ನು ಜನತೆ ಸದ್ಬಳಕೆ ಮಾಡಿಕೊಂಡು ಆರೋಗ್ಯಕರ ಹಣ್ಣು ಸೇವಿಸಬೇಕು ಎಂದು ಸಲಹೆ ನೀಡಿದರು.
ತೋಟಗಾರಿಕೆ ಇಲಾಖೆ ಮತ್ತು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಸಹಯೋಗದಲ್ಲಿ ನಡೆಯುತ್ತಿರುವ ಮೇಳಕ್ಕೆ ಇಂದು ರಾಜ್ಯ ಮಾವು ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಡಾ.ಬಿ.ಸಿ. ಮುದ್ದುಗಂಗಾಧರ್ ಚಾಲನೆ ನೀಡಿದರು. ಮೇಳದಲ್ಲಿ ಸಿಗುವ ರಾಸಾಯನಿಕ ಮುಕ್ತ ತಾಜಾ ಮಾವಿನ ಹಣ್ಣು ಮತ್ತು ಹಲಸನ್ನು ಪ್ರಜೆಗಳು ಸೇವಿಸಲು ಮುಂದಾಗಬೇಕೆಂದು ಹೇಳಿದರು. ಮೇಳದಲ್ಲಿ ಕೋಲಾರ, ರಾಮನಗರ, ಮಂಡ್ಯ, ತುಮಕೂರು ಇತ್ಯಾದಿ ಭಾಗಗಳ ಮಾವು ಬೆಳೆಗಾರರು ಸುಮಾರು 50ಕ್ಕೂ ಹೆಚ್ಚು ಮಳಿಗೆಗಳನ್ನು ಆರಂಭಿಸಿದ್ದು, ಬಾದಾಮಿ, ಮಲ್ಲಿಕಾ, ಸೆಂದೂರಾ, ರಸಪೂರಿ, ಕರಿ ಇಶಾಡ್ ಸೇರಿದಂತೆ ಮತ್ತಿತರ ಹಣ್ಣುಗಳು ಕಣ್ಣುಕುಕ್ಕುತ್ತಿದ್ದವು. ರುದ್ರಾಕ್ಷಿ, ಶಿವರಾತ್ರಿ, ಏಕಾದಶಿ, ತೂಬಗೆರೆ ಮತ್ತು ಲಾಲ್ ಬಾಗ್ ಮಧುರ ಎಂಬ ಹಲಸು ಹಣ್ಣುಗಳು ಸಹ ಗ್ರಾಹಕರ ಕಣ್ಣಿಗೆ ಬಿದ್ದವು. ಭೌಗೋಳಿಕ ಮನ್ನಣೆ ಪಡೆದಿರುವ ಉತ್ತರ ಕನ್ನಡದ ಕರಿ ಇಶಾಡ್ ಮಾವು, ಮಿಡಿ ಉಪ್ಪಿನಕಾಯಿ, ಸೇರಿದಂತೆ ವಿವಿಧ ತೋಟಗಾರಿಕಾ ಉತ್ಪನ್ನಗಳು ಇಲ್ಲಿ ಲಭ್ಯವಿರುವುದು ವಿಶೇಷ. ವಿಶೇಷವೆಂದರೆ ಇಲ್ಲಿ ಮಧ್ಯವರ್ತಿಗಳ ಕಾಟವಿಲ್ಲ. ಈ ಮೇಳ Direct Farmers to Customers ವ್ಯಾಪಾರ ಸೂತ್ರವನ್ನು ಹೊಂದಿದೆ.
#MangoMela2026 #LalbaghMangoMela #CubbonPark #BengaluruEvents #MangoAndJackfruitMela #NammaBengaluru #ChemicalFreeMangoes #FarmersToConsumers #HorticultureDepartment




